ಜಾತಿ ಗಣತಿ ವರದಿ ನೋಡದೇ ವಿರೋಧ ಏಕೆ?: ಸಚಿವ ತಂಗಡಗಿ

ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಜನವರಿ ಅಂತ್ಯದೊಳಗೆ ವರದಿ ಕೊಡುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿಯವರು ವರದಿ ಸ್ವೀಕರಿಸಲಿದ್ದಾರೆ. ಆ ನಂತರ ಮುಂದಿನ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ: ಕನ್ನಡ ಮತ್ತು ಸಂಸ್ಕೃತಿ ಮತ್ತು ಹಿಂದುಳಿದ ವರ್ಗದವರ ಕಲ್ಯಾಣ ಸಚಿವ ಶಿವರಾಜ ತಂಗಡಗಿ 

Why the Opposition without seeing the Caste Census Report Says Minister Shivaraj Tangadagi grg

ಸಂದರ್ಶನ: ಸಂಪತ್‌ ತರೀಕೆರೆ

ಬೆಂಗಳೂರು(ಜ.11):  ರಾಜ್ಯದ ಕೆಲವೇ ಅದೃಷ್ಟವಂತ ರಾಜಕಾರಣಿಗಳ ಪೈಕಿ ಕನಕಗಿರಿಯ ಶಾಸಕ ಶಿವರಾಜ ತಂಗಡಗಿ ಅವರು ಒಬ್ಬರು. ಅದೃಷ್ಟವಂತ ಏಕೆ ಎಂದರೆ ತಾವು ಯಾವಾಗ್ಯಾವಗ ಶಾಸಕರಾಗಿದ್ದಾರೋ ಆಗ ಸಚಿವರಾಗಿ ನೇಮಕಗೊಂಡಿದ್ದಾರೆ. ಇಂತಹ ಅದೃಷ್ಟವಂತ ರಾಜಕಾರಣಿಗೆ ಈ ಬಾರಿ ದೊಡ್ಡ ಸವಾಲು ಎದುರಾಗಿದೆ. ಕನ್ನಡ ಅಸ್ಮಿತೆ ಕಾಯ್ದುಕೊಳ್ಳುವ ಹೊಣೆಗಾರಿಕೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜಕಾರಣದಲ್ಲಿ ಕೋಲಾಹಲವೆಬ್ಬಿಸಿರುವ ಜಾತಿ ಗಣತಿಯ ಉಸ್ತುವಾರಿ ಇರುವ ಹಿಂದುಳಿದ ವರ್ಗದವರ ಕಲ್ಯಾಣ ಇಲಾಖೆಯ ಜವಾಬ್ದಾರಿ ತಂಗಡಗಿಯವರ ಮೇಲಿದೆ. ಕಾಂತರಾಜು ವರದಿ ಭವಿಷ್ಯವೇನಾಗಲಿದೆ? ಕನ್ನಡ ಅಸ್ಮಿತೆ ಉಳಿಸಿಕೊಳ್ಳಲು ಸರ್ಕಾರ ಏನು ಮಾಡಲಿದೆ? ಕನ್ನಡ ನಾಮಫಲಕ ಕಡ್ಡಾಯ ಬಗ್ಗೆ ಸರ್ಕಾರದ ಬದ್ಧತೆ ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಕನ್ನಡ ಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಶಿವರಾಜ ತಂಗಡಗಿ.

* ನ್ಯಾ.ಕಾಂತರಾಜ್‌ ವರದಿ ಕಥೆ ಎಲ್ಲಿಗೆ ಬಂದಿದೆ?

ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಜನವರಿ ಅಂತ್ಯದೊಳಗೆ ವರದಿ ಕೊಡುತ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿಯವರು ವರದಿ ಸ್ವೀಕರಿಸಲಿದ್ದಾರೆ. ಆ ನಂತರ ಮುಂದಿನ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ.

ಶೀಘ್ರದಲ್ಲಿ ಅಂಜನಾದ್ರಿಗೆ ರಾಹುಲ್, ಪ್ರಿಯಾಂಕ ಗಾಂಧಿ ಭೇಟಿ: ಸಚಿವ ತಂಗಡಗಿ

* ಈ ವರದಿ ಅವೈಜ್ಞಾನಿಕ ಅಂತ ಆಕ್ಷೇಪವಿದೆಯಲ್ಲ?

ಈ ವರದಿ ಜಾತಿಗಣತಿಯದ್ದು ಎಂಬ ತಪ್ಪು ಕಲ್ಪನೆ ಇದೆ. ವರದಿ ಮಾಡಿದ ನಂತರ ನಾವ್ಯಾರು ನೋಡಿಲ್ಲ. ಅದರಲ್ಲಿ ಏನಿದೆ ಎಂದು ಗೊತ್ತಿಲ್ಲ. ವರದಿಯೇ ಬರದೆ ಅದು ತಪ್ಪಿದೆ, ಜಾತಿ ಗಣತಿ ಮಾಡಿದ್ದಾರೆ ಎನ್ನುವುದರಲ್ಲಿ ಅರ್ಥವಿಲ್ಲ. ಇದೊಂದು ಎಲ್ಲ ಸಮುದಾಯಗಳ ವಾಸ್ತವಿಕ ಸ್ಥಿತಿಗತಿ ತಿಳಿಯುವ ವರದಿಯಷ್ಟೇ. ಇದರಲ್ಲಿರುವ ಕಾನೂನಾತ್ಮಕ ತೊಡಕುಗಳನ್ನು ಸರಿಪಡಿಸಿಕೊಂಡು ವರದಿ ಸಲ್ಲಿಕೆಯಾಗಲಿದೆ.

* ಕಾಂತರಾಜು ವರದಿಯನ್ನು ಒಪ್ಪಿಕೊಳ್ಳಲು ನಿಯಮಗಳಲ್ಲೇ ತೊಡಕಿದೆಯಂತಲ್ಲ?

ಈ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚೆಯಾಗಿದೆ. ಎರಡ್ಮೂರು ಸಭೆಗಳು ನಡೆದಿವೆ. ಅದನ್ನು ಕಾನೂನು ಬದ್ಧವಾಗಿಯೇ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ. ಅಂತಿಮವಾಗಿ ಮುಖ್ಯಮಂತ್ರಿಯವರು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

*ಲೋಕಸಭೆ ಚುನಾವಣೆಗೂ ಮುನ್ನವೇ ವರದಿ ಜಾರಿಯಾಗುವ ಸಾಧ್ಯತೆ? 

ನೂರಾರು ಕೋಟಿ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗುತ್ತಿದೆ. ಯಾವಾಗ ಜಾರಿ ಮಾಡಬೇಕೆಂಬುದನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ನಿರ್ಧರಿಸುತ್ತಾರೆ. ಲೋಕಸಭೆ ಚುನಾವಣೆಗೂ ಮುನ್ನವೇ ವರದಿ ಬಹಿರಂಗ ಪಡಿಸುತ್ತೇವೆ. ಅದಕ್ಕಾಗಿ ಹಲವು ಸಮುದಾಯಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ.

ಮೇಲ್ವರ್ಗದವರ ವಿರೋಧವಿದೆ. ಕ್ಯಾಬಿನೆಟ್‌ ಸಹದ್ಯೋಗಿಗಳೇ ವಿರೋಧಿಸುತ್ತಿದ್ದಾರಲ್ಲ?

ಮೊದಲೇ ಹೇಳಿದಂತೆ ಈ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಜಾತಿವಾರು ಸಂಖ್ಯೆ ಬಗ್ಗೆ ಎದ್ದಿರುವುದೆಲ್ಲ ಊಹಾಪೋಹ. ಒಂದು ಬಾರಿ ಈ ವರದಿ ಬಹಿರಂಗಕ್ಕೆ ಬರಲಿ. ಅದನ್ನು ಸಚಿವ ಸಂಪುಟದ ಮುಂದೆ ಚರ್ಚೆಗೆ ಬಂದೇ ಬರುತ್ತಲ್ಲ. ಆಗ ವರದಿಯಲ್ಲಿ ಏನಾದರೂ ಲೋಪವಿದ್ದರೆ ಹೇಳಲಿ. ಅಕಸ್ಮಾತ್‌ ಲೋಪವಿದ್ದರೆ ಅದನ್ನು ಸರಿಪಡಿಸಲು ಅವಕಾಶವಿದ್ದೇ ಇದೆ. ಇದನ್ನು ಬಿಟ್ಟು ವರದಿಯಲ್ಲಿ ಏನಿದೆ ಎಂಬುದನ್ನು ನೋಡದೆಯೇ ವಿರೋಧಿಸುವುದು ಸರಿಯಲ್ಲ. ಇದನ್ನು ಮನದಟ್ಟು ಮಾಡಿಕೊಡುತ್ತಿದ್ದೇವೆ.

* ಧೂಳು ಹಿಡಿಯುತ್ತಿರುವ ಸರೋಜಿನಿ ಮಹಿಷಿ ವರದಿಗೆ ಕಾಯಕಲ್ಪ ಯಾವಾಗ?

ಸರೋಜಿನಿ ಮಹಿಷಿ ವರದಿ ನೆನೆಗುದಿಗೆ ಬಿದ್ದಿಲ್ಲ. ಆ ಕುರಿತು ಮೂರು ಬಾರಿ ಸಭೆ ನಡೆಸಿದ್ದೇವೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮಗಳು ರೂಪಿಸಬೇಕು ಎಂದು ಸೂಚಿಸಿದ್ದೇನೆ. ಫೆ.15ರಂದು ನಡೆಯಲಿರುವ ಅಧಿವೇಶನದಲ್ಲಿ ನಿಯಮಗಳನ್ನು ಮಂಡನೆ ಮಾಡುತ್ತೇವೆ. ಕನ್ನಡಿಗರು, ಕನ್ನಡ ಭಾಷೆ ಮತ್ತು ಕರ್ನಾಟಕ್ಕೆ ಅನುಕೂಲವಾಗುವ ರೀತಿಯಲ್ಲೇ ಕಾನೂನು ರೂಪಿಸುತ್ತೇವೆ.

* ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೊಂಡಿರುವ ಯೋಜನೆಗಳೇನು?

ಕರ್ನಾಟಕ ಎಂದು ಹೆಸರಿಟ್ಟು 50 ವರ್ಷವಾಗಿದೆ. ಈ ದಿನಗಳಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಬೇಕು. ಹೊಸ ಯೋಜನೆಗಳನ್ನು ಮಾಡಿದ್ದೇವೆ. ರಾಜ್ಯದ ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ಕನ್ನಡ ರಥ ಸಂಚರಿಸುತ್ತಿದೆ. ಹಂಪಿ ಮತ್ತು ಗದಗದಲ್ಲಿ ದೊಡ್ಡ ಕಾರ್ಯಕ್ರಮ ಮಾಡಿದ್ದೇವೆ. ಭುವನೇಶ್ವರಿಯ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸುವ ಮತ್ತು ದೇವರಾಜು ಅರಸು ಅವರ ಪ್ರತಿಮೆ ಪ್ರತಿಷ್ಠಾಪಿಸುವ ಕುರಿತು ನಿರ್ಧರಿಸಿದ್ದೇವೆ. ಶಾಲಾ ಕಾಲೇಜುಗಳಲ್ಲಿ ಪ್ರಬಂಧ ರಚನೆ, ಚಿತ್ರಕಲಾ, ರಸಪ್ರಶ್ನೆ ಇತ್ಯಾದಿ ಸ್ಪರ್ಧೆ ಆಯೋಜಿಸಲು ಶಿಕ್ಷಣ ಇಲಾಖೆ ಸಹಕಾರ ಕೋರಿದ್ದೇವೆ. ವಿಶೇಷ ಅಂಚೆ ಚೀಟಿ ಸಹ ಹೊರತರಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ವಿಭಾಗಾವಾರು ಕಾರ್ಯಕ್ರಮಗಳು ಆಯೋಜಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದೇವೆ.

* ಗಡಿಭಾಗದ ಕನ್ನಡಿಗ ಪರಿಸ್ಥಿತಿ ಈಗಲೂ ಸುಧಾರಿಸಿಲ್ಲ?

ಗಡಿಭಾಗದೊಳಗೆ ಕನ್ನಡ ಶಾಲೆಗಳಿಗೆ ಪ್ರೋತ್ಸಾಹ ಕೊಡುತ್ತಿದ್ದೇವೆ. ಅಲ್ಲಿ ಕನ್ನಡ ಭವನಗಳನ್ನು ನಿರ್ಮಿಸಲಿದ್ದೇವೆ. ಕನ್ನಡದ ಬಗ್ಗೆ ಅರಿವು ಮೂಡಿಸುವಂತ ಯೋಜನೆಗಳನ್ನು ಹಾಕಿಕೊಳ್ಳಲು ಚಿಂತನೆ ನಡೆಸಲಾಗಿದೆ. ಜ.22ರಂದು ಕಾಸರಗೋಡಿಗೆ ಹೋಗುತ್ತಿದ್ದು ಅಲ್ಲಿಯ ಕನ್ನಡಿಗರೊಂದಿಗೆ ಸಂವಾದ ಕೂಡ ನಡೆಸಲಿದ್ದೇನೆ. ಈ ಹಿಂದೆ ಗೋವಾಕ್ಕೂ ಹೋಗಿದ್ದು. ಅಲ್ಲಿ ಕನ್ನಡಿಗರಿಗೆಂದು ಸಮುದಾಯ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಹಣದಿಂದ ಉತ್ತರ ಗೋವಾದಲ್ಲಿ ಜಾಗ ಖರೀದಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದೇವೆ.

* ನಾಡಧ್ವಜದ ಕುರಿತ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಏನಾಯ್ತು ?

ರಾಜ್ಯಕ್ಕೆ ಕನ್ನಡ ಧ್ವಜ ಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ಸರ್ಕಾರ ಈ ಹಿಂದೆಯೇ ಪ್ರಸ್ತಾವನೆ ಸಲ್ಲಿಸಿದೆ. ಈವರೆಗೂ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಇದಕ್ಕೆ ಸಂಬಂಧಪಟ್ಟವನ್ನು ಈ ತಿಂಗಳೇ ಭೇಟಿಯಾಗುತ್ತೇನೆ. ಕರ್ನಾಟಕ, ಕನ್ನಡಿಗರ ಬಗ್ಗೆ ಗೌರವ ಇದ್ದರೆ ಬಿಜೆಪಿಯ ಸಂಸದರು, ಆದಷ್ಟು ಬೇಗ ಧ್ವಜಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಅನುಮೋದನೆ ಕೊಡಿಸುವ ಕೆಲಸ ಮಾಡಲಿ.

* ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕರೂ ಯಾವುದೇ ಕಾರ್ಯಯೋಜನೆ ಸಾಕಾರಗೊಂಡಿಲ್ಲವೇಕೆ

ಕೇಂದ್ರದವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಕೊಟ್ಟು ಕೈತೊಳೆದುಕೊಂಡಿದ್ದಾರೆ. ಕನ್ನಡದ ಅಧ್ಯಯನ, ಸಂಶೋಧನೆಗೆ ಅಗತ್ಯ ಅನುದಾನ ಕೊಡುತ್ತಿಲ್ಲ. ನಾಡಧ್ವಜದ ಕುರಿತು ಮಾತನಾಡಲು ಹೋದ ಸಂದರ್ಭದಲ್ಲಿ ಈ ಬಗ್ಗೆಯೂ ಪ್ರಸ್ತಾಪಿಸಲಿದ್ದೇನೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಸಚಿವರನ್ನು ಕಂಡು ಮಾತನಾಡುತ್ತೇನೆ.

ಕನ್ನಡಕ್ಕೆ ಈ ರೀತಿ ಅನ್ಯಾಯ ತಡೆಗಟ್ಟಲು ನಿಮ್ಮ ಸರ್ಕಾರ ಏನು ಮಾಡುತ್ತಿದೆ?

ಕೇಂದ್ರ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಮೊದಲಿನಿಂದಲೂ ವಿರೋಧವಿದೆ. ಕರ್ನಾಟಕದಲ್ಲಿ ಕನ್ನಡಕ್ಕಿಂತ ಹೆಚ್ಚು ಹಿಂದಿ ಹೇರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅದಕ್ಕೆ ನಾವು ಜಗ್ಗುವುದೂ ಇಲ್ಲ. ಬಗ್ಗುವುದೂ ಇಲ್ಲ. ಹಿಂದಿಯನ್ನು ಗೌರವಿಸುತ್ತೇವೆ. ಅದರೆ ಮೊದಲು ನಮಗೆ ಕನ್ನಡ. ಇಲ್ಲಿನಿಂದ ಗೆದ್ದು ಹೋದ ಸಂಸದರು, ಕೇಂದ್ರದ ಪ್ರಭಾವಿ ಸಚಿವರೂ ಆಗಿದ್ದಾರೆ. ಅಂತಹವರು ಈ ಬಗ್ಗೆ ಮಾತನಾಡದೆ, ಕೇವಲ ಜನರ ಭಾವನೆಗಳ ಬಗ್ಗೆ ಆಟವಾಡುವುದು ಸರಿಯಲ್ಲ. ಧರ್ಮವೇ ಅವರಿಗೆ ಪ್ರಮುಖ ಹೊರತು ಭಾಷಾಭಿಮಾನವಿಲ್ಲ.

* ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಾಂಸ್ಕೃತಿಕ ನೀತಿ ರೂಪಿಸಿದ್ದರಲ್ಲ. ಸರ್ಕಾರಕ್ಕೆ ನೆನಪಿದೆಯೇ

ಖಂಡಿತ ಇದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಅಧಿಕಾರ ವಹಿಸಿಕೊಂಡ ಎಂಟು ತಿಂಗಳಲ್ಲಿ ಎರಡು ಬಾರಿ ಸಾಂಸ್ಕೃತಿಕ ನೀತಿಗೆ ಸಂಬಂಧಪಟ್ಟಂತೆ ಸಭೆಗಳನ್ನು ಮಾಡಿದ್ದೇನೆ. ಸಾಂಸ್ಕೃತಿಕ ನೀತಿಯಲ್ಲಿ ಕೆಲವೊಂದಷ್ಟು ವಿಷಯಗಳು ನನಗೂ ಇಷ್ಟ ಆಗಿದೆ. ಈ ಬಗ್ಗೆ ಶೀಘ್ರವೇ ಕ್ರಮಕೈಗೊಳ್ಳುತ್ತೇನೆ.

* ಪ್ರಾಧಿಕಾರ, ಅಕಾಡೆಮಿ ಅಧ್ಯಕ್ಷ, ಸದಸ್ಯರ ನೇಮಕ ಈ ಪರಿ ವಿಳಂಬವೇಕೆ?

ಈಗಾಗಲೇ ಎಲ್ಲ ಅಕಾಡೆಮಿ, ಪ್ರಾಧಿಕಾರಗಳಿಗೆ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿಯವರು ಕೂಡ ಸಿದ್ಧರಿದ್ದಾರೆ. ಅಕಾಡೆಮಿಗಳಿಗೆ ನೇಮಕ ಮಾಡುವಾಗ ಆಯಾ ಅಕಾಡೆಮಿಗೆ ಸಂಬಂಧಿಸಿದಂತೆ ತಜ್ಞರನ್ನೇ ನೇಮಕ ಮಾಡಬೇಕೆಂಬ ಆಸೆ ನಮ್ಮದು. ತಿಳುವಳಿಕೆ ಇರುವಂತವರನ್ನೇ ನೇಮಿಸುತ್ತೇವೆ.

* ರಂಗಾಯಣಗಳಲ್ಲಿ ರಾಜಕೀಯ ಹಸ್ತಕ್ಷೇಪ ವಿಪರೀತವಾಗಿದೆ?

ರಂಗಾಯಣ ಹಿಂದಿನ ಇತಿಹಾಸವನ್ನು ಮಕ್ಕಳಿಗೆ, ಜನರಿಗೆ ತಿಳಿಸುವಂತ ಕೆಲಸ ಮಾಡುತ್ತವೆ. ಹಿಂದೆ ಏನಾಗಿದೆಯೋ ಅದು ಬೇಡ. ಯಾವುದೇ ಕಾರಣಕ್ಕೂ ವ್ಯಾಪ್ತಿ ಮೀರಿ ಮತ್ತೊಬ್ಬರಿಗೆ ತೊಂದರೆಯಾಗದಂತೆ ವಾಸ್ತವ ಸತ್ಯವನ್ನು ರಾಜ್ಯದ ಜನರಿಗೆ ತಲುಪಸುವಂತ ಕೆಲಸ ಮಾಡಬೇಕೆಂದು ಸೂಚನೆ ಕೊಟ್ಟಿದ್ದೇನೆ. ಮೈಸೂರು ರಂಗಾಯಣದಲ್ಲಿ ಟಿಪ್ಪು ಇತಿಹಾಸ ತಿರುಚಿದ್ದು ಸರಿಯಲ್ಲ. ಈ ಬಿಜೆಪಿಯವರಿಗೆ ಯಾವಾಗ ಬೇಕೋ ಅವಾಗ ಉರಿಗೌಡನೂ ಹುಟ್ಟಿಕೊಳ್ಳುತ್ತಾನೆ. ನಂಜೇಗೌಡನೂ ಹುಟ್ಟುತ್ತಾನೆ. ಬಿಜೆಪಿಯವರು ಯಾವಾಗ ಯಾರನ್ನಾದರೂ ಹುಟ್ಟಿಸಿಬಿಡುತ್ತಾರೆ.

*ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುವ ನೀವು, ಕನ್ನಡಪರ ಹೋರಾಟಗಾರರ ಮೇಲಿನ ಕೇಸುಗಳ ಹಿಂಪಡೆಯುವ ಬಗ್ಗೆ ಏಕೆ ಏನೂ ಮಾಡಿಲ್ಲ?

ಯಾರು ಸ್ವಾರ್ಥ ಬಿಟ್ಟು ಕನ್ನಡಪರ ಹೋರಾಟ ಮಾಡಿದ್ದಾರೋ ಅವರ ಮೇಲೆ ದಾಖಲಾಗಿರುವ ಕೇಸಿನ ಮಾಹಿತಿ ಕೊಟ್ಟರೆ ವಾಪಸ್‌ ಪಡೆಯಲು ಪರಿಶೀಲಿಸುತ್ತೇವೆ. ಕನ್ನಡ ಹೋರಾಟಗಾರರಿಗೆ ವಿನಂತಿ ಮಾಡುತ್ತೇನೆ. ನಮ್ಮ ಸರ್ಕಾರ ಕನ್ನಡ ಮತ್ತು ಕನ್ನಡಪರ ಹೋರಾಟಗಾರರ ಪರವಾಗಿದೆ. ಆದರೆ, ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ನಾವು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಹಳೇ ಕೇಸುಗಳು ರೀಓಪನ್‌ ಆಗುತ್ತಿವೆ ಎಂದರೆ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ.

* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕ್ರಿಯಾಶೀಲವಾಗಿದೆಯೇ?

ಹಿಂದುಳಿದ ವರ್ಗದ ಹಾಸ್ಟೆಲ್‌ಗಳನ್ನು ಹೆಚ್ಚಿಸಬೇಕೆಂದು ಬೇಡಿಕೆ ಇಟ್ಟಿದ್ದೆ. 100ಕ್ಕಿಂತ ಹೆಚ್ಚು ಹಾಸ್ಟೆಲ್‌ಗಳಿಗೆ ಅನುಮೋದನೆ ಕೊಡಲಾಗಿದೆ. ಮುಂದಿನ ವರ್ಷದೊಳಗೆ ಎಲ್ಲ ಕಡೆ ಜಿಲ್ಲಾ ಕೇಂದ್ರದಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಹಾಸ್ಟೆಲ್‌ ಕಡಿಮೆಯಾಗುತ್ತಿವೆ. ಜಿಲ್ಲಾ ಕೇಂದ್ರಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ತೀರ್ಮಾನಿಸಿದ್ದೇವೆ. ತಾಲೂಕು ಹಾಸ್ಟೆಲ್‌ನಲ್ಲಿ ಊಟದ ಗುಣಮಟ್ಟದ ಸಮಸ್ಯೆಯಾಗುತ್ತಿತ್ತು. ಅದನ್ನು ನಿವಾರಿಸುವ ಪ್ರಯತ್ನ ಮಾಡುತ್ತಿದ್ದೇವೆ.

* ಲೋಕಸಭೆ ಚುನಾವಣೆಗೆ ಸಚಿವರುಗಳಿಗೆ ಟಿಕೆಟ್‌ ಕೊಡುವ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗಿದೆಯೇ?

ಸಚಿವರುಗಳು ಚುನಾವಣೆಗೆ ನಿಲ್ಲಿಸಬೇಕೆಂದು ಎಲ್ಲಿಯೂ ಚರ್ಚೆಗಳು ಆಗಿಲ್ಲ. ಆದರೆ, ಚುನಾವಣೆಗೆ ಹೆಚ್ಚು ಗಮನಕೊಟ್ಟು ಮಾಡುತ್ತೇವೆ. 15ರಿಂದ 20 ಸೀಟು ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಇದ್ದೇವೆ.

* ವಿಜಯಪುರದಿಂದ ತಮ್ಮ ಸಹೋದರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಂತೆ ನಿಜವೇ?

ನನ್ನ ಸಹೋದರನಿಗೆ ಚುನಾವಣೆಗೆ ನಿಲ್ಲು ಅಂತ ನಾನು ಹೇಳಿದ್ದೆ. ಆದರೆ ಅವನಿಗೆ ರಾಜಕಾರಣಕ್ಕೆ ಬರಲು ಇಷ್ಟವಿಲ್ಲ. ಬಿಜಿನೆಸ್‌ನಲ್ಲೇ ಅವನಿಗೆ ಹೆಚ್ಚು ಆಸಕ್ತಿ. ಸದ್ಯಕ್ಕೆ ಈ ಅವಧಿಯಲ್ಲಿ ರಾಜಕೀಯ ಬೇಡ ಅಂತ ಹೇಳುತ್ತಿದ್ದಾನೆ.

Hijab Ban Withdrawal: ಆರೆಸ್ಸೆಸ್ಸಿಗರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ: ಸಚಿವ ತಂಗಡಗಿ

* ಜಾತಿವಾರು ಡಿಸಿಎಂ ಹುದ್ದೆ ಸೃಷ್ಟಿಸುವಂತೆ ಪ್ರಬಲ ಸಚಿವರೇ ಒತ್ತಡ ಹೇರುತ್ತಿದ್ದಾರೆಯೇ?

ಈ ವಿಚಾರದ ಬಗ್ಗೆ ಚರ್ಚೆ ಮಾಡಲು ನನಗೆ ಇಷ್ಟ ಇಲ್ಲ. ಅದನ್ನು ಮುಖ್ಯಮಂತ್ರಿಯವರು ಮತ್ತು ಹೈಕಮಾಂಡ್‌ ನಿರ್ಧಾರ ಮಾಡುತ್ತದೆ. ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಲು ಜಾತಿವಾರು ಡಿಸಿಎಂ ಬೇಕು ಎನ್ನುವುದು ನನ್ನ ಅಭಿಪ್ರಾಯವೂ ಇರಬಹುದು. ಆದರೆ, ಅದು ಹೈಕಮಾಂಡ್‌, ಸಿಎಂಗೆ ಸಂಬಂಧಿಸಿದ ವಿಚಾರ.

* ನಾಮಫಲಕದಲ್ಲಿ ಕಡ್ಡಾಯ ಕನ್ನಡ ಎಂಬುದು ಹಲ್ಲಿಲ್ಲದ ಕಾನೂನಾಗುತ್ತದೆ ಎಂಬು ಗುಮಾನಿಯಿದೆ?

ಇಲ್ಲ, ಖಂಡಿತ ಹೀಗೆ ಆಗುವುದಿಲ್ಲ. ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಇರುವಂತೆ ಹಾಕಬೇಕೆನ್ನುವ ನಿಯಮ ಫೆ.28ರಂದು ಜಾರಿಗೆ ಬರಲಿದೆ. ಕಾನೂನು ತಪ್ಪಿದವರಿಗೆ ಕೇವಲ ದಂಡ ಮಾತ್ರ ಹಾಕುವುದಿಲ್ಲ. ಕೈಗಾರಿಕೆ, ವಾಣಿಜ್ಯ ಸೇರಿದಂತೆ ಇತರೆ ವಹಿವಾಟಿನ ಪರವಾನಗಿಯನ್ನೇ ರದ್ದುಪಡಿಸಬೇಕೆಂಬ ನಿರ್ಧಾರ ಮಾಡಿದ್ದೇವೆ. ಫೆ. 28ರೊಳಗೆ ಎಲ್ಲರೂ ತಮ್ಮ ನಾಮಫಲಕಗಳನ್ನು ಬದಲಿಸಿಕೊಳ್ಳಬೇಕು. ಕೈಗಾರಿಕೆಗಳಿಗೆಲ್ಲ ಖುದ್ದಾಗಿ ನಾನೇ ಭೇಟಿ ಮಾಡಿ ಪರಿಶೀಲಿಸುತ್ತೇನೆ. ಜೊತೆಗೆ ಅದಕ್ಕಾಗಿಯೇ ಟಾಸ್ಕ್‌ಫೋರ್ಸ್‌ ಕೂಡ ರಚಿಸಲಿದ್ದೇವೆ. ಗಡುವು ಮುಗಿದ ನಂತರವೂ ನಾಮಫಲಕ ಅಳವಡಿಸದಿದ್ದರೆ ಅಂತಹವರ ಪರವಾನಗಿಯೇ ರದ್ದುಗೊಳಿಸುವ ಕಠಿಣ ಕ್ರಮವೂ ಜರುಗಿಸುತ್ತೇವೆ.

Latest Videos
Follow Us:
Download App:
  • android
  • ios