ಬಂಧಿತ ಐಸಿಸ್ ಉಗ್ರರ ಪೈಕಿ ಎಲ್ಲರೂ ಇಂಜಿನಿಯರ್ಸ್, ಒಬ್ಬ ಪಿಎಚ್‌ಡಿ!
ಅತ್ಯಂತ ದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಸೋಮವಾರ ದಿಲ್ಲಿ ವಿಶೇಷ ಸೆಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ಪಶ್ಚಿಮ ಘಟ್ಟದಲ್ಲಿ ಉಗ್ರರ ಕ್ಯಾಂಪ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ನವದೆಹಲಿ/ಹುಬ್ಬಳ್ಳಿ (ಅ.5): ಅತ್ಯಂತ ದೊಡ್ಡ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯೊಂದರಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಮೂವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಸೋಮವಾರ ದಿಲ್ಲಿ ವಿಶೇಷ ಸೆಲ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಹಾಗೂ ಪಶ್ಚಿಮ ಘಟ್ಟದಲ್ಲಿ ಉಗ್ರರ ಕ್ಯಾಂಪ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.
ಬಂಧಿತರನ್ನು ಶಹನವಾಜ್, ಮೊಹಮ್ಮದ್ ರಿಜ್ವಾನ್ ಮತ್ತು ಮೊಹಮ್ಮದ್ ಅರ್ಷದ್ ವಾರ್ಸಿ ಎಂದು ಗುರುತಿಸಲಾಗಿದೆ. ಈ ಪೈಕಿ ಶಹನವಾಜ್‌ನನ್ನು 2 ದಿನದ ಹಿಂದೆಯೇ ಬಂಧಿಸಲಾಗಿತ್ತಾದರೂ ಅಧಿಕೃತವಾಗಿ ಬಂಧನವನ್ನು ಘೋಷಿಸಿರಲಿಲ್ಲ. ಸೋಮವಾರ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಪತ್ನಿ ಬಸಂತಿ ಪಟೇಲ್‌ನನ್ನು ಇಸ್ಲಾಂಗೆ ಮತಾಂತರ ಮಾಡಿದ್ದ ಬಂಧಿತ ಐಸಿಸ್ ಉಗ್ರ!
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್, ‘ಸ್ಥಳೀಯರು ಇದರಲ್ಲಿ ಶಾಮೀಲಾದ ಮಾಹಿತಿ ಈವರೆಗೂ ಸಿಕ್ಕಿಲ್ಲ. ಬಂಧಿತರ ಬಗ್ಗೆ ದೆಹಲಿ ಪೊಲೀಸರ ಜತೆ ಸಂಪರ್ಕದಲ್ಲಿದ್ದೇವೆ. ನಮ್ಮ ವ್ಯಾಪ್ತಿಯಲ್ಲಿ ಅಂತಹ ಕೃತ್ಯಗಳು ನಡೆಯುತ್ತಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.
ಬಂಧಿತರ ಸಂಚೇನು?:
ಇವರೆಲ್ಲ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಘಟ್ಟ ಪ್ರದೇಶದಲ್ಲಿ ತಮ್ಮ ನೆಲೆ ಸ್ಥಾಪಿಸಿ, ಬಳಿಕ ದೇಶದಲ್ಲಿ ಐಸಿಸ್ ಉಗ್ರರ ನೆಲೆ ವಿಸ್ತರಿಸಿ ಭಯೋತ್ಪಾದಕ ದಾಳಿ ನಡೆಸಲು ಹಾಗೂ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದರು. ಈ ಸಂಬಂಧ ದೇಶದ ಪಶ್ಚಿಮ ಮತ್ತು ದಕ್ಷಿಣದ ಭಾಗಗಳನ್ನು ಪರಿಶೀಲನೆ ಮಾಡಿದ್ದರು ಎಂದು ದಿಲ್ಲಿ ಪೊಲೀಸ್ ವಿಶೇಷ ಸೆಲ್ ಅಧಿಕಾರಿ ಧಾಲಿವಾಲ್ ಹೇಳಿದ್ದಾರೆ.
ಈತನ ಸ್ನೇಹಿತರು ಪುಣೆ ಉಗ್ರ ಪ್ರಕರಣದಲ್ಲಿ ಕೆಲ ತಿಂಗಳ ಹಿಂದೆ ಬಂಧಿಯಾಗಿದ್ದರು. ಅವರು ಬೆಳಗಾವಿ ಸಮೀಪದ ಮಹಾರಾಷ್ಟ್ರದ ಅಂಬೋಲಿ ಅರಣ್ಯದಲ್ಲಿ ಉಗ್ರ ತರಬೇತಿ ಶಿಬಿರ ನಡೆಸಿದ್ದರು ಎಂದು ಬೆಳಕಿಗೆ ಬಂದಿತ್ತು.
ಎಲ್ಲರೂ ಎಂಜಿನಿಯರ್ಸ್, ಒಬ್ಬ ಪಿಎಚ್‌ಡಿ:
ವಿಶೇಷವೆಂದರೆ ಎಲ್ಲ ಶಂಕಿತ ಉಗ್ರರೂ ಎಂಜಿನಿಯರ್‌ಗಳಾಗಿದ್ದು, ಈ ಪೈಕಿ ವಾರ್ಸಿ ಎಂಬಾತ ಪಿಎಚ್‌ಡಿ ಕೂಡ ಮಾಡುತ್ತಿದ್ದ. ಇವರೆಲ್ಲ ಬಾಂಬ್ ತಯಾರಿಯಲ್ಲಿ ಪರಿಣತರಾಗಿದ್ದರು ಎಂದು ದಿಲ್ಲಿ ಪೊಲೀಸ್ ವಿಶೇಷ ಸೆಲ್ ಮಾಹಿತಿ ನೀಡಿದೆ.
ದೆಹಲಿ ಪೊಲೀಸ್ ವಿಶೇಷ ಸೆಲ್ ಹಲವಾರು ರಾಜ್ಯಗಳಲ್ಲಿನ ಭಯೋತ್ಪಾದಕ ಜಾಲಗಳನ್ನು ಭೇದಿಸಲು ಎನ್‌ಐಎಯೊಂದಿಗೆ ಕೆಲಸ ಮಾಡುವ ಹಲವಾರು ಏಜೆನ್ಸಿಗಳಲ್ಲಿ ಒಂದಾಗಿದೆ.
ಪುಣೆ ಐಸಿಸ್ ಕೇಸಿನಲ್ಲಿ ಬೇಕಾಗಿದ್ದ ಶಹನವಾಜ್:
ವೃತ್ತಿಯಲ್ಲಿ ಮೈನಿಂಗ್ ಇಂಜಿನಿಯರ್ ಆಗಿರುವ ಶಹನವಾಜ್ ಐಸಿಸ್ ಪುಣೆ ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿದ್ದ. ಮೂಲಗಳ ಪ್ರಕಾರ, ಶಹನವಾಜ್ ಮೂಲತಃ ದೆಹಲಿಯವನಾದರೂ ಪುಣೆಗೆ ತೆರಳಿದ್ದ. ಜುಲೈನಲ್ಲಿ ಪುಣೆಯಲ್ಲಿ ನಡೆದ ದಾಳಿಯ ವೇಳೆ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿತ್ತು. ಶಹನವಾಜ್ ಪರಾರಿಯಾಗಿ, ದೆಹಲಿಗೆ ಮರಳಿದ್ದ. ಅಂದಿನಿಂದ ಅಡಗುದಾಣದಲ್ಲಿ ಆತ ವಾಸಿಸುತ್ತಿದ್ದ. ಈತ ತನ್ನ ಹೆಂಡತಿ ಬಸಂತಿಯನ್ನು ಇಸ್ಲಾಂಗೆ ಮತಾಂತರಿಸಿದ್ದ ಎಂದು ಮೂಲಗಳು ಹೇಳಿವೆ.
ಈ ತಿಂಗಳ ಆರಂಭದಲ್ಲಿ, ಶಹನವಾಜ್ ಮತ್ತು ಇತರ ಮೂವರು ಭಯೋತ್ಪಾದಕ ಶಂಕಿತರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ವಾಲಾ ಮತ್ತು ತಲ್ಹಾ ಲಿಯಾಕತ್ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರು. ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು . ಈ ಪೈಕಿ ಡಯಪರ್ವಾಲಾ ಹಾಗೂ ತಲ್ಹಾ ಇನ್ನೂ ಸಿಕ್ಕಿಲ್ಲ. ಅವರಿಗಾಗಿ ಬಲೆ ಬೀಸಲಾಗಿದೆ.
ಐಸಿಸ್‌ನಿಂದ ಬ್ರೇನ್‌ವಾಶ್:
ಶಹನವಾಜ್, ಅಬ್ದುಲ್ಲಾ ಮತ್ತು ರಿಜ್ವಾನ್ ಅವರು ಐಸಿಸ್ ಸಂಬಂಧಿ ಟೆಲಿಗ್ರಾಮ್ ಅಪ್ಲಿಕೇಶನ್ ಮೂಲಕ ಬ್ರೇನ್‌ವಾಶ್ ಆಗಿ ಭಯೋತ್ಪಾದಕರಾಗಿದ್ದರು. ಮಹಾರಾಷ್ಟ್ರದ ಪುಣೆಯಲ್ಲಿರುವ ಐಸಿಸ್ ಮಾಡ್ಯೂಲ್‌ನೊಂದಿಗೆ ಇವರಿಬ್ಬರೂ ನಂಟು ಹೊಂದಿದ್ದರು. ಅವರು ದೇಶಾದ್ಯಂತ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ಪ್ರಚುರಪಡಿಸಲು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರೋ ಐಸಿಸ್ ಉಗ್ರ ಬಂಧನ: ದೆಹಲಿ ಪೊಲೀಸರ ಕಾರ್ಯಾಚರಣೆ
ಮೂಲಗಳ ಪ್ರಕಾರ, ಅಬ್ದುಲ್ಲಾ ಡಯಾಪರ್ವಾಲಾ ಪುಣೆಯಲ್ಲಿ ಡಯಾಪರ್ ಅಂಗಡಿಯನ್ನು ನಡೆಸುತ್ತಿದ್ದ. ಅದನ್ನು ಸ್ಫೋಟಕ ಸಾಧನಗಳನ್ನು ಜೋಡಿಸಲು ಬಳಸಲಾಗುತ್ತಿತ್ತು.
ಸ್ಪೋಟಕ ಸಾಮಗ್ರಿ ವಶಕ್ಕೆ:
ಬಂಧಿತರಿಂದ ಪ್ಲಾಸ್ಟಿಕ್ ಟ್ಯೂಬ್, ಕಬ್ಬಿಣದ ಪೈಪ್, ವಿವಿಧ ರೀತಿಯ ರಾಸಾಯನಿಕ, ಟೈಮಿಂಗ್ ಉಪಕರಣ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲವೂ ಸುಧಾರಿತ ಸ್ಫೋಟಕ ತಯಾರಿಸಲು ಬಳಸುವ ವಸ್ತುಗಳಾಗಿರುವ ಕಾರಣ, ಇವರೆಲ್ಲಾ ದೊಡ್ಡ ದುಷ್ಕೃತ್ಯಕ್ಕೆ ಸಜ್ಜಾಗಿದ್ದು ಖಚಿತಪಟ್ಟಿದೆ.