Hubli Violence ಹುಬ್ಬಳ್ಳಿ ಹಿಂಸಾಚಾರ ಪ್ರೀಪ್ಲಾನ್‌ ಆಗಿತ್ತಾ?ಸ್ಥಳದಲ್ಲಿ 3 ಟ್ರ್ಯಾಕ್ಟರ್‌ ಕಲ್ಲು ಪತ್ತೆ!

- 20 ನಿಮಿಷದಲ್ಲಿ 2000 ಜನ ಜಮಾವಣೆ
- ಇತರೆ ಪ್ರದೇಶದಿಂದಲೂ ಬಂದಿದ್ದ ಜನ
- ಟ್ರ್ಯಾಕ್ಟರ್‌ಗಟ್ಟಲೆ ಕಲ್ಲು, ಚಪ್ಪಲಿ ಎಲ್ಲಿಂದ?:
 

Is Hubli Violence pre planned videos and investigation reveals hints ckm

ಹುಬ್ಬಳ್ಳಿ(ಏ.20): ಕಳೆದ ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ಹಠಾತ್ತನೆ ಸಂಭವಿಸಿದ ಗಲಭೆ, ಹಿಂಸಾಚಾರಕ್ಕೆ ಸಂಬಂಧಿಸಿದ ಒಂದೊಂದೇ ದೃಶ್ಯಾವಳಿಗಳು ಹಾಗೂ ಧ್ವನಿ ಸಂದೇಶಗಳು ಬಹಿರಂಗವಾಗುತ್ತಿದ್ದು, ಇಡೀ ಘಟನೆ ಪೂರ್ವನಿಯೋಜಿತವಾಗಿತ್ತಾ? ಕೆಲ ಕಾಣದ ಕೈಗಳ ಕುಮ್ಮಕ್ಕಿನಿಂದಾಗಿ ವಾಣಿಜ್ಯ ನಗರಿ ಕಂಗೆಡುವಂತಾಯಿತಾ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವವಾಗಿವೆ.

ಮೆಕ್ಕಾ ಮಸೀದಿಯ ಮೇಲೆ ಕೇಸರಿ ಧ್ವಜ ಹಾರಿದಂತೆ ಎಡಿಟ್‌ ಮಾಡಿದ ವಿಡಿಯೋವೊಂದನ್ನು ಕಿಡಿಗೇಡಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಹಾಕಿದಲ್ಲಿಂದ ಆರಂಭವಾದ ವಿವಾದ ಏ.16ರ ಶನಿವಾರ ರಾತ್ರಿ ಭಾರೀ ಗಲಭೆ, ಕಲ್ಲು ತೂರಾಟ, ಹಿಂಸಾಚಾರ ಆಗುವ ಮಟ್ಟಿಗೆ ಮುಂದುವರಿದಿತ್ತು. ಪಿಎಸ್‌ಐ ಸೇರಿ 12 ಪೊಲೀಸರು ಗಾಯಗೊಂಡಿದ್ದರು. ದೇಗುಲವೊಂದರ ಮೇಲೂ ದಾಳಿ ನಡೆದಿತ್ತು. ಬಸ್ಸು, ಪೊಲೀಸ್‌ ಜೀಪು ಸೇರಿ 12 ವಾಹನಗಳು ಜಖಂಗೊಂಡಿದ್ದವು. ಶಾಂತವಾಗಿದ್ದ ಹುಬ್ಬಳ್ಳಿ ನಗರ ಕೆಲವೇ ತಾಸುಗಳಲ್ಲಿ ಉದ್ವಿಗ್ನತೆಯಿಂದ ಬೇಯುವಂತಾಯಿತು. ಹಾಗಾದರೆ ಅಲ್ಪಾವಧಿಯಲ್ಲಿ ಇಷ್ಟುದೊಡ್ಡ ಪ್ರಮಾಣದ ಗಲಭೆ ಸಂಭವಿಸಿದ್ದು ಹೇಗೆ? ಇದರ ಹಿಂದೆ ಯಾರಿದ್ದಾರೆ? ಇದೊಂದು ಯೋಜಿತ ಕೃತ್ಯವೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪೊಲೀಸರು ತನಿಖೆ ನಡೆಸಿದ್ದಾರೆ.

ಹುಬ್ಬಳ್ಳಿ ಗಲಭೆಕೋರರಿಂದ ತಲೆ ಕಡಿಯುವ ಘೋಷಣೆ, ಭಯಾನಕ ವಿಡಿಯೋ ವೈರಲ್!

ಆ ರಾತ್ರಿ ಹಳೆ ಹುಬ್ಬಳ್ಳಿ ಇಂಡಿಪಂಪ್‌ ಸರ್ಕಲ್‌ನಲ್ಲಿ ಇರುವ ಪೊಲೀಸ್‌ ಠಾಣೆ ಎದುರು ಕೇವಲ ಹದಿನೈದರಿಂದ ಇಪ್ಪತ್ತು ನಿಮಿಷಗಳಲ್ಲಿ 2 ಸಾವಿರಕ್ಕೂ ಅಧಿಕ ಉದ್ರಿಕ್ತ ಮುಸಲ್ಮಾನ ಯುವಕರು ಸೇರಿದ್ದರು. ಆರಂಭದಲ್ಲಿ ಸ್ಟೇಟಸ್‌ ಹಾಕಿದ ಯುವಕನನ್ನು ನಮಗೆ ಒಪ್ಪಿಸಿ ಎಂಬ ಬೇಡಿಕೆ ಇಟ್ಟು ಠಾಣೆ ಎದುರಿನ ಬ್ಯಾರಿಕೇಡ್‌ ದಾಟಿ ಒಳಬರಲು ಪ್ರಯತ್ನಿಸಿದ್ದರು. ಇದನ್ನು ಪೊಲೀಸರು ವಿಫಲಗೊಳಿಸಿದ ಮರುಕ್ಷಣ ಏಕಾಏಕಿ ಠಾಣೆಯತ್ತ ಕಲ್ಲುಗಳು ತೂರಿ ಬಂದವು. ಠಾಣೆಯೆದುರು ಲಾಠಿ ಚಾಜ್‌ರ್‍ ಆರಂಭಿಸಿ ಒಂದಿಷ್ಟುಗುಂಪುಗಳನ್ನು ಚದುರಿಸಿದಾಗ ಹಿಂದೂಗಳೇ ಹೆಚ್ಚಿರುವ ಸನಿಹದ ದಿಡ್ಡಿ ಓಣಿ, ಸಂಜೀವಿನಿ ಆಸ್ಪತ್ರೆಯತ್ತ ಉದ್ರಿಕ್ತರು ನುಗ್ಗಿದ್ದರು. ಅಲ್ಲಿ ಮನೆ ರಿಪೇರಿಗೆಂದು ಇಟ್ಟಿದ್ದ ಹೆಂಚುಗಳನ್ನು ಒಡೆದು ದೇವಸ್ಥಾನ, ಮನೆಗಳತ್ತ ಹಾಗೂ ಎದುರು ಬಂದ ಪೊಲೀಸ್‌ ಸಿಬ್ಬಂದಿಯತ್ತ ಎಸೆಯಲು ಮುಂದಾದರು. ಈ ಹಂತದಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ ಪ್ರಚೋದಿತರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡಿದ್ದರು. ಎರಡು ಗಂಟೆಗಳ ಪ್ರಯತ್ನ, ರಾತ್ರಿಯಿಡಿ ಪ್ಯಾಟ್ರೊಲಿಂಗ್‌, ಸೆಕ್ಷನ್‌ 144 ಜಾರಿ ಮೂಲಕ ಪೊಲೀಸರು ಗಲಭೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

ಸದ್ಯ ಪರಿಸ್ಥಿತಿ ಶಾಂತವಾಗಿದ್ದರೂ ಏಕಾಏಕಿ ಗಲಭೆಗೆ ಕಾರಣವೇನು ಎಂಬ ವಿಚಾರ ಇನ್ನೂ ನಿಗೂಢವಾಗಿಯೇ ಇದೆ. ಇದೇ ಮೊದಲ ಬಾರಿ ಮುಸ್ಲಿಂ ನಾಯಕರು ಕೂಡ ಇದು ಪೂರ್ವ ನಿಯೋಜಿತ ಕೃತ್ಯ, ಇದರ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಗೃಹ ಸಚಿವರು ಕೂಡ ಮತೀಯ ಹಿನ್ನೆಲೆ ತನಿಖೆ ಬಗ್ಗೆ ಹೇಳಿಕೆ ನೀಡಿದ್ದಾರೆ. ಇವೆಲ್ಲವೂ ಗಲಭೆ ‘ಫ್ರೀ ಪ್ಲಾನ್‌’ ಆಗಿತ್ತೆ ಎಂಬುದು ಸೇರಿ ಸಾಕಷ್ಟುಪ್ರಶ್ನೆ ಮೂಡಲು ಕಾರಣವಾಗಿವೆ.

ಅನ್ಯಗ್ರಾಮಸ್ಥರೇ ಹೆಚ್ಚು:
ಇನ್ನು, ಬಂಧಿತರೆಲ್ಲ ಕೇವಲ ಸುತ್ತಮುತ್ತಲ ನಿವಾಸಿಗಳೂ ಅಲ್ಲ. ಇತರೆ ಪ್ರದೇಶದವರು ಎಂದು ಪ್ರಕರಣ ದಾಖಲಾಗಿದೆ. ಇವರೆಲ್ಲ ಏಕಕಾಲಕ್ಕೆ ಒಂದೆಡೆ ಸೇರಲು ಕಾರಣವೇನು? ಗಲಭೆಗೂ ಮುನ್ನ ಈ ಎಲ್ಲ ಪ್ರದೇಶದವರಿಗೆ ಸಂದೇಶ ಹೋಗಿತ್ತೆ ಎಂಬ ಪ್ರಶ್ನೆಯೂ ಮೂಡಿದೆ.

Hubli violence ಪೊಲೀಸ್‌ ಕಾರಿನ ಮೇಲೆ ಹತ್ತಿ ನಿಂತು ಹುಬ್ಬಳ್ಳಿ ಉದ್ರಿಕ್ತ ಕೇಕೆ!

ಟ್ರ್ಯಾಕ್ಟರ್‌ಗಟ್ಟಲೆ ಕಲ್ಲು, ಚಪ್ಪಲಿ ಎಲ್ಲಿಂದ?:
ಶನಿವಾರದ ರಾತ್ರಿ ಘಟನೆ ನಡೆದ ಸ್ಥಳದಿಂದ ಸುಮಾರು 3 ಟ್ರಾಕ್ಟರ್‌ಗಳಷ್ಟುಕಲ್ಲು, ಅರ್ಧ ಟ್ರಾಕ್ಟರ್‌ನಷ್ಟುಚಪ್ಪಲಿಗಳ ಸಂಗ್ರಹವಾಗಿತ್ತು. ಒಮ್ಮೆಲೆ ಅಷ್ಟೊಂದು ಕಲ್ಲುಗಳು, ಚಪ್ಪಲಿಗಳು ಎಲ್ಲಿಂದ ಬಂದವು? ಮೊದಲೇ ಸಂಗ್ರಹಿಸಿಟ್ಟುಕೊಂಡಿದ್ದರಾ? ಮಂಗಳೂರಿನಲ್ಲಿ ಹಿಂದೆ ಗಲಭೆ ನಡೆದಾಗಲೂ ಕಲ್ಲು ಸಂಗ್ರಹಿಸಿಟ್ಟುಕೊಂಡ ವಿದ್ಯಮಾನ ಬಯಲಾಗಿತ್ತು. ಬೆಂಗಳೂರಿನ ಕೆ.ಜಿ.ಹಳ್ಳಿ-ಡಿ.ಜೆ.ಹಳ್ಳಿ ಗಲಭೆ ವೇಳೆಯೂ ಇದೇ ರೀತಿಯ ವಿದ್ಯಮಾನ ಘಟಿಸಿತ್ತು. ಹುಬ್ಬಳ್ಳಿಯಲ್ಲೂ ಕಲ್ಲು ತೂರಾಟಕ್ಕೆ ಮೊದಲೇ ಯೋಜಿಸಿ ಕಲ್ಲು ಸಂಗ್ರಹಿಸಲಾಗಿತ್ತಾ ಅಥವಾ ರಸ್ತೆಯಲ್ಲಿ ಸಿಕ್ಕ ಕಲ್ಲನ್ನೇ ಎಸೆಯಲಾಗಿತ್ತಾ ಎಂಬ ಸಂಶಯ ಕಾಡುತ್ತಿದೆ.

ವಿಡಿಯೋ ಕಳ್ಳಾಟ:
ಕಲ್ಲು ತೂರಾಟದ ದೃಶ್ಯಗಳನ್ನು ಎಲ್ಲೂ ಹಂಚಿಕೊಳ್ಳಬೇಡಿ ಎಂದು ಮುಸ್ಲಿಂ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡಿದ್ದ ಆಡಿಯೋ ವೈರಲ್‌ ಆಗಿತ್ತು. ‘ನಿನ್ನೆಯ ಘಟನೆ ಅಲ್ಲಾಹನ ಸೂಚನೆಯಂತೆ ನಡೆದಿದೆ. ಅದರ ವಿಡಿಯೋ ಹಂಚಿಕೊಂಡರೆ ಪೊಲೀಸರು ನಿಮ್ಮನ್ನು ಗುರುತಿಸುತ್ತಾರೆ. ಜೈಲಿಗೂ ಕಳುಹಿಸಬಹುದು’ ಎಂದು ಆಡಿಯೋದಲ್ಲಿ ಹೇಳಲಾಗಿತ್ತು. ತನ್ಮೂಲಕ ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿತ್ತೇ? ಅಷ್ಟೇ ಅಲ್ಲದೆ, ಗಲಭೆಯಲ್ಲಿ ಆರ್‌ಎಸ್‌ಎಸ್‌ ವಿರುದ್ಧದ ಘೋಷಣೆ, ಅಲ್ಲಾಹ್‌ ಕುರಿತು ತಪ್ಪು ಮಾಡಿದರೆ ತಲೆ ಹೋಗುತ್ತದೆ ಎಂಬರ್ಥದ ಘೋಷಣೆಗಳು ಧ್ವನಿಸಿದ್ದವು. ಇನ್ನು, ಮೌಲ್ವಿ ಎಂಬಂತೆ ಕಾಣುವ ವ್ಯಕ್ತಿ ಪ್ರಚೋದನೆ ಆಗುವಂತಹ ಘೋಷಣೆ ಕೂಗಿ, ಈಗ ನಾಪತ್ತೆ ಆಗಿದ್ದಾನೆ. ಇವೆಲ್ಲವೂ ಕೂಡ ಘಟನೆ ಪೂರ್ವ ನಿಯೋಜಿತ ಗಲಭೆ ಎನ್ನುವುದಕ್ಕೆ ಸಾಕ್ಷ್ಯ ಎನ್ನುವುದು ಸದ್ಯ ಚರ್ಚೆಗೆ ಇಂಬು ನೀಡಿವೆ.

ಭಾರೀ ಪ್ರಚೋದನೆ:
ಪೊಲೀಸ್‌ ಜೀಪ್‌ ಮೇಲೆ ಹತ್ತಿದ್ದ ಮೌಲ್ವಿಯೊಬ್ಬ ಗುಂಪನ್ನು ಪ್ರಚೋದಿಸುತ್ತಿದ್ದ. ಉದ್ರಿಕ್ತರು, ‘ತಪ್ಪಿಗೆ ಏನು ಶಿಕ್ಷೆ? ದೇಹದಿಂದ ತಲೆ ಪ್ರತ್ಯೇಕಗೊಳಿಸುವುದು’ ಎಂದು ಪದೇ ಪದೇ ಕೂಗುತ್ತಿದ್ದರು. ತಿರುಚಿದ ವಿಡಿಯೋ ಮಾಡಿದ ವ್ಯಕ್ತಿಗಿಂತ ಹೆಚ್ಚು ಇತರೆ ಅಂಶಗಳು ಅವರ ಗುರಿಯಾಗಿತ್ತು. ಆರೆಸ್ಸೆಸ್‌ ಮುರ್ದಾಬಾದ್‌ ಎಂಬಂಥ ಘೋಷಣೆ ಕೇಳಿ ಬಂದಿದ್ದವು. ಹಾಗಿದ್ದರೆ, ಉದ್ರಿಕ್ತರ ಗುಂಪಿನ ಗುರಿ ಯಾರಾಗಿದ್ದರು ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

ಶಾಂತಿ ಕರೆಗೂ ಬೆಲೆಯಿಲ್ಲ:
ಬೇರೆಲ್ಲ ಪ್ರತಿಭಟನೆ, ಗಲಭೆ ವೇಳೆ ಮುಖಂಡರ ಮಾತು ಕೇಳುವ ಮುಸ್ಲಿಂ ಸಮುದಾಯದವರು ಶನಿವಾರ ರಾತ್ರಿ ಏಕೆ ಮುಖಂಡರ ಕೋರಿಕೆಯನ್ನು ಧಿಕ್ಕರಿಸಿ ಅತೀವ ವರ್ತನೆ ತೋರಿದರೇ? ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರು ಎಸಿಪಿಯವರಿಂದ ಮೈಕ್‌ ಪಡೆದು ಕಾರಿನ ಮೇಲೇರಿ ಶಾಂತವಾಗುವಂತೆ ಕೇಳಿಕೊಂಡಿದ್ದರು. ಮಾತು ಕೇಳದಾಗ ಸನಿಹದ ಫತೇಶಾವಲಿ ದರ್ಗಾಕ್ಕೆ ತೆರಳಿ ಧ್ವನಿವರ್ಧಕದ ಮೂಲಕ ಕಾನೂನು ಕೈಗೆ ತೆಗೆದುಕೊಳ್ಳದಂತೆ ಮನವಿ ಮಾಡಿದ್ದರು. ಆದಾಗ್ಯೂ ಅವರ ಮಾತಿಗೆ ಪ್ರತಿಯಾಗಿ ಕಲ್ಲೇಟು ಬಂದಿತ್ತು. ಶಾಂತಿ ಕರೆಗೆ ಕ್ಯಾರೇ ಎನ್ನುವುದಿಲ್ಲ. ಹಾಗಿದ್ದರೆ ಇಡೀ ಘಟನೆಯ ಹಿಂದೆ ಕೋಮುಗಲಭೆ ಎಬ್ಬಿಸುವ ಹುನ್ನಾರವಿತ್ತಾ? ಇಂತಹ ಅನೇಕ ಪ್ರಶ್ನೆಗಳನ್ನು ಹುಬ್ಬಳ್ಳಿಯ ಘಟನೆ ಹುಟ್ಟು ಹಾಕಿದೆ.

Latest Videos
Follow Us:
Download App:
  • android
  • ios