* ತಮಿಳುನಾಡು ಮಾಜಿ ಸಿಎಂ ಜಯಾ ಆಪ್ತೆಗೆ ಪರಪ್ಪನ ಅಗ್ರಹಾರ ಜೈಲಲ್ಲಿ ವಿಶೇಷ ಸೌಲಭ್ಯ* ಕೃಷ್ಣ ಕುಮಾರ್, ಡಾ.ಆರ್. ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ* ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ
ಬೆಂಗಳೂರು(ಫೆ.03): ತಮಿಳುನಾಡು(Tamil Nadu) ಮಾಜಿ ಮುಖ್ಯಮಂತ್ರಿ ಜಯಲಲಿತಾ(J Jayalalithaa) ಆಪ್ತೆ ವಿ.ಕೆ. ಶಶಿಕಲಾ(VK Sasikala) ಮತ್ತು ಇಳವರಸಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅನಧಿಕೃತವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳವು (ACB), ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ.
ಪ್ರಕರಣದ ಮೊದಲನೆ ಆರೋಪಿ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯಅಧೀಕ್ಷಕ ಕೃಷ್ಣ ಕುಮಾರ್ ಮತ್ತು ಎರಡನೇ ಆರೋಪಿ ಕರ್ನಾಟಕ ಕಾರಾಗೃಹ ಅಕಾಡೆಮಿ ಉಪ ನಿರ್ದೇಶಕಿ ಡಾ.ಆರ್. ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಲಾಗಿದೆ ಎಂದು ಹೈಕೋರ್ಟ್‌ಗೆ(High Court) ಬುಧವಾರ ಮಾಹಿತಿ ನೀಡಲಾಯಿತು.
AIADMK ಬಾಸ್ ಹುದ್ದೆ ಬಿಡಲ್ಲ: ಸಿಎಂ, ಡಿಸಿಎಂ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಶಶಿಕಲಾ
ಪ್ರಕರಣದ ತನಿಖೆ(Investigation) ಪೂರ್ಣಗೊಳಿಸಿ ವರದಿ ಸಲ್ಲಿಸಲು ವಿಧಿಸಲಾಗಿರುವ ಗಡುವು ವಿಸ್ತರಣೆಗೆ ಕೋರಿ ಎಸಿಬಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರ ಮತ್ತು ಎಸಿಬಿ ಪರ ವಕೀಲರು ಈ ಮಾಹಿತಿ ನೀಡಿದರು. ಸರ್ಕಾರಿ ವಕೀಲರು, ಇಬ್ಬರು ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಎಸಿಬಿಗೆ ಪೂರ್ವಾನುಮತಿ ನೀಡಿ ರಾಜ್ಯ ಸರ್ಕಾರ 2021ರ ಡಿ.30ರಂದು ಆದೇಶಿಸಿದೆ ಎಂದು ತಿಳಿಸಿದರು.
ಎಸಿಬಿ ಪರ ವಕೀಲರು, ಪ್ರಕರಣ ತನಿಖೆ ಈಗಾಗಲೇ ಪೂರ್ಣಗೊಂಡಿದ್ದು, ವಿಚಾರಣಾ ನ್ಯಾಯಾಲಯಕ್ಕೆ 2022ರ ಜ.7ರಂದು ದೋಷಾರೋಪ ಪಟ್ಟಿಸಲ್ಲಿಸಲಾಗಿದೆ ಎಂದರು.
ಈ ಹೇಳಿಕೆ ದಾಖಲಿಸಿಕೊಂಡು ನ್ಯಾಯಪೀಠ, ಈಗಾಗಲೇ ಸಕ್ಷಮ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಲಾಗಿದೆ. ಆರೋಪಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರ ಪೂರ್ವಾನುಮತಿಯೂ ನೀಡಿದೆ. ಹಾಗಾಗಿ ಮಧ್ಯಂತರ ಅರ್ಜಿಯಲ್ಲಿ ಮುಂದಿನ ನಿರ್ದೇಶನ ನೀಡುವ ಅಗತ್ಯ ಇಲ್ಲವಾಗಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.
ಸರ್ಕಾರದ ಆದೇಶದಲ್ಲಿನ ವಿವರ:
ಬೆಂಗಳೂರು ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ (ಪ್ರಸ್ತುತ ಬೆಳಗಾವಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು) ಕೃಷ್ಣ ಕುಮಾರ್ ಮತ್ತು ಅಧೀಕ್ಷಕಿ ಡಾ.ಆರ್.ಅನಿತಾ (ಪ್ರಸ್ತುತ ಬೆಂಗಳೂರಿನ ಕರ್ನಾಟಕ ಕಾರಾಗೃಹ ಅಕಾಡೆಮಿಯ ಉಪ ನಿರ್ದೇಶಕಿ) ಅವರು ಶಶಿಕಲಾ ಮತ್ತು ಇಳವರಸಿ ಅವರಿಗೆ ಅನಧಿಕೃತವಾಗಿ ವಿಶೇಷ ಸೌಲಭ್ಯ ಕಲ್ಪಿಸಿದ್ದಾರೆ. ಶಶಿಕಲಾಗೆ ಮಹಿಳಾ ಕೈದಿಗಳ ವಿಭಾಗದ ಕಾರಿಡಾರ್‌ನ್ನು ಅನಧಿಕೃತವಾಗಿ ಬಳಸಿಕೊಳ್ಳಲು, ಇತರೆ ಸಜಾಬಂಧಿಗಳಿಂದ ದೂರವಾಗಿ ಸ್ವತಂತ್ರವಾಗಿ ವಾಸಿಸಲು ಅನುಕೂಲ ಮಾಡಿಕೊಟ್ಟಿದ್ದಾರೆ. ಮಂಚ ಹಾಗೂ ಹಾಸಿಗೆ ವ್ಯವಸ್ಥೆ ಒದಗಿಸಿದ್ದಾರೆ. ಅವರ ಸಂದರ್ಶನಕ್ಕೆ ಬಂದವರಿಗೆ ಹೆಚ್ಚಿನ ಸಮಯಾವಕಾಶ ನಿಡಲಾಗಿದೆ. ಜೈಲಾಧಿಕಾರಿಗಳ ಕಚೇರಿಯಲ್ಲಿಯೇ ಸಂದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ದೃಢಪಟ್ಟಿರುತ್ತದೆ. ಹಾಗಾಗಿ, ಅವರ ವಿರುದ್ಧ ಐಪಿಸಿ ಕಲಂ 120(ಬಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆ -1988ರ ಕಲಂ 13(1)(ಸಿ) ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ನೀಡಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ತಮಿಳುನಾಡಿಗೆ ತೆರಳಿದ ಶಶಿಕಲಾ: ಬೆಂಗ್ಳೂರಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್
ಅಲ್ಲದೆ, ಶಶಿಕಲಾಗೆ ವಿಶೇಷ ಸೌಲಭ್ಯ(Special Facility) ಕಲ್ಪಿಸಲು ಲಂಚ ಪಡೆದ ಆರೋಪ ಸಂಬಂಧ ಕಾರಾಗೃಹ(Jail) ಡಿಜಿಪಿಯಾಗಿದ್ದ ಎಚ್.ಎನ್. ಸತ್ಯನಾರಾಯಣ ಅವರು ನಿರ್ದೋಷಿಯಾಗಿದ್ದಾರೆ ಎಂದು ಎಸಿಬಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ
ಈ ಮಧ್ಯೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ(Prosecution) ಪೂರ್ವಾನುಮತಿ ನೀಡಿದ ಸರ್ಕಾರದ ಆದೇಶ ರದ್ದು ಕೋರಿ ಆರೋಪಿಯಾಗಿರುವ ಡಾ.ಆರ್. ಅನಿತಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಏಕ ಸದಸ್ಯ ನ್ಯಾಯಪೀಠ, ಅನಿತಾ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
