ಐಪಿಎಲ್‌ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿಗಾಗಿ ರಾಜ್ಯಾದ್ಯಂತ ಅಭಿಮಾನಿಗಳು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆರ್‌ಸಿಬಿಗೆ ಶುಭ ಹಾರೈಸಿದ್ದರು.

ಬೆಂಗಳೂರು (ಜೂ.4): 18ನೇ ಆವೃತ್ತಿ ಐಪಿಎಲ್‌ನಲ್ಲಿ ಫೈನಲ್‌ ಪ್ರವೇಶಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕಪ್‌ ಗೆದ್ದು ಬರಲಿ ಎಂದು ರಾಜ್ಯಾದ್ಯಂತ ಆರ್‌ಸಿಬಿ ಅಭಿಮಾನಿಗಳು ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊತ್ತಿದ್ದ ಹರಕೆ ಫಲಿಸಿದೆ. ಅಭಿಮಾನಿಗಳ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೂಡ ಆರ್‌ಸಿಬಿ ಪಂದ್ಯ ಗೆಲ್ಲಲಿ ಎಂದು ಶುಭ ಹಾರೈಸಿದ್ದರು.

ಮೈಸೂರು, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಆರ್‌ಸಿಬಿ ಅಭಿಮಾನಿಗಳು ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ ಗೆದ್ದು ಬಾ ಆರ್‌ಸಿಬಿ ಎಂದು ಶುಭ ಹಾರೈಸಿದ್ದರು.

ಮೈಸೂರು ನಗರದ ಕೆ.ಜಿ.ಕೊಪ್ಪಲಿನಲ್ಲಿರುವ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಹಿಳೆಯರು ಮಂಗಳವಾರ ಆರ್‌ಸಿಬಿ ಗೆಲುವಿಗಾಗಿ ಉಪವಾಸದಲ್ಲಿ ಕುಂಕುಮ ಅಭಿಷೇಕ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದರು. ಟಿ.ನರಸೀಪುರ ತಾಲೂಕಿನ ರಾಷ್ಟ್ರೀಯ ವಾಲಿಬಾಲ್ ಆಟಗಾರ ಮಣಿಕಂಠ ರಾಜ್‌ಗೌಡ ಅವರು ಆರ್‌ಸಿಬಿ ಗೆಲುವಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

ಶಿವಾಷ್ಟೋತ್ತರ ಪೂಜೆ:

ಇನ್ನು ಚಾಮರಾಜನಗರದಲ್ಲಿ ಮಾದಪ್ಪನಿಗೆ ಆರ್‌ಸಿಬಿ ಅಭಿಮಾನಿಗಳು ಜಯವಾಗಲೆಂದು ಮಲೆಮಾದೇಶ್ವರನಿಗೆ ಶಿವಾಷ್ಟೋತ್ತರ ಪೂಜೆ ಸಲ್ಲಿಸಿ, ಈಡುಗಾಯಿ ಒಡೆದು ಜಯಘೋಷ ಕೂಗಿದ್ದರು. ಇಂದಿ‌ನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ದು ಬೀಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದರು. ದೇಗುಲ ಮುಂಭಾಗ ಆರ್‌ಸಿಬಿ ಜೆರ್ಸಿ ಹಿಡಿದು ಜಯಘೋಷ ಕೂಗಿದ ಅಭಿಮಾನಿಗಳು ಈ ಸಲ ಕಪ್ ನಮ್ದೆಯಾಗಲಿ ಎಂದು ಮಾದಪ್ಪನಿಗೆ ಪ್ರಾರ್ಥನೆ ಸಲ್ಲಿಸಿದ್ದರು.

ಶಿವಮೊಗ್ಗದ ಗಾಂಧಿಬಜಾರ್‌ನಲ್ಲಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ಕ್ರಿಕೆಟ್ ಪ್ರೇಮಿಗಳು ಆರ್‌ಸಿಬಿ ಗೆಲವಿಗಾಗಿ ವಿಶೇಷ ಪೂಜೆ ಸಲ್ಲಿಸಿದ್ದರು.--

ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗು ಬಡಿದು ಕಪ್‌ ಮುಡುಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಆರ್‌ಸಿಬಿಯ ಹುಡುಗರು ನನಸಾಗಿದ್ದಾರೆ. ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್‌ ಕೊಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ. ನಿಷ್ಠೆ, ಬದ್ಧತೆಯಿದೆ, ಬೌಲಿಂಗ್‌, ಬ್ಯಾಟಿಂಗ್‌, ಫೀಲ್ಡಿಂಗ್‌, ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್‌ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ.. ಕೊನೆಯದಾಗಿ, ಈ ಸಲ ಕಪ್‌ ನಮ್ದೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ.