ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸೇರಿದ ಲೇಔಟ್‌ನ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಇತ್ತೀಚೆಗೆ ನಡೆದ ಬ್ಯಾನರ್ ಗಲಾಟೆಯ ಮುಂದುವರಿದ ಭಾಗ ಇದಾಗಿದ್ದು, ಇದು ಕಾಂಗ್ರೆಸ್ ನವರ ಕೃತ್ಯ ಎಂದು ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ.

ಬಳ್ಳಾರಿ (ಜ.23): ಗಣಿ ನಾಡು ಬಳ್ಳಾರಿಯಲ್ಲಿ ಬ್ಯಾನರ್ ಹರಿದ ಪ್ರಕರಣದ ಬಿಸಿ ಆರುವ ಮುನ್ನವೇ ಮತ್ತೊಂದು ಶಾಕಿಂಗ್ ಘಟನೆ ಜರುಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸೇರಿದ ಲೇಔಟ್‌ನ ಮಾಡೆಲ್ ಹೌಸ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ನಗರದಲ್ಲಿ ಮತ್ತೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಜಿ ಸ್ಕೈರ್ ಲೇಔಟ್‌ನಲ್ಲಿ ಅಗ್ನಿ ಅವಘಡ 'ಕಿಡಿ'ಗೇಡಿ ಯಾರು?

ಬಳ್ಳಾರಿಯ ಜಿ ಸ್ಕೈರ್ ಲೇಔಟ್‌ನಲ್ಲಿ ಅಂದಾಜು 100 ಎಕರೆ ಪ್ರದೇಶದಲ್ಲಿ ಬೃಹತ್ ವಸತಿ ವಿನ್ಯಾಸ ಮಾಡಲಾಗಿತ್ತು. ಇಲ್ಲಿ ನಿವೇಶನ ಖರೀದಿಸಲು ಬರುವವರಿಗೆ ಮಾದರಿಯಾಗಿ ತೋರಿಸಲು ಸುಸಜ್ಜಿತವಾದ 'ಮಾಡೆಲ್ ಹೌಸ್' ನಿರ್ಮಿಸಲಾಗಿತ್ತು. ಇಂದು ಸಂಜೆ ಸುಮಾರು 6:30ರ ಸುಮಾರಿಗೆ ಈ ಮನೆಗೆ ಬೆಂಕಿ ಹೊತ್ತಿಕೊಂಡಿದ್ದು, ನೋಡನೋಡುತ್ತಿದ್ದಂತೆ ಮನೆಯ ಬಹುಪಾಲು ಸುಟ್ಟು ಭಸ್ಮವಾಗಿದೆ.

ಕಾಂಗ್ರೆಸ್ ನವರ ಕೃತ್ಯ: ಸೋಮಶೇಖರ್ ರೆಡ್ಡಿ ಗಂಭೀರ ಆರೋಪ

ಈ ಬೆಂಕಿ ಅವಘಡದ ಬೆನ್ನಲ್ಲೇ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. 'ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ, ಕಾಂಗ್ರೆಸ್ ನವರು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ' ಎಂದು ಆರೋಪಿಸಿದ್ದಾರೆ. ಮೊನ್ನೆ ಬ್ಯಾನರ್ ಗಲಾಟೆ ನಡೆದ ಸಮಯದಲ್ಲಿಯೇ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದರು, ಅದರ ಮುಂದುವರಿದ ಭಾಗವೇ ಇದು ಎಂದು ಅವರು ಆರೋಪಿಸಿದ್ದಾರೆ.

ಕಿಡಿಗೇಡಿಗಳನ್ನು ಹಿಡಿಯಲು ಯತ್ನ

ಸಂಜೆ ವೇಳೆ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚುತ್ತಿರುವುದನ್ನು ಗಮನಿಸಿದ ಕೆಲವರು ಕಿಡಿಗೇಡಿಗಳನ್ನು ಬೆನ್ನಟ್ಟಿ ಹಿಡಿಯಲು ಪ್ರಯತ್ನ ಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾನರ್ ಕಿತ್ತಾಟದ ನಂತರ ಈ ಘಟನೆ ನಡೆದಿರುವುದು ರೆಡ್ಡಿ ಮತ್ತು ಶ್ರೀರಾಮುಲು ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಬಳ್ಳಾರಿಯಲ್ಲಿ ಮತ್ತೆ ರಾಜಕೀಯ ಕಿಚ್ಚು

ಬ್ಯಾನರ್ ಗಲಾಟೆ ಸಾಕ್ಷಿ ಎನ್ನುವಂತೆ ಈಗ ನಮ್ಮ ಆಸ್ತಿಗೆ ಬೆಂಕಿ ಹಚ್ಚಲಾಗಿದೆ ಎಂದು ಸೋಮಶೇಖರ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.

ಬಳ್ಳಾರಿ ಗಲಾಟೆ ಹಿನ್ನೆಲೆ:

ಬಳ್ಳಾರಿ ನಗರದಲ್ಲಿ ಫ್ಲೆಕ್ಸ್ ಮತ್ತು ಬ್ಯಾನರ್ ಕಟ್ಟುವ ವಿಚಾರದಲ್ಲಿ ಎರಡು ರಾಜಕೀಯ ಗುಂಪುಗಳ ನಡುವೆ ನಡೆದ ಸಂಘರ್ಷ ದೊಡ್ಡ ಮಟ್ಟದ ಗಲಭೆಗೆ ಕಾರಣವಾಗಿತ್ತು. ಗಲಾಟೆ ವೇಳೆ ಗುಂಡಿನ ಸದ್ದು ಕೇಳಿಸಿತ್ತು. ಕಾಂಗ್ರೆಸ್ ಮುಖಂಡನೋರ್ವ ಗುಂಡು ತಗುಲಿ ಬಲಿಯಾಗಿದ್ದ. ಈ ಪ್ರಕರಣ ಸಂಬಂಧ ಬ್ರೂಸ್‌ಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಿದ್ದಲ್ಲದೆ, ರಾಜಕೀಯ ದ್ವೇಷಕ್ಕೂ ಕಾರಣವಾಗಿ ಇದೀಗ ಜನಾರ್ದನ ರೆಡ್ಡಿ-ಶ್ರೀರಾಮುಲು ಅವರಿಗೆ ಸೇರಿದ 'ಮಾಡೆಲ್‌ ಹೌಸ್‌' ಗೆ ಬೆಂಕಿ ಅವಘಡ ಸಂಭವಿಸಿರುವುದು ಇದರ ಹಿಂದೆ ಕಾಂಗ್ರೆಸ್‌ನವರ ಸಂಚಿದೆ ಎಂದು ಸೋಮಶೇಖರ್ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಬ್ಯಾನರ್ ಕಟ್ಟುವ ವಿಚಾರಕ್ಕೆ ಶುರುವಾದ ಗಲಾಟೆ, ಇದೀಗ ಮನೆಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಮುಂದುವರಿದಿದೆಯೇ ಪ್ರಶ್ನೆ ಎದ್ದಿದೆ.