ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಪಟಾಕಿ ಸಿಡಿಸಿ, ಸಿಹಿ ಹಂಚಿ, ಕೇಕೆ ಕತ್ತರಿಸಿ ಸಂಭ್ರಮಿಸಿದರು. ಹೋಟೆಲ್‌, ಪಬ್‌, ರೆಸ್ಟೋರೆಂಟ್‌ಗಳಲ್ಲಿಯೂ ಸಂಭ್ರಮ ಮನೆ ಮಾಡಿತ್ತು.

ಬೆಂಗಳೂರು (ಜೂ.4): ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಕಪ್‌ ಗೆಲ್ಲುತ್ತಿದ್ದಂತೆ ಸಿಲಿಕಾನ್‌ ಸಿಟಿಯಲ್ಲಿ ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿ ‘ಈ ಸಲ ಕಪ್‌ ನಮ್ದು’ ಎಂದು ಆರ್‌ಸಿಬಿಯನ್ನರು ಸಂಭ್ರಮಿಸಿದರು.

ಆರ್‌ಸಿಬಿ ಎದುರು 6 ರನ್‌ ಅಂತರದಲ್ಲಿ ಪಂಜಾಬ್‌ ಸೋಲುತ್ತಿದ್ದಂತೆ ನಗರದಲ್ಲಿ ಆರಂಭವಾದ ಸಂಭ್ರಮಾಚರಣೆ ಅಲ್ಲಿಂದ ನಸುಕಿನವರೆಗೂ ಮುಂದುವರಿದಿತ್ತು. 18 ವರ್ಷಗಳ ಕಾಯುವಿಕೆ ಕೊನೆಯಾದ ಕಾರಣ ಖುಷಿ ಇಮ್ಮಡಿಯಾಗಿತ್ತು. ಹದಿನೆಂಟರ ಗಂಟು ಆರ್‌ಸಿಬಿ ನಂಟು ಘೋಷಣೆ ನಿಜವಾಗುತ್ತಿದ್ದಂತೆ, ಆರ್‌ಸಿಬಿ, ಆರ್‌ಸಿಬಿ ಘೋಷಣೆ ಎಲ್ಲೆಡೆ ಮಾರ್ಧನಿಸಿತು.

ಇಲ್ಲಿನ ವಿಜಯನಗರ, ರಾಜಾಜಿ ನಗರ, ಶಿವಾಜಿನಗರದ ಚಾಂದನಿಚೌಕ್‌ ಸರ್ಕಲ್‌ ಸೇರಿದಂತೆ ಐಟಿ ಕಾರಿಡಾರ್‌ ವೈಟ್‌ಫೀಲ್ಡ್‌, ಕೋರಮಂಗಲ ಹೊಟೆಲ್, ಪಬ್ ,ರೆಸ್ಟೋರೆಂಟ್‌ಗಳಲ್ಲಿ ಅಳವಡಿಸಿದ್ದ ಬೃಹತ್‌ ಎಲ್‌ಇಡಿ ಬೃಹತ್ ಪರದೆ ಎದುರೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ವಿರಾಟ್ ಕೊಹ್ಲಿ, ರಜತ್‌ ಪಾಟಿದಾರ್‌ ಹೆಸರುಗಳನ್ನು ಹೇಳಿ ಜೈಕಾರ ಕೂಗಿದರು. ಪಂದ್ಯದ ನಡುವೆ ಪಂಜಾಬ್‌ನ ನಾಯಕ ಶ್ರೇಯಸ್ ಅಯ್ಯರ್‌ ವಿಕೇಟ್‌ ಬಿದ್ದಾಗ, ಇಂಗ್ಲಿಸ್‌ ಔಟ್‌ ಆದಾಗ ಅಭಿಮಾನಿಗಳ ಕೇಕೆ, ಶಿಳ್ಳೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

ಗೆಲವು ಖಚಿತವಾಗುತ್ತಿದ್ದಂತೆ ಹಲವೆಡೆ ಸಂಭ್ರಮಾಚರಣೆ ಶುರುವಾಗಿತ್ತು.

ಆರ್‌ಸಿಬಿ ಚಾಂಪಿಯನ್​ ಪಟ್ಟಕ್ಕೇರುತ್ತಿದ್ದಂತೆ ಯುವ ಕರ್ನಾಟಕ ವೇದಿಕೆಯ ಸದಸ್ಯರು ಸಿಹಿ ಹಂಚಿದರು. ಆರ್‌ಸಿಬಿ ಜರ್ಸಿ ಹಿಡಿದು ಕೇಕೆ ಹಾಕಿದರು. ನಗರದ ಬಹುತೇಕ ಕಡೆಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸಿಹಿ ಹಂಚಿಕೆ ನಡೆಯಿತು. ನಗರದ ಹಲವೆಡೆ ಇಂದು ಕೂಡ ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

18 ವರ್ಷದಿಂದ ಆರ್‌ಸಿಬಿ ಬೆಂಬಲಿಸುತ್ತಿದ್ದೇವೆ. ಈ ಸೀಸನ್‌ನಲ್ಲಿ ತಂಡ ಅದ್ಭುತ ಪ್ರದರ್ಶನ ನೀಡಿ ಸಂಘಟಿತ ಹೋರಾಟದಿಂದ ಗೆದ್ದು ಚಾಂಪಿಯನ್‌ ಆಗಿ ಅಭಿಮಾನಿಗಳ ಕನಸು ನನಸಾಗಿದೆ ಎಂದು ಶಿವಾಜಿನಗರದಲ್ಲಿ ಮಹ್ಮದ್‌ ಇದ್ರಿಸ್‌ ಹೇಳಿದರು.

ಇನ್ನು, ಫೈನಲ್‌ ಪಂದ್ಯದ ಹಿನ್ನೆಲೆಯಲ್ಲಿ ನಗರದ ಹೊಟೆಲ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌, ಪಬ್‌ಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸಂಜೆ 6.30ರಿಂದಲೇ ಗ್ರಾಹಕರು ಸೇರಿದ್ದರು. ಇಲ್ಲೆಲ್ಲ ಭರ್ಜರಿ ವ್ಯಾಪಾರ ಆಯಿತು. ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ತಿನಿಸು, ಪೇಯಗಳನ್ನು ನೀಡಲಾಗಿತ್ತು. ಅಭಿಮಾನಿಗಳನ್ನು ನಿಯಂತ್ರಿಸಲು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಿರಲು ಹೆಚ್ಚಿನ ಬೌನ್ಸರ್‌ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು. ಜತೆಗೆ ಪೊಲೀಸ್‌ ಭದ್ರತೆಯೂ ಎಲ್ಲೆಡೆ ಇತ್ತು.

ದೇವಸ್ಥಾನದಲ್ಲಿ ಪೂಜೆ: 

ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿ ಈಡುಗಾಗಿ ಒಡೆದಿದ್ದರು. ‘ಈ ಸಲ ಕಪ್ ನಮ್ದೇ’ ಎಂದು ಜೈಕಾರ ಕೂಗುತ್ತಾ ಈಡುಗಾಯಿ ಸೇವೆ ಅರ್ಪಿಸಿದರು. ಚಾಮರಾಜಪೇಟೆಯ ದೇವಸ್ಥಾನ, ರಾಜರಾಜೇಶ್ವರಿ ನಗರದ ನಿಮಿಷಾಂಬಾ ದೇವಾಲಯದಲ್ಲಿಯೂ ಅಭಿಮಾನಿಗಳು ಹೋಮ ನೆರವೇರಿಸಿದರು. ಟ್ರೋಫಿಯ ಫೋಟೋ ಇಟ್ಟು ಪುರೋಹಿತರಿಂದ ಪೂಜೆ ಸಲ್ಲಿಸಿದ್ದರು.