ಲೇಖಕರು ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ಎರಡು ಘಟನೆಗಳನ್ನು ಹೋಲಿಸುತ್ತಾರೆ. 2011ರಲ್ಲಿ ರಾಜ್ಯಪಾಲರು ಭಾಷಣ ಮೊಟಕುಗೊಳಿಸಿದಾಗ ಅಂದಿನ ಬಿಜೆಪಿ ಸರ್ಕಾರ ಗೌರವ ನೀಡಿತ್ತು. ಆದರೆ ಇತ್ತೀಚೆಗೆ, ರಾಜ್ಯಪಾಲರಿಗೆ ಕಾಂಗ್ರೆಸ್ ಶಾಸಕರು ಅಗೌರವ ತೋರಿದ್ದಾರೆ. ಬಿಜೆಪಿ-ಕಾಂಗ್ರೆಸ್ ನಡುವಿನ ವ್ಯತ್ಯಾಸವಿದು.

ಕೋಟ ಶ್ರೀನಿವಾಸ ಪೂಜಾರಿ

ಸಂಸದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ

2011ರ ಜ.6ರಂದು ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ಅಂದಿನ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಆಗಮಿಸಿದ್ದರು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಸ್ಪೀಕರ್, ಸಭಾಪತಿ, ಕಾನೂನು ಸಚಿವರೂ ವಿಧಾನಸಭೆಯ ಸಭಾಂಗಣ ಪ್ರವೇಶಿಸಿದರು. ಸಭೆ ಪ್ರಾರಂಭವಾಗಿ ರಾಜ್ಯಪಾಲರು ಭಾಷಣಕ್ಕೆ ಎದ್ದು ನಿಂತರು. ಆಗ ವಿಪಕ್ಷ ಶಾಸಕರಲ್ಲಿ ಕೆಲವರು ಹೋ ಎಂದು ಕೂಗಿದರು. ರಾಜ್ಯಪಾಲರು ಭಾಷಣದ ಒಂದೆರಡು ವಾಕ್ಯ ಓದಲು ಪ್ರಾರಂಭಿಸುವಾಗಲೇ, ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಎದ್ದುನಿಂತು ‘ರಾಜ್ಯಪಾಲರೇ.. ನಿಮ್ಮ ಮೇಲೆ ನಮಗೆ ಅಪಾರ ಗೌರವವಿದೆ. ದಯವಿಟ್ಟು ಈ ಸರ್ಕಾರ ಕೊಟ್ಟ ಭಾಷಣ ಓದಬೇಡಿ’ ಎಂದು ಒತ್ತಾಯಿಸಿ ಆರ್ಭಟಿಸಿದರು. ಬಳಿಕ ರಾಜ್ಯಪಾಲರು ಒಂದೇ ನಿಮಿಷದಲ್ಲಿ ಭಾಷಣವನ್ನು ಮಂಡಿಸಿ ಪೀಠದಿಂದ ಕೆಳಗಿಳಿದು ನಿರ್ಗಮಿಸಿದರು. ಅಂದು ಮುಖ್ಯಮಂತ್ರಿ ಯಡಿಯೂರಪ್ಪ, ಕಾನೂನು ಮಂತ್ರಿ ಸುರೇಶ್ ಕುಮಾರ್, ಸ್ಪೀಕರ್ ಕೆ.ಜಿ. ಬೋಪಯ್ಯ, ಸಭಾಪತಿ ಶಂಕರಮೂರ್ತಿ ಮುಂತಾದವರು ರಾಜ್ಯಪಾಲರನ್ನು ಗೌರವಾದರಗಳಿಂದ ಅನುಸರಿಸಿದರು.

ಬಿಜೆಪಿ ಮತ್ತು ಕಾಂಗ್ರೆಸ್‌ ವ್ಯತ್ಯಾಸ:

ಕಾಲಚಕ್ರ ಉರುಳಿ, ಸರ್ಕಾರಗಳು ಬದಲಾಗಿ, ವಿಪಕ್ಷದಲ್ಲಿದ್ದವರು ಆಡಳಿತಕ್ಕೆ ಬಂದು ಇಷ್ಟು ಕಾಲದ ನಂತರ ಅಂದಿನ ಘಟನೆ ಮರುಕಳಿಸುತ್ತದೆ ಎಂದು ನಾನು ಭಾವಿಸಿರಲಿಲ್ಲ. ಅಂದು ಹಂಸರಾಜ್ ಭಾರದ್ವಾಜ್‌ ಅವರಂತೆಯೇ ಇಂದು ಥಾವರ್ ಚಂದ್ ಗೆಹ್ಲೋಟ್ ಸಭೆಯಿಂದ ನಿರ್ಗಮಿಸಿದ್ದಾರೆ. ಆದರಂದು, ರಾಜ್ಯ ಸರ್ಕಾರದ ಬದಲಾಗಿ ವಿಪಕ್ಷದ ಮುಖಂಡರ ಮಾತುಗಳನ್ನು ರಾಜ್ಯಪಾಲರು ಆಲಿಸಿದ್ದರು. ಇಂದು ರಾಜ್ಯ ಸರ್ಕಾರವನ್ನು ಗೌರವದಿಂದ ಕಂಡ ರಾಜ್ಯಪಾಲರು, ಕೇಂದ್ರ ಸರ್ಕಾರವನ್ನು ತನ್ನ ಬಾಯಿಂದ ದೂಷಿಸಬೇಡಿ ಎಂಬ ನಿಲುವನ್ನು ಹೊಂದಿದ್ದರು. ಅಂದು ಭಾಷಣ ಮೊಟಕುಗೊಳಿಸಿ ಹೊರಟ ರಾಜ್ಯಪಾಲರನ್ನು ಅವತ್ತಿನ ಬಿಜೆಪಿ ಸರ್ಕಾರ ಹಿಂಬಾಲಿಸಿ ಗೌರವಿಸಿತ್ತು. ಇಂದು ರಾಜ್ಯಪಾಲರನ್ನು ಕಾಂಗ್ರೆಸ್‌ ಸರ್ಕಾರದ ಶಾಸಕರು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಇಷ್ಟಕ್ಕೂ ರಾಜ್ಯಪಾಲರು ರಾಷ್ಟ್ರಗೀತೆಯ ಸಂದರ್ಭದ ವರೆಗೂ ಇರಬೇಕು ಎನ್ನುವ ಕಾನೂನು ಮಂತ್ರಿ ಹೆಚ್.ಕೆ. ಪಾಟೀಲರು 2011ರಲ್ಲಿ ರಾಷ್ಟ್ರಗೀತೆಯವರೆಗೆ ನಿಲ್ಲದೆ ಹೋದ ರಾಜ್ಯಪಾಲರ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಚುನಾಯಿತ ರಾಜ್ಯ ಸರ್ಕಾರ ಕೊಟ್ಟ ಭಾಷಣವನ್ನು ರಾಜ್ಯಪಾಲರು ಓದಬೇಕು, ಅದವರ ಕರ್ತವ್ಯ ಎನ್ನುವವರು, ತಾವು ರಾಜ್ಯಪಾಲರ ಬಾಯಿಂದ ಹೇಳಿಸುವ ಮಾತುಗಳಲ್ಲಿ ತಮ್ಮ ಜವಾಬ್ದಾರಿಯನ್ನು ಮರೆಯಬಾರದಿತ್ತು.

ಅಂದೂ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರ್ಕಾರ ಸಿದ್ಧಪಡಿಸಿ ಕೊಟ್ಟ ಭಾಷಣ ಓದದೆ ಹೋದದ್ದು ತಪ್ಪು ಎಂದವರಿದ್ದರು. ಆಗ ಯಡಿಯೂರಪ್ಪನವರು, ‘ಸಿದ್ಧಪಡಿಸಿಕೊಡುವುದಷ್ಟೇ ರಾಜ್ಯ ಸರ್ಕಾರ ಮತ್ತು ಸಂಪುಟದ ಜವಾಬ್ದಾರಿ. ಹೀಗೇ ಓದಬೇಕು, ಇಷ್ಟೇ ಓದಬೇಕು ಎಂದು ನಿರ್ಬಂಧಿಸುವ ಹಕ್ಕು ನಮಗಿಲ್ಲ’ ಎಂದಿದ್ದರು. ಆದರೆ, ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್‌. ಪೊನ್ನಣ್ಣನವರು, ‘ರಾಜ್ಯಪಾಲರು ಓದತಕ್ಕದ್ದು’ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇಡೀ ಸರ್ಕಾರ ರಾಜ್ಯಪಾಲರಂತಹ ಸಾಂವಿಧಾನಾತ್ಮಕ ಹುದ್ದೆಯಲ್ಲಿರುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ ಮಾಡಿದ್ದು ಕಂಡುಬರುತ್ತಿದೆ.

ಸಾಂವಿಧಾನಿಕ ಹುದ್ದೆಗೆ ಬಿಜೆಪಿ ಗೌರವ:

2011ರಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಅನುಮೋದನೆ ಮಾಡಿ ಮಾತನಾಡುವ ಅವಕಾಶ ನನಗೆ ದೊರಕಿತ್ತು. ‘ರಾಜ್ಯಪಾಲರು ಭಾಷಣ ಮಾಡಿದ್ದನ್ನೇ ಕೇಳಿಲ್ಲ ಎಂದಮೇಲೆ ವಂದನಾ ನಿರ್ಣಯ ಹೇಗೆ ಮಾಡುತ್ತೀರಿ?’ ಎಂದು ವಿಪಕ್ಷಗಳು ಪ್ರಶ್ನಿಸಿದ್ದವು. ಆಗ ನಾನು ಕೊಟ್ಟ ಉತ್ತರವೆಂದರೆ, ‘ಹೌದು. ನಮ್ಮ ರಾಜ್ಯಪಾಲರ ಸ್ವರ ಮೃದುವಾದ ಕೋಗಿಲೆ ಸ್ವರದಂತೆ. ಕೋಗಿಲೆಯ ಸ್ವರ ಸಾವಿರ ಕಾಗೆಗಳ ಕಿರುಚಾಟದ ನಡುವೆ ಹೊರಜಗತ್ತಿಗೆ ಕೇಳದಿದ್ದರೆ ಅದಕ್ಕೆ ಕಿರುಚಿದ ಕಾಗೆಗಳನ್ನೇ ದೂರಬೇಕು’ ಎಂದು ನಮ್ಮ ಸರ್ಕಾರವನ್ನೇ ವಿರೋಧಿಸಿದ ರಾಜ್ಯಪಾಲರನ್ನು ನಾನಂದು ಸಮರ್ಥಿಸಿದ್ದೆ. ಯಾವುದೇ ಸರ್ಕಾರವಿದ್ದರೂ ಸಾಂವಿಧಾನಿಕ ಹುದ್ದೆಯನ್ನು ಗೌರವಿಸಬೇಕಾದದ್ದು ಆಯಾ ಸರ್ಕಾರಗಳ ಜವಾಬ್ದಾರಿ.

ಅಂದು ಈ ವಿವಾದ ನಡೆಯುತ್ತಿರುವಾಗ ಹಂಸರಾಜ್ ಭಾರದ್ವಾಜ್‌ ಒಂದೆಡೆ ಮಾತನಾಡುತ್ತಾ, ‘ನಾನೊಬ್ಬ ಕಾಂಗ್ರೆಸ್ಸಿಗ. ನಮ್ಮ ಸರ್ಕಾರವನ್ನು ರಾಜ್ಯದಲ್ಲಿ ಕೂರಿಸಿಯೇ ನನ್ನ ನಿರ್ಗಮನ’ ಎಂದಿದ್ದರು. ಆಗ ನಮ್ಮ ಸಂಘಟನೆಯ ಒಳಗೆ ಇದೊಂದು ಗಂಭೀರ ಚರ್ಚೆಯಾಗಿತ್ತು. ರಾಜ್ಯಪಾಲರೊಬ್ಬರ ಬಾಯಿಂದ ಇಂತಹ ಮಾತುಗಳು ಬರಬಹುದೇ ಎಂಬ ಜಿಜ್ಞಾಸೆಯ ಚರ್ಚೆ ನಡೆದಾಗ ಅಂದಿನ ಕಾನೂನು ಮಂತ್ರಿ ಸುರೇಶ್ ಕುಮಾರ್, ‘ರಾಜ್ಯಪಾಲರು ಹೀಗೆ ಮಾತನಾಡುವಂತಿಲ್ಲ ಮತ್ತು ಮಾತನಾಡಬಾರದು. ಆದರೆ ನಾವಿದನ್ನು ಹೊರಗಡೆ ಚರ್ಚಿಸುವುದು ಸರಿಯಲ್ಲ’ ಎಂದಿದ್ದರು.

ಯಡಿಯೂರಪ್ಪನವರ ಆದರ್ಶ:

ಕೆಲವೇ ದಿನಗಳಲ್ಲಿ ಯಡಿಯೂರಪ್ಪನವರ ಆಡಳಿತದ ವಿರುದ್ಧ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ಕಳಿಸಿದ್ದರು ಮತ್ತು ಮುಖ್ಯಮಂತ್ರಿಗಳ ಮೇಲೆ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಅನುಮತಿ ನೀಡಿದ್ದರು. ಆಗ ಸಚಿವ ಸಂಪುಟದ ಹಿತೈಷಿಗಳನ್ನು ಕರೆದು ಯಡಿಯೂರಪ್ಪನವರು ಹೇಳಿದ್ದು, ‘ರಾಜ್ಯಪಾಲರು ನಮ್ಮ ವ್ಯತಿರಿಕ್ತವಾಗಿ ಏನೇ ನಿರ್ಧಾರ ತೆಗೆದುಕೊಂಡರೂ ಯಾವುದೇ ಹೇಳಿಕೆ ನೀಡಬೇಡಿ. ಪಕ್ಷ ಮತ್ತು ಸರ್ಕಾರದ ವರ್ಚಸ್ಸು ಕಡಿಮೆಯಾಗಬಾರದು ಎಂಬ ಕಾರಣಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ನಡೆದೇ ಹೋಗೋಣ ಬನ್ನಿ’ ಎನ್ನುತ್ತಲೇ ಮುಖ್ಯಮಂತ್ರಿ ನಿವಾಸದಿಂದ ರಾಜಭವನಕ್ಕೆ ಹೆಜ್ಜೆ ಹಾಕಿದ್ದರು. ರಾಜಭವನದ ಒಳಹೋಗುವಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹೊರಬರುತ್ತಲೇ ಮಾಜಿ ಮುಖ್ಯಮಂತ್ರಿಯಾಗಿದ್ದರು. ಆಗ ಸಚಿವ ಸಂಪುಟದ ಸಹೋದ್ಯೋಗಿಗಳನ್ನು ಕರೆದು, ‘ರಾಜ್ಯಪಾಲರು ಪ್ರೀತಿಯಿಂದ ಮಾತನಾಡಿಸಿದರು. ಯಡಿಯೂರಪ್ಪನವರೇ.. ನಿಮ್ಮ ಬಗ್ಗೆ ನಾನು ವರದಿ ಕಳಿಸಿರಬಹುದು, ಮುಂದೆ ನೀವು ಮತ್ತೊಮ್ಮೆ ಮುಖ್ಯಮಂತ್ರಿಗಳಾಗಿ ಬರುತ್ತೀರಿ ಎಂಬ ಭರವಸೆ ನನಗಿದೆ ಎಂದು ರಾಜ್ಯಪಾಲರು ಹೇಳಿದರು’ ಎಂದಿದ್ದರು.

ಸೌಜನ್ಯ ರಹಿತ ಸರ್ಕಾರ: 

ಈ ಎಲ್ಲಾ ಘಟನೆಗಳು ನಡೆದು 15 ವರ್ಷಗಳು ಕಳೆದಿವೆ. ಮೊನ್ನೆ ರಾಜ್ಯಪಾಲರು ಮತ್ತು ಸರ್ಕಾರದ ನಡುವಿನ ಸಂಘರ್ಷವನ್ನು ನೋಡಿದ ನಂತರ, ಈ ಪ್ರಕರಣಕ್ಕೆ ಸರ್ಕಾರ ಸೌಜನ್ಯದ ತೇಪೆಯಾದರೂ ಹಾಕಬಹುದು ಎಂದು ಭಾವಿಸಿದ್ದೆ. ದುರದೃಷ್ಟಕ್ಕೆ ಸರ್ಕಾರ ಆ ಸೌಜನ್ಯವನ್ನೂ ತೋರಲಿಲ್ಲ. ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು, ‘ರಾಜ್ಯಪಾಲರಿಗೆ ಕೈ ತೋರಿಸದೆ ಕಾಲು ತೋರಿಸಬೇಕೆ?’ ಎಂದಿದ್ದು ಸದನದಲ್ಲಿ ಯಾವ ಶಬ್ದ ಬಳಕೆಯೂ ತಪ್ಪಲ್ಲ ಎಂಬ ಕೆಟ್ಟ ಸಂದೇಶವನ್ನು ಹೊರ ಜಗತ್ತಿಗೆ ರವಾನಿಸಿತು. ಸರ್ಕಾರ ನಡೆಸುವ ಸಚಿವರು ಮತ್ತು ಶಾಸಕರು ತಾಳ್ಮೆ, ಸಹನೆಯಿಂದ ಇರಬೇಕು. ವಿಪಕ್ಷಗಳು ರೇಗಾಡಿದರೆ ಅನುಭವದ ಮಾತುಗಳಿಂದ ಅವರನ್ನು ಮಣಿಸಬೇಕೇ ಹೊರತು ಜಗಳದ ಭಾಷೆಯಿಂದ ಅಲ್ಲ ಎಂದು ನಮಗೆಲ್ಲ ಸಲಹೆ ಕೊಟ್ಟವರು ಸಭಾಪತಿ ಬಸವರಾಜ ಹೊರಟ್ಟಿಯವರು.

ಸದನದಲ್ಲಿ ಇಂತಹ ಸಂಘರ್ಷದ ವಾತಾವರಣ ನಡೆಯುತ್ತಿರುವಾಗ ಹೊರಟ್ಟಿಯವರು ಮೌನ ವಹಿಸಿದ್ದಾರೋ ಅಥವಾ ಪೀಠದ ಮಾತುಗಳು ಅನುಷ್ಠಾನ ಆಗದಷ್ಟು ಸದನ ಅಪಾಯದಲ್ಲಿದೆಯೋ ಅರ್ಥವಾಗುತ್ತಿಲ್ಲ. ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಮತ್ತು ಅಂದಿನ ವಿಪಕ್ಷ ನಾಯಕ ದೇವೇಗೌಡರಿಗೆ ವಾಗ್ಯುದ್ಧ ಶುರುವಾದಾಗ, ವಿಚಾರದ ಬಲದ ಮೇಲೆ ಚರ್ಚೆ ನಡೆಯುತ್ತಿತ್ತೇ ವಿನಃ ತೋಳ್ಬಲ ಮತ್ತು ಗಂಟಲಿನ ಬಲದಿಂದಲ್ಲ. ಆದರಿಂದು ರಾಜ್ಯಪಾಲರಿಗೆ ಅಡ್ಡಗಟ್ಟಿ ಕೈ ತೋರಿಸಿದ್ದು ಸರಿಯೇ ಎಂಬ ವಿಪಕ್ಷದ ಆಕ್ರೋಶಕ್ಕೆ ಆಳುವವರು ಕೊಟ್ಟ ಉತ್ತರ ‘ರಾಜ್ಯಪಾಲರಿಗೆ ಕೈ ತೋರಿಸದೆ ಕಾಲು ತೋರಿಸಲು ಆಗುತ್ತದೆಯೇ?’ ಎಂಬುದು. ಸ್ವತಃ ಕಾನೂನು ಪದವೀಧರರಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂವಿಧಾನಬದ್ಧ ಹುದ್ದೆಗೆ ತಮ್ಮದೇ ಪಕ್ಷದ ಶಾಸಕರು ಅವಮಾನ ಮಾಡುವಾಗ ಮೌನ ವಹಿಸಿದ್ದು ವಿಪರ್ಯಾಸ.