ವಿಧಾನಸಭೆಯಲ್ಲಿ ಬಳ್ಳಾರಿ ಹಿಂಸಾಚಾರದ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, ಅಲ್ಲಿನ ಗನ್ ಮತ್ತು ಬಾಂಬ್ ಸಂಸ್ಕೃತಿಗೆ ಅಂತ್ಯ ಹಾಡಲು ಆಗ್ರಹಿಸಿದರು. ಸಿದ್ದರಾಮಯ್ಯನವರು ಪೂರ್ಣಾವಧಿ ಸಿಎಂ ಆಗಿ ಮುಂದುವರಿಯಲಿ ಎಂದರು. ಜೊತೆಗೆ, ಡಿಸಿಎಂ ವಿರುದ್ಧ ಹರಿಹಾಯ್ದು, ಪ್ರಕರಣದ ಸಿಬಿಐ ತನಿಖೆಗೆ ಒತ್ತಾಯಿಸಿದರು.
ಬೆಂಗಳೂರು/ಬಳ್ಳಾರಿ (ಜ.29): ಬಳ್ಳಾರಿಯಲ್ಲಿ ಇತ್ತೀಚೆಗೆ ನಡೆದ ಬ್ಯಾನರ್ ವಿವಾದ, ಹಿಂಸಾಚಾರ ಹಾಗೂ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ಅಧಿವೇಶನದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರು ಅಕ್ಷರಶಃ ಗುಡುಗಿದ್ದಾರೆ. ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿಯುತ್ತಲೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಮೃದು ಧೋರಣೆ ತೋರಿದ ರೆಡ್ಡಿ, 'ರಾಜ್ಯದ ಒಳಿತಿಗಾಗಿ ನೀವೇ ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯಿರಿ, ಆದರೆ ಬಳ್ಳಾರಿಯಲ್ಲಿ ನಡೆಯುತ್ತಿರುವ ಗನ್ ಮತ್ತು ಬಾಂಬ್ ಸಂಸ್ಕೃತಿಯನ್ನು ಮಟ್ಟಹಾಕಿ' ಎಂದು ಮನವಿ ಮಾಡಿದರು.
ಸಿಎಂಗೆ ಪೂರ್ಣ ಅವಧಿಯ ಬೆಂಬಲ, ಡಿಸಿಎಂ ವಿರುದ್ಧ ಕಿಡಿ:
ಸದನದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಮಹತ್ವದ ಹೇಳಿಕೆ ನೀಡಿದರು. 'ನೀವು ಪಾದಯಾತ್ರೆ ಮಾಡಿದ್ದೀರಿ, ಕಷ್ಟಪಟ್ಟು ಮೇಲೆ ಬಂದಿದ್ದೀರಿ. ನಾನು ಜೈಲಿಗೆ ಹೋಗುವುದು, ಮತ್ತೆ ಆಯ್ಕೆಯಾಗಿ ಬರುವುದು ಎಲ್ಲವೂ ಭಗವಂತನ ಇಚ್ಛೆ. ಆದರೆ, ನೀವು ಅಧಿಕಾರವನ್ನು ಬಳಸಿಕೊಂಡು ಅಭಿವೃದ್ಧಿ ಮಾಡಬೇಕು. ನೀವೇ ಮುಂದಿನ ಎರಡೂವರೆ ವರ್ಷಗಳ ಕಾಲವೂ ಸಿಎಂ ಆಗಿ ಮುಂದುವರಿಯಬೇಕು ಎಂದು ಕೈಜೋಡಿಸಿ ಕೇಳಿಕೊಳ್ಳುತ್ತೇನೆ' ಎಂದರು.
ಇದೇ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ರೆಡ್ಡಿ, 'ಘಟನೆ ನಡೆದಾಗ ಸಿಎಂ ಅವರು ಗಂಭೀರವಾಗಿದ್ದರು, ಆದರೆ ಡಿಸಿಎಂ ಬಾಯಿಗೆ ಬಂದಂತೆ ಮಾತನಾಡಿದರು. ಬಳ್ಳಾರಿಗೆ ಬಂದು ಆರೋಪಿ ಶಾಸಕರ ಪರ ನಿಲ್ಲುತ್ತೇನೆ ಎಂದರು. ನಾನು ರಕ್ಷಣೆ ಕೇಳಿದರೆ ಅಮೆರಿಕಾದಿಂದ ರಕ್ಷಣೆ ಪಡೆಯಲಿ ಎಂದು ವ್ಯಂಗ್ಯವಾಡಿದರು' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿಯಲ್ಲಿ ಗನ್, ಬಾಂಬ್ ಮಾತಾಡುತ್ತಿದೆ
ಬಳ್ಳಾರಿ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಜನಾರ್ದನ ರೆಡ್ಡಿ, 'ಬಳ್ಳಾರಿಯಲ್ಲಿ ಪ್ರಜಾಪ್ರಭುತ್ವವಿಲ್ಲ, ಅಲ್ಲಿ ಬಾಂಬು ಮತ್ತು ಗನ್ ಮಾತನಾಡುತ್ತಿದೆ. ನಾನು ಗಂಗಾವತಿಯಿಂದ ಬರುವಾಗ ಮನೆ ಮುಂದೆ ಬ್ಯಾನರ್ ನೋಡಿದೆ. ಅದನ್ನು ತೆಗೆಯುವಂತೆ ಸೂಚಿಸಿದ್ದೆ. ಆದರೆ ಮತ್ತೆ 40 ಜನರು ಬಂದು ಬ್ಯಾನರ್ ಕಟ್ಟಲು ಮುಂದಾದರು. ಪೊಲೀಸರಿಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ. ಇದು ಸ್ಪಷ್ಟವಾಗಿ ಗುಪ್ತಚರ ಇಲಾಖೆಯ (Intelligence) ವೈಫಲ್ಯ' ಎಂದು ಆರೋಪಿಸಿದರು.
ದೀಪಾವಳಿ ಪಟಾಕಿಯಂತೆ ಗುಂಡಿನ ದಾಳಿ
'ನನ್ನ ಮನೆ ಮುಂದೆ ಕಟ್ಟಡ ನಿರ್ಮಾಣಕ್ಕೆ ಸಂಗ್ರಹಿಸಿದ್ದ ಕಲ್ಲುಗಳನ್ನು ಬಳಸಿಕೊಂಡು ಚಿಲ್ಲರೆ ರೌಡಿಗಳು ದಾಳಿ ಮಾಡಿದರು. ರಾಮುಲು ಅವರು ಸಮಾಧಾನ ಮಾಡಲು ಹೋದಾಗ ಅವರ ಮೇಲೆಯೇ 'ಹಾಕ್ರೋ ಹಾಕ್ರೋ' ಎಂದು ಮುಗಿಬಿದ್ದರು. ದೀಪಾವಳಿಗೆ ಪಟಾಕಿ ಸಿಡಿಸುವಂತೆ ಫೈರ್ ಮಾಡಿದರು. ಪೆಟ್ರೋಲ್ ಬಾಂಬ್ ಮತ್ತು ಬಾಟಲಿಗಳನ್ನು ಎಸೆದರು. ಎಸ್ಪಿ ಮತ್ತು ಐಜಿ ಬಂದು ನನ್ನನ್ನು ಮನೆ ಒಳಗೆ ಕರೆದೊಯ್ದಿದ್ದರಿಂದ ಪ್ರಾಣಾಪಾಯ ತಪ್ಪಿತು' ಎಂದು ಆತಂಕಕಾರಿ ಕ್ಷಣಗಳನ್ನು ವಿವರಿಸಿದರು.
ಶಾಸಕರ ವಿರುದ್ಧ ಗಂಭೀರ ಆರೋಪ
ಸ್ಥಳೀಯ ಶಾಸಕರ ವರ್ತನೆಯನ್ನು ಖಂಡಿಸಿದ ರೆಡ್ಡಿ, 'ಪರಿಸ್ಥಿತಿ ಉದ್ವಿಗ್ನವಾಗಿದ್ದಾಗ ಶಾಸಕರು ಅನಗತ್ಯವಾಗಿ ಅಲ್ಲಿಗೆ ಬಂದರು. ಅವರು ಕುಡಿದು ಬಂದಿರಬಹುದು. ಅವರು ಬಂದ ತಕ್ಷಣವೇ ದಾಳಿ ತೀವ್ರವಾಯಿತು. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಪೊಲೀಸರ ಲಾಠಿಚಾರ್ಜ್‌ಗೆ ಹೆದರಿ ಓಡುವಾಗ ಖಾಸಗಿ ಗನ್‌ಮ್ಯಾನ್ ಹಾರಿಸಿದ ಗುಂಡಿಗೆ ಬಲಿಯಾಗಿದ್ದಾನೆ. ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಇದನ್ನು ಒಪ್ಪಿಕೊಂಡಿದ್ದಾರೆ. ಆದರೂ ಡಿಸಿಎಂ ಅವರು, 'ಜನಾರ್ದನ ರೆಡ್ಡಿಗೆ ಎಲ್ಲಿ ಗುಂಡು ಬಿದ್ದಿದೆ?' ಎಂದು ಕೇಳುತ್ತಾರೆ' ಎಂದು ಪ್ರಶ್ನಿಸಿದರು.
ಸಿಬಿಐ ತನಿಖೆಗೆ ಆಗ್ರಹ
'ಬಳ್ಳಾರಿಯಲ್ಲಿ ಯಾರು ಗೆಲ್ಲುತ್ತಾರೆ, ಸೋಲುತ್ತಾರೆ ಎಂಬುದು ಮುಖ್ಯವಲ್ಲ. ಅಲ್ಲಿನ ಕ್ರಿಮಿನಲ್ ಚಟುವಟಿಕೆಗಳು ನಿಲ್ಲಬೇಕು. ಈ ಪ್ರಕರಣದಲ್ಲಿ ಪೊಲೀಸರ ತನಿಖೆಯ ಬಗ್ಗೆ ನಂಬಿಕೆ ಇಲ್ಲ. ಆದ್ದರಿಂದ ಇಡೀ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಬೇಕು. ಸಿಬಿಐ ಮೇಲೆ ನಂಬಿಕೆ ಇಲ್ಲದಿದ್ದರೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ನಾನು ಕಾನೂನು ಹೋರಾಟ ನಡೆಸುತ್ತೇನೆ' ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


