ಬೆಂಗಳೂರು/ ಆನೇಕಲ್‌(ಫೆ.09): ಬರೋಬ್ಬರಿ ನಾಲ್ಕು ವರ್ಷಗಳ ಜೈಲುವಾಸದ ಬಳಿಕ ಎಐಎಡಿಎಂಕೆ ಮಾಜಿ ನಾಯಕಿ ವಿ.ಕೆ.ಶಶಿಕಲಾ ನಟರಾಜನ್‌ ಅವರು ತಮಿಳುನಾಡಿಗೆ ತೆರಳಿದ್ದು, ಬೆಂಗಳೂರಿನ ದೇವನಹಳ್ಳಿ ಬಳಿಯ ರೆಸಾರ್ಟ್‌ನಿಂದಲೇ ನೂರಾರು ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು.

ಸೋಮವಾರ ಬೆಳಗ್ಗೆ 7ಕ್ಕೆ ಪ್ರೆಸ್ಟೀಜ್‌ ಗಾಲ್ಫ್‌ಫಶೈರ್‌ ರೆಸಾರ್ಟ್‌ನಿಂದ ಎಸ್ಕಾರ್ಟ್‌ ಹಾಗೂ ಬೆಂಬಲಿಗರ ಭದ್ರತೆ ನಡುವೆ ಶಶಿಕಲಾ ತಮಿಳುನಾಡಿಗೆ ತೆರಳಿದರು. ರೆಸಾರ್ಟ್‌ನಿಂದ ಶಶಿಕಲಾ ಹೊರಗೆ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ನೂರಾರು ಮಂದಿ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಕುಂಬಳಕಾಯಿ ಒಡೆದು ಸ್ವಾಗತ ಕೋರಿದರು. ಅಭಿಮಾನಿಗಳತ್ತ ಕೈ ಮುಗಿಯುತ್ತಾ ಬೆಂಗಳೂರು, ಹೊಸೂರು ರಸ್ತೆ ಮೂಲಕವಾಗಿ ತಮಿಳುನಾಡಿಗೆ ಹೊರಟರು. ಶಶಿಕಲಾ ಅವರಿಗೆ ರಾಜ್ಯದ ಗಡಿಯೊಳಗೆ ರಾರ‍ಯಲಿಗೆ ಅವಕಾಶ ನೀಡಿರಲಿಲ್ಲ. ದೇವನಹಳ್ಳಿ, ಹೆಬ್ಬಾಳ, ಸಿಲ್ಕ್‌ಬೋರ್ಡ್‌, ಹೊಸರೋಡ್‌, ಅತ್ತಿಬೆಲೆ ಮೂಲಕ ಅವರು ಹೊಸೂರು ಗಡಿ ತಲುಪಿದರು. ಈ ವೇಳೆ ಜೂಜುವಾಡಿ ಚೆಕ್‌ಪೋಸ್ಟ್‌ ಬಳಿ ಬೆಂಬಲಿಗರು ಪೂರ್ಣಕುಂಭ ಸ್ವಾಗತ ಕೋರಿದರು.

ಶಶಿಕಲಾಗೆ ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ, ತಮಿಳುನಾಡಿನಲ್ಲಿ ಹೊಸ ಅಲೆ.?

ತಮಿಳುನಾಡಿನ ಚೆನ್ನೈ ತನಕ ಅವರನ್ನು ರಾರ‍ಯಲಿಯಲ್ಲಿ ಕರೆದೊಯ್ಯಲು ನೂರಾರು ಕಾರುಗಳಲ್ಲಿ ಅಭಿಮಾನಿಗಳು ತಮಿಳುನಾಡಿನಿಂದ ಆಗಮಿಸಿದ್ದರು. ಇದರಿಂದ ಬೆಂಗಳೂರು-ತಮಿಳುನಾಡು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅತ್ತಿಬೆಲೆ, ಹೊಸೂರು ಗಡಿಭಾಗದಲ್ಲಿ ಕಿ.ಮೀ.ಗಟ್ಟಲೇ ವಾಹನಗಳು ನಿಂತಲ್ಲೇ ನಿಂತುಕೊಂಡಿದ್ದವು. ಟೋಲ್‌ ಮೂಲಕ ವಾಹನಗಳು ತಮಿಳುನಾಡು ಪ್ರವೇಶಿಸುವುದು ತಡವಾಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಸುಮಾರು 2 ತಾಸುಗಳ ಹರಸಾಹಸದ ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಹಬದಿಗೆ ತಂದರು.