ಸೌದಿಯಲ್ಲಿ ಶಿಕ್ಷೆಗೆ ಗುರಿ ಆಗಿರುವ ವ್ಯಕ್ತಿಗೆ ಕೇಂದ್ರ ಸರ್ಕಾರ ಅವರಿಗೆ ವಕೀಲರ ನೆರವು ಒದಗಿಸಲಿದೆಯೇ ಎಂಬ ಬಗ್ಗೆ ಉತ್ತರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರು (ಜು.18) :  ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಬೆಂಬಲಿಸಿದ ಕಾರಣಕ್ಕೆ ಅನಾಮಿಕರು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಹಾಕಿದ ಪ್ರಕರಣದಲ್ಲಿ ಸೌದಿಯಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ಗೆ ಮೇಲ್ಮನವಿ ವಿಚಾರಣೆ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಿದೆಯೇ, ಸಾಧ್ಯವಿರುವುದಾದರೆ ಕೇಂದ್ರ ಸರ್ಕಾರ ಅವರಿಗೆ ವಕೀಲರ ನೆರವು ಒದಗಿಸಲಿದೆಯೇ ಎಂಬ ಬಗ್ಗೆ ಉತ್ತರಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಪ್ರಕರಣ ಸಂಬಂಧ ತಾವು ದಾಖಲಿಸಿದ ದೂರಿನ ತನಿಖೆಯನ್ನು ಮಂಗಳೂರು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಶೈಲೇಶ್‌ಕುಮಾರ್‌ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಪೀಠ ಈ ಸೂಚನೆ ನೀಡಿದೆ.

ದ್ವೇಷ-ಭಾಷಣ, ಭಯೋತ್ಪಾದನೆಗೆ ಕಾರಣವಾಗುವ ಸಿದ್ಧಾಂತಗಳನ್ನು ಧಾರ್ಮಿಕ ಮುಖಂಡರು ಎದುರಿಸಬೇಕು: ಡಾ. ಅಲ್-ಇಸ್ಸಾ

ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯು ಮೇಲ್ಮನವಿಯ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ನೇಮಿಸಿಕೊಳ್ಳಬಹುದಾದರೆ ಭಾರತ ಸರ್ಕಾರ ಅವರಿಗೆ ವಕೀಲರ ನೆರವು ಒದಗಿಸಲಿದೆಯೇ? ಸೌದಿ ಅರೇಬಿಯಾದ ಸ್ಥಳೀಯ ಕಾನೂನಿನ ಅಡಿ ಶಿಕ್ಷೆ ಕಾಯಂಗೊಳಿಸುವ ಪ್ರಕ್ರಿಯೆ ಏನು? ಪ್ರಕರಣದಲ್ಲಿ ಮಂಗಳೂರು ಪೊಲೀಸರ ತನಿಖೆಯಲ್ಲಿ ಕಂಡುಬರುವ ಮಾಹಿತಿಯನ್ನು ಸೌದಿ ನ್ಯಾಯಾಲಯದ ಮುಂದೆ ಇಡಬಹುದೇ? ಭಾರತದಲ್ಲಿ (ಮಂಗಳೂರು) ಪೊಲೀಸ್‌ ವಿಚಾರಣೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿಯು ಸೌದಿ ನ್ಯಾಯಾಲಯವನ್ನು ಕೋರಬಹುದೇ ಎಂದು ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಕೀಲರನ್ನು ಹೈಕೋರ್ಚ್‌ ಪ್ರಶ್ನಿಸಿತು. ಜತೆಗೆ, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಿ ವಕೀಲರಿಗೆ ನಿರ್ದೇಶಿಸಿ ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಮುಂದೂಡಿತು.

ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಉದ್ಯೋಗ ನಿರ್ವಹಿಸುತ್ತಿರುವ ಮಂಗಳೂರಿನ ಬಿಕರನಕಟ್ಟೆನಿವಾಸಿ ಶೈಲೇಶ್‌ ಕುಮಾರ್‌ (45) ಭಾರತ ಸರ್ಕಾರ ರೂಪಿಸಿರುವ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆ ಬೆಂಬಲಿಸಿ 2019ರಲ್ಲಿ ಸೌದಿ ಅರೇಬಿಯಾದಲ್ಲಿ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದರು. ಇದರಿಂದ ಆತನಿಗೆ ಅನಾಮಿಕರಿಂದ ಬೆದರಿಕೆ ಬಂದ ಕಾರಣ ಫೇಸ್‌ಬುಕ್‌ ಖಾತೆಯನ್ನು ಶೈಲೇಶ್‌ ರದ್ದುಪಡಿಸಿದ್ದರು. ಆದರೆ, 2020ರ ಫೆಬ್ರವರಿಯಲ್ಲಿ ಶೈಲೇಶ್‌ ಹೆಸರಿನಲ್ಲಿ ಅನಾಮಧೇಯ ವ್ಯಕ್ತಿಗಳು ನಕಲಿ ಫೇಸ್‌ಬುಕ್‌ ಖಾತೆ ತೆರೆದು ಸೌದಿ ಅರೇಬಿಯಾದ ದೊರೆ, ಆತನ ಜಾತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದರು. ಇದರಿಂದ ಶೈಲೇಶ್‌ ಸೌದಿ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದಾನೆ.

ಪತ್ನಿಯ ಉಡುಗೊರೆಗಳ ಮೇಲೆ ಪತಿಗೆ ಯಾವುದೇ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಶೈಲೇಶ್‌ ಪತ್ನಿ ಕವಿತಾ ಘಟನೆ ಕುರಿತು 2020ರಲ್ಲಿ ಮಂಗಳೂರಿನಲ್ಲಿ ಪೊಲೀಸರಿಗೆ ದೂರು ದಾಖಲಿಸಿದ್ದರು. ಆದರೆ, ದೂರಿನ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿ ಕವಿತಾ 2021ರಲ್ಲಿ ಹೈಕೋರ್ಚ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.