Asianet Suvarna News Asianet Suvarna News

ಜಾತಿಗಣತಿ ಬಹಿರಂಗವಾದರೆ ಎಲ್ಲರೂ ಒಪ್ತಾರೆ: ಜಯಪ್ರಕಾಶ್‌ ಹೆಗ್ಡೆ

ವರದಿ ಬಹಿರಂಗವಾದರೆ, ಅದನ್ನು ವಿರೋಧಿಸುವವರು ಸೇರಿದಂತೆ ಎಲ್ಲ ಸಮುದಾಯದವರು ಈ ವರದಿಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಏಕೆಂದರೆ ಲಕ್ಷಾಂತರ ಶಿಕ್ಷಕರು ಅನೇಕ ಪ್ರಶ್ನಾವಳಿ ಇಟ್ಟುಕೊಂಡು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿರುವ ಮಾಹಿತಿ ಜೊತೆಗೆ ಆಯೋಗ ರಚಿಸಿರುವ ತಜ್ಞರ ಸಮಿತಿ ಸಲಹೆ ಆಧರಿಸಿ ವರದಿ ನೀಡಲಾಗಿದೆ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ 

Jayaprakash Hegde Talks Over Caste Census Report in Karnataka grg
Author
First Published Mar 7, 2024, 5:47 AM IST

ಎಂ.ಆರ್. ಚಂದ್ರಮೌಳಿ

ಬೆಂಗಳೂರು(ಮಾ.07): ತೀವ್ರ ಕುತೂಹಲ, ನಿರೀಕ್ಷೆ ಮೂಡಿಸಿರುವ ಹಾಗೂ ರಾಜಕೀಯವಾಗಿ ಸಂಚಲನ ಮೂಡಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ಕಡೆಗೂ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಸಲ್ಲಿಕೆಯಾಗುತ್ತಿದ್ದಂತೆಯೇ ನಿರೀಕ್ಷಿಸಿದಂತೆ ಸಮಾಜದ ವಿವಿಧ ವರ್ಗಗಳು ಪರ ಹಾಗೂ ವಿರುದ್ಧ ನಿಲುವು ತಳೆದಿವೆ. ಹಿಂದುಳಿದ ವರ್ಗ ಹಾಗೂ ದಲಿತರು ಈ ಜಾತಿ ವರದಿ ಆಧರಿಸಿಯೇ ದಲಿತ ಮುಖ್ಯಮಂತ್ರಿ ವಿಚಾರವನ್ನು ಮತ್ತೆ ಪ್ರಸ್ತಾಪಿಸತೊಡಗಿದ್ದಾರೆ. ಮೇಲ್ವರ್ಗಗಳು ಈ ವರದಿಯೇ ಅವೈಜ್ಞಾನಿಕ ಎಂದು ವಾದಿಸಿವೆ. ಇಂತಹ ವರದಿ ಸಿದ್ಧಪಡಿಸಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಮಾತ್ರ ಇದು ಸಂಪೂರ್ಣ ವೈಜ್ಞಾನಿಕ ವರದಿ ಎಂದೇ ಪ್ರತಿಪಾದಿಸುತ್ತಿದ್ದಾರೆ. ಅಲ್ಲದೆ, ವರದಿ ಅಂಶಗಳು ಬಹಿರಂಗಗೊಂಡರೆ ಎಲ್ಲ ವರ್ಗಗಳು ವರದಿಯನ್ನು ಒಪ್ಪುತ್ತವೆ ಎಂದು ವಿಶ್ವಾಸದಿಂದ ಹೇಳುತ್ತಾರೆ. ಈ ವಿಶ್ವಾಸಕ್ಕೆ ಕಾರಣವೇನು? ಅಸಲಿಗೆ ಈ ವರದಿಯಲ್ಲಿ ಏನಿದೆ? ‍‍‍ವರದಿ ವೈಜ್ಞಾನಿಕವೇ? ಇಷ್ಟಕ್ಕೂ ಈ ವರದಿ ಜಾರಿಯಾಗುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಜಯಪ್ರಕಾಶ್ ಹೆಗ್ಡೆ.

ಜಾತಿ ವರದಿ ಸಲ್ಲಿಕೆಯಾಗಿದೆ. ಆದರೆ, ಸಮಾಜದ ವಿವಿಧ ವರ್ಗಗಳು ತೀವ್ರ ವಿರೋಧ ಮಾಡುತ್ತಿವೆಯಲ್ಲ?

- ವರದಿ ಬಹಿರಂಗವಾದರೆ, ಅದನ್ನು ವಿರೋಧಿಸುವವರು ಸೇರಿದಂತೆ ಎಲ್ಲ ಸಮುದಾಯದವರು ಈ ವರದಿಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಏಕೆಂದರೆ ಲಕ್ಷಾಂತರ ಶಿಕ್ಷಕರು ಅನೇಕ ಪ್ರಶ್ನಾವಳಿ ಇಟ್ಟುಕೊಂಡು ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಿರುವ ಮಾಹಿತಿ ಜೊತೆಗೆ ಆಯೋಗ ರಚಿಸಿರುವ ತಜ್ಞರ ಸಮಿತಿ ಸಲಹೆ ಆಧರಿಸಿ ವರದಿ ನೀಡಲಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವಧಿ ವಿಸ್ತರಣೆ: ಸರ್ಕಾರದ ಕೈ ಸೇರಲಿದೆ ಜಾತಿಗಣತಿ ವರದಿ

ವರದಿಯಿಂದಾಗಿ ವಿವಿಧ ಜಾತಿಗಳಿಗೆ ಈಗಿರುವ ಮೀಸಲಾತಿಯ ಪ್ರಮಾಣದಲ್ಲಿ ವ್ಯತ್ಯಾಸ ಆಗುತ್ತದೆಯೇ?
- ಕೊಟ್ಟಿರುವ ವರದಿ ಬಗ್ಗೆ ಏನೂ ಹೇಳುವುದಿಲ್ಲ. ಆದರೆ ಸಹಜವಾಗಿ ಜನಸಂಖ್ಯೆಗೆ ಅನುಗುಣವಾಗಿ ವ್ಯತ್ಯಾಸ ಆಗುತ್ತದೆ.

- ಈ ವರದಿಯ ಶಿಫಾರಸು ಆಧರಿಸಿ ಹಾಲಿ ಮೀಸಲಾತಿ ಪ್ರಮಾಣದಲ್ಲಿ ಸರ್ಕಾರ ಹೆಚ್ಚು ಕಡಿಮೆ ಮಾಡಬಹುದೇ?
ಇದು ಸರ್ಕಾರಕ್ಕೆ ಬಿಟ್ಟ ವಿಷಯ, ಅದನ್ನು ಕ್ಯಾಬಿನೆಟ್‌ನಲ್ಲಿ ಇಟ್ಟು ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ಭಿನ್ನಾಭಿಪ್ರಾಯವಿದ್ದರೆ ಆಯೋಗದ ಸಲಹೆ ಕೇಳಬಹುದು.
ಶಿಫಾರಸು ಬದಿಗೊತ್ತಿ ಮೀಸಲಾತಿ ಪ್ರಮಾಣ ಬದಲಾಯಿಸಲು ಸರ್ಕಾರಕ್ಕೆ ಅವಕಾಶವಿದೆಯೇ?

-ಈ ಹಿಂದೆ ಸರ್ಕಾರ ಮಾಡಿದ್ದೂ ಇದೆ, ಆದರೆ ಯಾರು ಇದನ್ನು ಪ್ರಶ್ನಿಸದಿದ್ದರೆ ಅಂಗೀಕಾರವಾಗುತ್ತದೆ ಅಷ್ಟೇ.

ವರದಿ ಜಾರಿ ತರುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿರಾ?

-ನಮಗೆ ವರದಿ ಕೊಟ್ಟ ಮಾತ್ರಕ್ಕೆ ತೃಪ್ತಿ ಬರುವುದಿಲ್ಲ. ಕೊಟ್ಟ ವರದಿ ಜಾರಿಗೆ ಬಂದಾಗ ಮಾತ್ರ ಸಮಾಧಾನ ಆಗುತ್ತದೆ. ಹೀಗಾಗಿ ನಾವು ಫಾಲೋಅಪ್ ಮಾಡಬೇಕಾಗುತ್ತದೆ. ವರದಿ ಕೊಟ್ಟೆ, ನಮ್ಮ ಕೆಲಸ ಮಾಡಿದ ತೃಪ್ತಿ ಸಿಗಬಹುದು. ಆದರೆ ಆದ ಲಾಭವೇನು, ನಮಗೇನೂ ನಷ್ಟ ಇಲ್ಲ. ಆದರೆ ಆ ಮಕ್ಕಳಿಗೆ ನಷ್ಟವಾಗುತ್ತದಲ್ಲ.

ವರದಿ ರೂಪಿಸುವಾಗ ಈ ಪರ-ವಿರೋಧದ ಒತ್ತಡ ನಿಮ್ಮ ಮೇಲೆ ಇತ್ತಾ?

- ಹಾಗೇನೂ ಇರಲಿಲ್ಲ. ವಾಸ್ತವಾಂಶಗಳು, ಹಿಂದಿನ ಸಮೀಕ್ಷೆಯ ವರದಿಗಳು, ಮಾಹಿತಿಗಳು ಇದ್ದ ಕಾರಣ ಒತ್ತಡ ಇರಲಿಲ್ಲ. ನಮ್ಮ ಕರ್ತವ್ಯ ನಾವು ಮಾಡಿದ್ದೇವೆ ಅಷ್ಟೇ. ಹಿಂದಿನ ಸಮೀಕ್ಷೆಯ ದತ್ತಾಂಶಗಳ ಇದ್ದವು, ಅದರ ಆಧಾರದ ಮೇಲೆ ಇಂಡಿಕೇಟರ್‌ ನೀಡಲಾಗಿತ್ತು, ವೇಯ್ಟೇಜ್‌ ನೀಡಿ ವರದಿ ನೀಡಿದ್ದೇವೆ. ಜೊತೆಗೆ ತಜ್ಞರ ಸಮಿತಿ ಇತ್ತು. ಹಾಗಾಗಿ ಒತ್ತಡ, ಸವಾಲು ಅನಿಸಲಿಲ್ಲ.

ಆಯೋಗದ ಅಧ್ಯಕ್ಷರಾಗಿ 39 ತಿಂಗಳ ಅಧಿಕಾರಾವಧಿಯನ್ನು ಹಿಂದಿರುಗಿ ನೋಡಿದಾಗ ಒಟ್ಟಾರೆ ತೃಪ್ತಿ ಇದೆಯೇ?

- ಖಂಡಿತವಾಗಿ ತೃಪ್ತಿ ಇದೆ. ಬಹಳ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು. ಪ್ರಮುಖವಾಗಿ ಅನೇಕ ಚಿಕ್ಕ ಪುಟ್ಟ ಜಾತಿಗಳಿಗೆ ತಾವು ಮೀಸಲಾತಿ ಪಟ್ಟಿಯಲ್ಲಿ ಸೇರಿದ್ದೇವೆ ಎಂಬುದೇ ಗೊತ್ತಿರಲಿಲ್ಲ. ಕೆಲವರಿಗೆ ಮೀಸಲಾತಿಯಲ್ಲಿ ಸೇರಿಸಬೇಕೆಂಬುದೇ ಗೊತ್ತಿರಲಿಲ್ಲ. ಹಾಗಾಗಿ ಬಹುತೇಕ ಎಲ್ಲ ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗುಣಮಟ್ಟ ಅಧ್ಯಯನ ಮಾಡಿ ಪ್ರತ್ಯೇಕ ವರದಿ ಮಾಡಲಾಗಿದೆ.

ಆಯೋಗದಿಂದ ಸರ್ಕಾರಕ್ಕೆ ಸಲ್ಲಿಸಿದ ವರದಿ ಎಷ್ಟು? ಸರ್ಕಾರ ಎಷ್ಟು ವರದಿ ಜಾರಿಗೆ ತಂದಿದೆ? ಇನ್ನೂ ಬಾಕಿ ವರದಿ ಎಷ್ಟಿದೆ?

- ಸದ್ಯ ಸಲ್ಲಿಸಿರುವ ವರದಿ ಸೇರಿದಂತೆ ಸುಮಾರು 57 ವರದಿಗಳನ್ನು ನೀಡಿದ್ದೇವೆ. ಒಂದೊಂದು ಜಾತಿಗೆ ಪ್ರತ್ಯೇಕವಾದ ವರದಿ ನೀಡಿದ್ದೇವೆ. ಕೆಲವು ವರದಿಯನ್ನು ಹಿಂದಿನ ಸರ್ಕಾರ ಜಾರಿ ಮಾಡಿದೆ. ಆದರೆ ಹಿಂದೆ ಸರ್ಕಾರ 2ಬಿ ಮೀಸಲಾತಿಯನ್ನು ತೆಗೆದು ಹಾಕಿತು. ಇದು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರಿಂದ ಎಲ್ಲದಕ್ಕೂ ತಡೆಯಾಯಿತು. ಆದರೆ ಈ ಮೀಸಲಾತಿ ಕೆಲವು ಜಾತಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದ್ದರೆ, ಉಳಿದ ಜಾತಿಗಳಿಗೆ ಸೌಲಭ್ಯ ಸಿಗುತ್ತಿತ್ತು. ಹೀಗಾಗಿ ಇತ್ತೀಚೆಗೆ ನೀಡಿದ ವರದಿಯಲ್ಲಿ ಆ ಎಲ್ಲ ಜಾತಿಗಳನ್ನು ಸೇರ್ಪಡೆ ಮಾಡಿಕೊಂಡಿದ್ದೇವೆ. ಉಳಿದಂತೆ ಬಹುತೇಕ ಎಲ್ಲ ವರದಿ ನೀಡಿದ್ದೇವೆ. ಒಂದೆರಡು ವರದಿ ಮಾತ್ರ ಇದೆ ಅಷ್ಟೇ.

ಕಾಲ ಕಾಲಕ್ಕೆ ಆಯೋಗ ಸಲ್ಲಿಸುವ ವರದಿಗಳೆಲ್ಲ ಅನುಷ್ಠಾನಕ್ಕೆ ಬರುತ್ತಾ ಇವೆಯೇ?

-ನನ್ನ ನೋವೇನೆಂದರೆ, ಆಯೋಗ ಕೊಟ್ಟಿರುವ ಅನೇಕ ವರದಿಗಳು ಇನ್ನೂ ಜಾರಿಗೆ ಬಂದಿಲ್ಲ. ಸರ್ಕಾರಿ ಆದೇಶ ಆಗಿಯೇ ಇಲ್ಲ. ಅದೆಲ್ಲವನ್ನೂ ಈಗಿನ ವರದಿಯಲ್ಲಿ ಸೇರಿಸಿದ್ದೇವೆ. ಕೊಟ್ಟ ವರದಿಗಳು ತಿರಸ್ಕಾರಗೊಂಡ ಪ್ರಕರಣ ಬಿಟ್ಟು ಬಿಡೋಣ. ಆದರೆ ಇಂತಹ ಜಾತಿಗೆ ಮೀಸಲಾತಿ ಸಿಗಬೇಕು ಎಂದು ಶಿಫಾರಸು ಮಾಡಿರುವುದು ಜಾರಿಗೆ ಬರದಿದ್ದರೆ, ಆ ಸಮುದಾಯದ ಮಕ್ಕಳಿಗೆ ಅನ್ಯಾಯವಾಗುತ್ತದೆ. ಈ ನಿಟ್ಟಿನಲ್ಲಿ ಅನುಷ್ಠಾನ ಆಗಬೇಕೆಂಬ ಪ್ರಯತ್ನ ಮಾಡುತ್ತೇವೆ.
ರವಿವರ್ಮಕುಮಾರ್ ಕೊಟ್ಟ 71 ವರದಿ ಪೈಕಿ 69ನ್ನು ಸರ್ಕಾರ ಒಪ್ಪಿದೆ. ನಂತರ ದ್ವಾರಕನಾಥ್‌ ಅವರ ವರದಿಯನ್ನು ಒಂದೆರಡು ಅನುಷ್ಠಾನ ಆಗಿದೆ. ಉಳಿದಂತೆ ಬಹಳಷ್ಟು ವರದಿಗಳು ಜಾರಿಗೆ ಆಗಿಲ್ಲ. ವೀರಶೈವ-ಲಿಂಗಾಯತ ವರದಿಯಲ್ಲಿ 19 ಜಾತಿ ಒಪ್ಪಿ ಪಂಚಮಸಾಲಿ ಮಿಕ್ಕು ಉಳಿದದ್ದನ್ನು ವಾಪಸ್‌ ಕಳಿಸಲಾಗಿದೆ. ಹಾಗಾಗಿ ತುಂಬಾ ಸಮಸ್ಯೆಗಳು ಇವೆ. ಸರ್ಕಾರ ಅತಿ ಶೀಘ್ರದಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಂಡರೆ ಆ ಸಮುದಾಯದ ಮಕ್ಕಳಿಗೆ ಅನುಕೂಲವಾಗುತ್ತದೆ, ಜೊತೆಗೆ ಅನಾಥ ಮಕ್ಕಳ ಕುರಿತ ವರದಿ ಸಹ ಜಾರಿಗೆ ಆಗಬೇಕಾಗಿದೆ.

ಸಲ್ಲಿಸಿದ ವರದಿಯ ಪೈಕಿ ಹೆಚ್ಚು ಸಮಾಧಾನ, ತೃಪ್ತಿ ತಂದ ವರದಿ ಯಾವುದು?

-ಒಂದು, ಅನಾಥ ಮಕ್ಕಳ ಕುರಿತು ನೀಡಿದ ವರದಿ. ಮತ್ತೊಂದು ಸಣ್ಣಪುಟ್ಟ ಜಾತಿಗಳದ್ದು. 300, 400, ಒಂದು, ಎರಡು ಸಾವಿರ ಜನಸಂಖ್ಯೆ ಇರುವ ಜಾತಿಗಳನ್ನು ಸೇರಿಸಿದ್ದೇವೆ. ಸಮೀಕ್ಷೆ ವರದಿಯಲ್ಲಿ ಕೆಲವು ಜಾತಿಗಳು ಇರಲಿಲ್ಲ. ಅವುಗಳನ್ನು ಸೇರಿಸಿದ್ದೇವೆ. ಜಾತಿ ಹಾಗೂ ಉಪಜಾತಿಗಳನ್ನು ಈಗ ಸೇರ್ಪಡೆ ಮಾಡಿದ್ದೇವೆ. ಸುಮಾರು 10-20 ಸಣ್ಣ ಪುಟ್ಟ ಜಾತಿಗಳನ್ನು ಸೇರಿಸಿದ್ದೇವೆ.

ಅನಾಥ ಮಕ್ಕಳನ್ನು ಹೇಗೆ ಗುರುತಿಸಿದಿರಿ?

-ನಾವು ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡುವಾಗ ಬಾಲ ಮಂದಿರಕ್ಕೆ ಹೋಗಿದ್ದೇವೆ. ಅಲ್ಲಿರುವ ಮಕ್ಕಳ ಮಾಹಿತಿ ಪಡೆದುಕೊಂಡಿದ್ದೇವೆ. ವಿದ್ಯಾವಂತ ಮಕ್ಕಳಿಗೆ ಹೊರಗುತ್ತಿಗೆ ಕೆಲಸದಲ್ಲಿ ಅವಕಾಶ ಕೊಡುವಂತೆ ಸಲಹೆ ನೀಡಿದ್ದೇವೆ. ಅಧಿಕಾರಿಗಳಿಗೆ ಈ ಬಗ್ಗೆ ಆಸಕ್ತಿ ಇರಬೇಕು. ದಾವಣಗೆರೆಯಲ್ಲಿ ಅಧಿಕಾರಿಗಳು ತುಂಬಾ ಆಸಕ್ತಿಯಿಂದ ಕೆಲಸ ಮಾಡುತ್ತಿರುವುದನ್ನು ನೋಡಿದೆ. ಕೆಳ ಹಂತದ ಅಧಿಕಾರಿಗಳು ಇಂತಹ ಮಕ್ಕಳ ಬಗ್ಗೆ ಮೇಲಿನ ಅಧಿಕಾರಿಗಳ ಗಮನಕ್ಕೆ ತರಬೇಕಾಗುತ್ತದೆ.

ಹೆಚ್ಚು ಶ್ರಮ, ಸಮಯ, ಅಧ್ಯಯನ ತೆಗೆದುಕೊಂಡು ನೀಡಿದ ವರದಿ ಯಾವುದು?

-ಒಂದು ವಹ್ನಿಕುಲ ಜಾತಿ ಹಾಗೂ ಪಂಚಮಸಾಲಿ ಜಾತಿ ಕುರಿತ ವರದಿ ಹೆಚ್ಚು ಸಮಯ, ಅಧ್ಯಯನ ತೆಗೆದುಕೊಂಡಿತು. ಪಂಚಮಸಾಲಿ ಜಾತಿ ಸಂಬಂಧ ಬೇರೆ ಬೇರೆ ಜಿಲ್ಲೆಗಳಿಗೆ ಪ್ರವಾಸ ಹೋಗಬೇಕಾಯಿತು. ಆದರೆ ಪ್ರವಾಸದ ವೇಳೆ ಪಂಚಮಸಾಲಿ ಜಾತಿಯ ಜೊತೆಗೆ ಬೇರೆ ಬೇರೆ ಮನವಿಗಳನ್ನು ಅಧ್ಯಯನ ಮಾಡಲಾಯಿತು. ವಿಶೇಷವಾಗಿ ಪಂಚಮಸಾಲಿ ಜಾತಿಗೆ ಸಂಬಂಧಪಟ್ಟಂತೆ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಲಾಯಿತು.

ಆಯೋಗದ ಅಧ್ಯಕ್ಷರ ಅವಧಿ ಮುಗಿದಿದೆ, ಮುಂದೇನು?

-ವಕಾಲತ್ತು ಮಾಡಬಹುದು, ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲು ನನಗೆ ತುಂಬಾ ಸಮಯವಿದೆ.

ಮತ್ತೇ ರಾಜಕೀಯಕ್ಕೆ ಬರುತ್ತೀರಾ?

-ನೋಡಬೇಕು,ನನ್ನ ಸ್ನೇಹಿತರು, ಕುಟುಂಬದವರ ಜೊತೆ ಚರ್ಚೆ ಮಾಡಬೇಕಾಗುತ್ತದೆ, ಅಂದರೆ ಚುನಾವಣಾ ರಾಜಕೀಯಕ್ಕೆ ಹೋಗಬೇಕೇ, ಬೇಡವೇ ಎಂಬ ಬಗ್ಗೆ ಚಿಂತನೆ ಮಾಡಬೇಕಾಗಿದೆ.

ತಾವು ಬಿಜೆಪಿಗೆ ಸೇರ್ಪಡೆಯಾಗಿದ್ರಿ, ಮಧ್ಯಂತರದಲ್ಲಿ ಆಯೋಗದ ಅಧ್ಯಕ್ಷರಾದ ನಂತರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಕಳೆದುಕೊಂಡಿರಿ. ಈಗ ಮತ್ತೆ ಬಿಜೆಪಿ ಸೇರುವಿರಾ ಅಥವಾ...?

-ಆಯೋಗದ ಅಧ್ಯಕ್ಷರಾಗುವ ಮುನ್ನ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದಾಗುತ್ತದೆ. ನಂತರ ಕಾಂಗ್ರೆಸ್‌ ಸರ್ಕಾರ ಬಂದ ಮೇಲೂ ಅಧ್ಯಕ್ಷ ಸ್ಥಾನಕ್ಕೆ ಮುಂದುವರೆಸಲಾಯಿತು. ನಂತರ ಎರಡು ಬಾರಿ ಆಯೋಗದ ಅಧ್ಯಕ್ಷರಾಗಿ ಮರು ನೇಮಕ ಮಾಡಲಾಯಿತು. ಒಂದು ವೇಳೆ ವಿಸ್ತರಣೆ ಮಾಡದಿದ್ದರೆ ವರದಿ ನೀಡಲು ಆಗುತ್ತಿರಲಿಲ್ಲ. ಚುನಾವಣಾ ರಾಜಕೀಯದಲ್ಲಿ ಇರಬೇಕೇ ಅಥವಾ ರಾಜಕೀಯದಲ್ಲಿ ಇರಬೇಕೇ ಎಂಬ ಬಗ್ಗೆ ಆಲೋಚನೆ ಸಹ ಮಾಡುತ್ತೀದ್ದೇನೆ. ಬೇಕು-ಬೇಡಗಳ ಮಧ್ಯ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ.

ಚಿಕ್ಕಮಗಳೂರು-ಉಡುಪಿ ಲೋಕಸಭಾ ಚುನಾವಣೆಯ ಟಿಕೆಟ್‌ ನೀಡಬಾರದು ಎಂಬ ವಿರೋಧ ಕಾಂಗ್ರೆಸ್‌ ಮುಖಂಡರಿಂದ ವ್ಯಕ್ತವಾಗುತ್ತಿದೆಯಲ್ಲ?

-ಅವರು ಯಾವ ರೀತಿ ಆಲೋಚನೆ ಮಾಡುತ್ತಿದ್ದಾರೋ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ನನ್ನಿಂದ ಯಾವ ಹೇಳಿಕೆ ಬಂದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ಹೇಳಿಲ್ಲ. ಆದ್ದರಿಂದ ಅವರವರ ಚಿಂತನೆಗೆ ಬಿಟ್ಟಿದ್ದೇನೆ. ಅವರವರ ಅಭಿಪ್ರಾಯಗಳನ್ನು ಹೇಳಲು ಅವರಿಗೆ ಹಕ್ಕು ಇದೆ. ಆದರೆ ಟೀಕೆಗಳನ್ನು ಮಾಡಬಾರದು ಅಷ್ಟೇ, ಯಾರೇ ಆಗಲಿ ಆದರೆ ಆಡುವ ಭಾಷೆಯ ಮೇಲೆ ಹಿಡಿತ ಇರಬೇಕು ಅಷ್ಟೇ. ನಾನೂ ಈವರೆಗೆ ಯಾವ ಪಕ್ಷಕ್ಕೂ ಟಿಕೆಟ್‌ ಕೊಡಿ ಎಂದು ಕೇಳಿಲ್ಲ. ಬೇರೆಯವರು ತಮಗೆ ಇಂತಲ್ಲೇ ಟಿಕೆಟ್‌ ಕೊಡಿ ಎಂದು ಕೇಳುವುದು ಅವರ ಹಕ್ಕು.

ಆದರೆ ಕೆಲವು ಮುಖಂಡರು ನೀವು ಪಕ್ಷಾಂತರಿ ಅಂತಾರೆ? 

- ಪಕ್ಷಾಂತರ ಮಾಡಲು ಪಕ್ಷಗಳು ಕಾರಣ ಅಲ್ವಾ? ಅವರು ಪಕ್ಷಾಂತರ ಮಾಡಿಸದಿದ್ದರೆ ಪಕ್ಷಾಂತರ ಆಗುತ್ತಿರಲಿಲ್ಲ. ಹಾಗಾಗಿ ಒಬ್ಬರು ಮತ್ತೊಬ್ಬರ ಮೇಲೆ ಪಕ್ಷಾಂತರ ಮಾಡಿದರು ಎಂದು ಹೇಳುವುದು ತಪ್ಪಾಗುತ್ತದೆ. ಒಂದು ವೇಳೆ ಒಂದು ಪಕ್ಷದಿಂದ ಆಯ್ಕೆಯಾಗಿ ಮಧ್ಯ ಬಿಟ್ಟು ಹೋದಾಗ ಮಾತ್ರ ಸಮಸ್ಯೆ ಆಗುತ್ತದೆ, ಆದರೆ ಯಾವುದೇ ಪಕ್ಷದ ಸದಸ್ಯನಾಗದೇ ಇದ್ದಾಗ ಅಂತವರ ಇಚ್ಛೆಗೆ ಬಿಟ್ಟಿದ್ದು, ಹಾಗಾಗಿ ಅದು ಪಕ್ಷಾಂತರ ಆಗುವುದಿಲ್ಲ.

ಬಿಜೆಪಿ ಸರ್ಕಾರ ನಿಮ್ಮನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿತು. ಅಲ್ಲಿಯ ವಾತಾವರಣ ಒಗ್ಗಲಿಲ್ಲವೆ, ಯಾಕೆ ದೂರ ಆಗುವ ಯೋಚನೆ ಬಂದಿತು?

-ನಾನು ಆ ಬಗ್ಗೆ ಏನೂ ಹೇಳಲು ಹೋಗುವುದಿಲ್ಲ. ನಾನು ಹೇಳುವ ವಿಷಯ ಚರ್ಚೆಗೆ ಅವಕಾಶ ಮಾಡಿಕೊಡಬಾರದು ಎಂಬುದು ನನ್ನ ಉದ್ದೇಶವಾಗಿದೆ. ಈ ಬಗ್ಗೆ ಯಾರಿಂದಾದರೂ ಹೇಳಿಕೆ, ಟೀಕೆ ಮಾಡಿದರೆ ಅದಕ್ಕೆ ಉತ್ತರ ಕೊಡುತ್ತೇನೆ.
ಯಾವುದೇ ಪಕ್ಷದಲ್ಲಿ ಇಲ್ಲ ಅಂತೀರಿ. ಆದರೆ, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿದ್ದೀರಿ..

-ಯಾರನ್ನಾದರೂ ಭೇಟಿ ಮಾಡಬಾರದು ಅಂತ ಏನಾದರೂ ಇದೆಯೇ, ಒಂದು ವೇಳೆ ಭೇಟಿ ಮಾಡಿದ್ದರೂ ಅಂತಿಮ ತೀರ್ಮಾನ ನನ್ನದೇ ಅಲ್ವಾ, ಸುರ್ಜೆವಾಲಾ ಅವರು ಈ ಮುಂಚೆಯೇ ಪರಿಚಯ, ನಾನು ಸಂಸದನಾಗಿದ್ದಾಗಲೂ ಪರಿಚಯ, ಅದೇ ರೀತಿ ಬಿಜೆಪಿ ನಾಯಕರು ಪರಿಚಯ ಮೊದಲಿನಿಂದಲೂ ಇತ್ತು.ರಾಜಕೀಯವೇ ಬೇರೆ ವೈಯಕ್ತಿಕ ಸಂಬಂಧ ಬೇರೆ ಅಲ್ಲವೆ.

ಜಾತಿ ಗಣತಿ ವರದಿ ನೋಡದೇ ವಿರೋಧ ಏಕೆ?: ಸಚಿವ ತಂಗಡಗಿ

ರಾಜಕೀಯ ತೀರ್ಮಾನ ಯಾವಾಗ ತೆಗೆದುಕೊಳ್ಳುತ್ತೀರಿ?

-ಚುನಾವಣಾ ರಾಜಕೀಯಕ್ಕೆ ಹೋಗಬೇಕಾದರೆ ಸ್ನೇಹಿತರು, ಕುಟುಂಬದವರ ಜೊತೆ ಚರ್ಚಿಸಬೇಕು. ಚುನಾವಣಾ ರಾಜಕೀಯ ಬೇಡ ಎಂದಾದರೆ ಅದಕ್ಕೆ ಬೇಕಾದಷ್ಟು ಸಮಯ ಇದೆ.

ನಿಮಗೆ ಚಿಕ್ಕಮಗಳೂರು-ಉಡುಪಿ ಟಿಕೆಟ್‌ ನೀಡಬಾರದು ಎಂಬ ವಿರೋಧ ಇದೆಯಲ್ಲ?

-ಅವರು ಯಾವ ರೀತಿ ಆಲೋಚನೆ ಮಾಡುತ್ತಿದ್ದಾರೋ ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ನನ್ನಿಂದ ಯಾವ ಹೇಳಿಕೆ ಬಂದಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ನಾನು ಸೇರಿದ್ದೇನೆ ಎಂದು ಹೇಳಿಲ್ಲ. ಆದ್ದರಿಂದ ಅವರವರ ಚಿಂತನೆಗೆ ಬಿಟ್ಟಿದ್ದೇನೆ. ನಾನು ಈವರೆಗೆ ಯಾವ ಪಕ್ಷಕ್ಕೂ ಟಿಕೆಟ್‌ ಕೊಡಿ ಎಂದು ಕೇಳಿಲ್ಲ.

Follow Us:
Download App:
  • android
  • ios