Koppal: ಗಂಗಾವತಿಯಲ್ಲಿ ನೂತನ ಮನೆ ಗೃಹ ಪ್ರವೇಶ ಮಾಡಿದ ಜನಾರ್ಧನ ರೆಡ್ಡಿ: ಪತ್ನಿ ಅರುಣಾ ಲಕ್ಷ್ಮೀ ಹೇಳಿದ್ದೇನು?
ಜನಾರ್ಧನ ರೆಡ್ಡಿ ರಾಜಕೀಯ ರೀ ಎಂಟ್ರಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಕೊನೆಗೂ ಗಂಗಾವತಿಯಲ್ಲಿ ರೆಡ್ಡಿ ಮನೆ ಗೃಹ ಪ್ರವೇಶ ನೆರವೆರುವ ಮೂಲಕ ಗಂಗಾವತಿಯಿಂದಲೇ ಸ್ಪರ್ಧೆ ಮಾಡುವ ಸಂದೇಶವನ್ನ ರೆಡ್ಡಿ ನೀಡಿದ್ದಾರೆ.
ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಡಿ.14): ಜನಾರ್ಧನ ರೆಡ್ಡಿ ರಾಜಕೀಯ ರೀ ಎಂಟ್ರಿ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಕೊನೆಗೂ ಗಂಗಾವತಿಯಲ್ಲಿ ರೆಡ್ಡಿ ಮನೆ ಗೃಹ ಪ್ರವೇಶ ನೆರವೆರುವ ಮೂಲಕ ಗಂಗಾವತಿಯಿಂದಲೇ ಸ್ಪರ್ಧೆ ಮಾಡುವ ಸಂದೇಶವನ್ನ ರೆಡ್ಡಿ ನೀಡಿದ್ದಾರೆ.
ಜನಾರ್ಧನರೆಡ್ಡಿ ಇಲ್ಲದೆ ನಡೆದ ಮನೆಯ ಗೃಹ ಪ್ರವೇಶ: ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಕನಕಗಿರಿ ರಸ್ತೆಯ ಕ್ರಿಯೇಟಿವ್ ಪಾರ್ಕ್‌ನಲ್ಲಿ ಜನಾರ್ಧನ ರೆಡ್ಡಿಯ ಮೂರು ಮನೆಗಳ ಗೃಹ ಪ್ರವೇಶ ಇಂದು ನೆರವೇರಿದೆ. ಜನಾರ್ಧನ ರೆಡ್ಡಿ ದೆಹಲಿ ಪ್ರವಾಸದಲ್ಲಿ ಇರುವ ಹಿನ್ನಲೆಯಲ್ಲಿ ಜನಾರ್ಧನ ರೆಡ್ಡಿ ಅನುಪಸ್ಥಿತಿಯಲ್ಲಿ ಅವರ ಪತ್ನಿ ಅರುಣಾಲಕ್ಷ್ಮೀ ಗೃಹಪ್ರವೇಶದ ಎಲ್ಲ ಪೂಜಾ ಕಾರ್ಯಗಳನ್ನು ನೆರವೆರಿಸಿದರು. ಗೋ ಪೂಜೆ ನೆರವೇರಿಸಿದ ಅರುಣಾ ಲಕ್ಷ್ಮೀ ಬಳಿಕ ಹಾಲು ಉಕ್ಕಿಸಿ, ಪೂಜೆಯಲ್ಲಿ ಪಾಲ್ಗೊಂಡರು.
ಗಂಗಾವತಿಯಲ್ಲೇ ನನ್ನ ಸ್ಪರ್ಧೆ, ರೆಡ್ಡಿ ಕಣಕ್ಕಿಳಿದರೆ ಭಯವಿಲ್ಲ: ಶಾಸಕ ಪರಣ್ಣ
ಗಂಗಾವತಿಯಲ್ಲಿ ಜನಾರ್ಧನ ರೆಡ್ಡಿ ಸ್ಪರ್ಧೆ ಖಚಿತ ಸಾಧ್ಯತೆ: ಇನ್ನು ಜನಾರ್ಧನ ರೆಡ್ಡಿ ಗಂಗಾವತಿಂದಲೇ ಸ್ಪರ್ಧೆ ಮಾಡುತ್ತಾರೆ ಎನ್ನುವ ವದಂತಿಗಳಿಗೆ ಇದೀಗ ಗೃಹ ಪ್ರವೇಶದ ಮೂಲಕ ಅದು ಕನ್ಫರ್ಮ್ ಆಗಿದೆ. ಇನ್ನು ಕಳೆದ ವಾರ ಜನಾರ್ಧನ ರೆಡ್ಡಿ ಗಂಗಾವತಿಗೆ ಬಂದಾಗ ಡಿಸೆಂಬರ್ 18 ರಂದು ಗೃಹಪ್ರವೇಶ ಮಾಡಿ ಅಂದು ರಾಜಕೀಯದ ಕುರಿತು ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದರು. ಆದರೆ ಇದೀಗ ಅವರು ಹೇಳಿದ ನಾಲ್ಕು ದಿನಗಳ ಮೊದಲೇ ಗೃಹಪ್ರವೇಶ ಹಾಗೂ ಕಚೇರಿ ಪೂಜೆಯನ್ನು ನೆರವೆರಿಸಿದ್ದಾರೆ. ಇದನ್ನೆಲ್ಲ ನೋಡಿದರೆ ಜನಾರ್ಧನರೆಡ್ಡಿ ಗಂಗಾವತಿಯಿಂದ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಗೃಹಪ್ರವೇಶದಲ್ಲಿ ಕಾಣಿಸಿಕೊಳ್ಳದ ಬಿಜೆಪಿಗರು: ಇನ್ನು ಕಳೆದ ಬಾರಿ ಜನಾರ್ಧನ ರೆಡ್ಡಿ ಗಂಗಾವತಿಗೆ ಬಂದಾಗ ಕೆಲವು ಜನ ಬಿಜೆಪಿ ಮುಖಂಡರು ಕಾಣಿಸಿಕೊಂಡಿದ್ದರು. ಜೊತೆಗೆ ಜನಾರ್ಧನ ರೆಡ್ಡಿ ಬಿಜೆಪಿಯ ನಗರಸಭೆ ಸದಸ್ಯರ ಮನೆಗಳಿಗೂ ಸಹ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆದರೆ ಇಂದಿನ ಗೃಹ ಪ್ರವೇಶದ ಕಾರ್ಯಕ್ರಮದಲ್ಲಿ ಮಾತ್ರ ಸ್ಥಳೀಯ ಯಾವ ಬಿಜೆಪಿ ಮುಖಂಡರಾಗಲಿ, ನಗರಸಭೆ ಸದಸ್ಯರಾಗಲಿ ಕಾಣಿಸಲಿಲ್ಲ. ಕೆಲವೇ ಜನರು ಮಾತ್ರ ಇಂದಿನ ಗೃಹಪ್ರವೇಶದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಸವಣ್ಣನ ವಚನ ಹೇಳಿದ ರೆಡ್ಡಿ ಪತ್ನಿ: ಇನ್ನು ಗೃಹಪ್ರವೇಶದ ಪೂಜೆ ಬಳಿಕ ಜನಾರ್ಧನ ರೆಡ್ಡಿ ಪತ್ನಿ ಅರುಣಾಲಕ್ಷ್ಮೀ ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅವರು ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು ಎನ್ನುವ ಬಸವಣ್ಣನವರ ವಚನ ಹೇಳುವ ಮೂಲಕ ಜನರೇ ನಮಗೆಲ್ಲ ಎಂದರು. ಜೊತೆಗೆ ವನವಾಸ ದೇವಾನು ದೇವತೆಗಳನ್ನು ಬಿಟ್ಟಿಲ್ಲ, ಹೀಗಾಗಿ ನಮ್ಮ ಪತಿ ಕಳೆದ 12 ವರ್ಷಗಳಿಂದ ವನವಾಸದಲ್ಲಿದ್ದಾರೆ. ಸಾರ್ವಜನಿಕರ ಸೇವೆ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಹೀಗಾಗಿ ಡಿಸೆಂಬರ್ 17 ರಂದು ಜನಾರ್ಧನರೆಡ್ಡಿ ಅವರು ಗಂಗಾವತಿ ನಗರಕ್ಕೆ ಆಗಮಿಸಲಿದ್ದು, 18 ರಂದು ಪತ್ರಿಕಾಗೋಷ್ಠಿ ನಡೆಸಿ ಅಂದು ನಮ್ಮ ಮುಂದಿನ ರಾಜಕೀಯ ನಡೆ ಕುರಿತು ಪ್ರಕಟಿಸಲಿದ್ದಾರೆ ಎಂದರು.
ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು
ಒಂದೆಡೆ ಈಗಾಗಲೇ ಹೊಸ ಪಕ್ಷದ ನೊಂದಣಿಗಾಗಿ ಜನಾರ್ಧನ ರೆಡ್ಡಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಮತ್ತೊಂದಡೆ ಒಟ್ಟಿನಲ್ಲಿ ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿದ್ದು, ಬಿಜೆಪಿಯಿಂದ ಸ್ಪರ್ಧಿಸುತ್ತಾರಾ ಅಥವಾ ಹೊಸ ಪಕ್ಷದಿಂದ ಸ್ಪರ್ಧಿಸುತ್ತಾರಾ ಅನ್ನೋದು ಮಾತ್ರ 18 ರಂದು ಗೊತ್ತಾಗಲಿದೆ.