ಕೃಷಿ ಉತ್ಪನ್ನ ದ್ವಿಗುಣ, ಜಲ ಶಕ್ತಿಯ ಸಮರ್ಪಕ ಬಳಕೆ, ಜಿಲ್ಲಾ ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪನೆ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕಲ್ಪಿಸುವುದು ಹಾಗೂ ತಲಾ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖ
ಬೆಂಗಳೂರು (ಸೆ.30): ಕೃಷಿ ಉತ್ಪನ್ನ ದ್ವಿಗುಣ, ಜಲ ಶಕ್ತಿಯ ಸಮರ್ಪಕ ಬಳಕೆ, ಜಿಲ್ಲಾ ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪನೆ, ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಕಲ್ಪಿಸುವುದು ಹಾಗೂ ತಲಾ ಆದಾಯ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಏರ್ಪಡಿಸಿದ್ದ ‘ಕರ್ನಾಟಕ ಮಾಧ್ಯಮ ಅಕಾಡೆಮಿ’ಯ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನೂತನ ಲಾಂಛನ ಬಿಡುಗಡೆ ಮತ್ತು ‘ಕ್ಲಬ್‌ಹೌಸ್’ಗೆ (Club house) ಚಾಲನೆ ನೀಡಿದ ಅವರು, ‘ನನ್ನ ಕಲ್ಪನೆಯ ಕರ್ನಾಟಕ’ ವಿಷಯದ ಬಗ್ಗೆ ಮಾತನಾಡಿ, ಶಾಸಕನಾಗಿದ್ದರೆ ಹೆಚ್ಚು ಮಾತನಾಡಬಹುದಿತ್ತು. ಮುಖ್ಯಮಂತ್ರಿ ಆಗಿರುವುದರಿಂದ ಅಷ್ಟೊಂದು ಮಾತನಾಡಲು ಆಗುವುದಿಲ್ಲ ಎಂದು ಹೇಳುತ್ತಾ ಸಂವಾದಕ್ಕೆ ಚಾಲನೆ ನೀಡಿದರು.
ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣಗೆ ಧನ್ಯವಾದ ಹೇಳಿದ ಸಿಎಂ ಬೊಮ್ಮಾಯಿ
ನಮ್ಮಲ್ಲಿ ಅಪಾರವಾದ ಜಲ ಶಕ್ತಿ ಇದೆ. ಬೀದರ್‌ನಿಂದ ಕೊಳ್ಳೇಗಾಲದವರೆಗೆ ಕಾರಂಜ, ತುಂಗಭದ್ರಾ, ಘಟಪ್ರಭ, ಮಲಪ್ರಭ, ದೂಧ್ ಗಂಗಾ, ಕೃಷ್ಣಾ , ಕಾವೇರಿ, ಕಬಿನಿ ಮತ್ತಿತರ ನದಿಗಳು ಹರಿಯುತ್ತಿವೆ. ಆದರೆ ನೈಸರ್ಗಿಕ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಸಂಪದ್ಭರಿತ, ಸುರಕ್ಷಿತ, ವಿಫುಲ ಅವಕಾಶವಿರುವ ಸುಂದರನಾಡು ನಮ್ಮದಾಗಬೇಕು. ಕನ್ನಡಕ್ಕೆ, ಕನ್ನಡಿಗರಿಗೆ ಅಗ್ರಸ್ಥಾನ ಸಿಗುವಂತಾಗಬೇಕು ತಮ್ಮ ಕಲ್ಪನೆಯ ಕರ್ನಾಟಕವನ್ನು ತಿಳಿಸಿದರು.
100 ಆಹಾರ ಸಂಸ್ಕರಣಾ ಘಟಕ:
ಆಲಮಟ್ಟಿಅಣೆಕಟ್ಟೆಯನ್ನು (Dam) 524 ಮೀಟರ್‌ಗೆ ಎತ್ತರಿಸಿದರೆ 13 ಲಕ್ಷ ಎಕರೆಗೆ ನೀರಾವರಿ ಸೌಲಭ್ಯ ಕಲ್ಪಿಸಬಹುದು. ತುಂಗಭದ್ರಾ ನದಿ ತೀರದಿಂದ ಕೃಷ್ಣಾ ನದಿ ತೀರದವರೆಗೆ 7 ರಿಂದ 8 ಲಕ್ಷ ಎಕರೆಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಇದರಿಂದ ತೋಟಗಾರಿಕಾ ಬೆಳೆ ಬೆಳೆಯಲು ಅನುಕೂಲವಾಗಲಿದೆ. ನದಿ ತೀರದ ಪ್ರದೇಶಗಳಲ್ಲಿ 100 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕು. ಇದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗಿ ಏಳೆಂಟು ಜಿಲ್ಲೆಗೆ ಅನುಕೂಲವಾಗುತ್ತದೆ. ಮಧ್ಯ ಕರ್ನಾಟಕದಲ್ಲಿ ನೀರಿನ ಕೊರತೆಯಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಎರಡ್ಮೂರು ವರ್ಷದಲ್ಲಿ ಪೂರ್ಣಗೊಳಿಸಿ ನೀರನ್ನು ಬಳಕೆ ಮಾಡಲಾಗುವುದು. ಎತ್ತಿನಹೊಳೆ ಯೋಜನೆಗೆ ವೇಗ ನೀಡಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ನೀರು ಪೂರೈಸಲಾಗುವುದು ಎಂದು ಭರವಸೆ ನಿಡಿದರು.
ಉದ್ಯೋಗ ಕೇಂದ್ರಿತ ಯೋಜನೆ ಅಗತ್ಯ:
ಬೆಂಗಳೂರು ಯೋಜನಾಬದ್ಧವಾಗಿ ಬೆಳೆದಿಲ್ಲ. ಅಭಿವೃದ್ಧಿಗೆ ಹೆಚ್ಚು ಹಣಕಾಸು ಬೇಕಿದ್ದು ಆದ್ಯತೆ ನೀಡಲಾಗುವುದು. ಬೆಂಗಳೂರಿನ ಹೊರ ವಲಯ ಮತ್ತು ಬೇರೆ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಕೈಗಾರಿಕಾ ವಲಯ ಅಭಿವೃದ್ಧಿಗೊಳಿಸಬೇಕು. ಬಂಡವಾಳ ಹೂಡಿಕೆಗಿಂತ, ಉದ್ಯೋಗ ಕೇಂದ್ರಿತ ಯೋಜನೆಗಳನ್ನು ಹೆಚ್ಚಾಗಿ ಜಾರಿಗೆ ತರಬೇಕು. ಇದಕ್ಕಾಗಿ ವಿಶೇಷ ಯೋಜನೆ ರೂಪಿಸಲು ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.
ವಿಮಾನಯಾನ ಸೇವೆಯಲ್ಲಿಯೂ ಉತ್ತಮ ಸಂಪರ್ಕ ಏರ್ಪಡುತ್ತಿದೆ. 300 ಕಿ.ಮೀ.ಗೂ ಅಧಿಕ ಬಂದರು ಪ್ರದೇಶವಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕು. ಆಮದು-ರಫ್ತು ಹೆಚ್ಚಾದರೆ ಉದ್ಯೋಗಾವಕಾಶ ಸಿಗುತ್ತವೆ. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರೌಢಶಾಲೆಗಳಲ್ಲಿ ತಾಂತ್ರಿಕ ಶಿಕ್ಷಣ ನೀಡಬೇಕು ಎಂದರು ತಿಳಿಸಿದರು.
ದುಡಿಯುವ ಕೈಗೆ ಕೆಲಸ:
ಆಸ್ಪತ್ರೆಗಳನ್ನು ಉನ್ನತೀಕರಣ ಮಾಡಬೇಕು. ತಲಾವಾರು ಆದಾಯ ಹೆಚ್ಚಿಸಬೇಕು. ಗ್ರಾಮೀಣ ದುಡಿಯುವ ವರ್ಗಕ್ಕೆ, ಅದರಲ್ಲೂ ಯುವಕರು, ಮಹಿಳೆಯರಿಗೆ ಉದ್ಯೋಗ ನೀಡಿ ಸ್ವಾವಲಂಬಿ ಮಾಡಬೇಕು. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಪೂರ್ವಾಗ್ರಹ ಪೀಡಿತವಲ್ಲ:
ಕ್ಲಬ್‌ಹೌಸ್ ಎಂದರೆ ಹರಟೆಯ ಚಾವಡಿಯಾಗಿದೆ. ಮುಕ್ತ ಅಭಿಪ್ರಾಯ ವ್ಯಕ್ತವಾಗುವುದರಿಂದ ಹರಟೆಯ ಚಾವಡಿಯಿಂದ ಜಟಿಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮುಕ್ತವಾಗಿ ಕೇಳುವ ಮನಸುಗಳಿರುವುದರಿಂದ ಪೂರ್ವಾಗ್ರಹ ಪೀಡಿತವಾಗಿರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಅಕಾಡೆಮಿಯು 40 ರ ಸಂಭ್ರಮದಲ್ಲಿದ್ದು ವರ್ಷದಿಂದ ವರ್ಷಕ್ಕೆ ಹೊಸತನ ಕಂಡುಕೊಳ್ಳುತ್ತಿದೆ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಜಿ.ಜಗದೀಶ್, ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.
ಮುಳುವಾಗುವ ಹೃದಯ ವೈಶಾಲ್ಯ
ಸಂಗೀತ, ನೃತ್ಯ ಸೇರಿದಂತೆ ಕಲಾ ಪ್ರಕಾರಗಳಲ್ಲಿ ರಾಜ್ಯದ ಗತ ವೈಭವ ಮರಳಿ ತರುವ ಚಿಂತನೆಯಿದೆ. ಕರ್ನಾಟಕ ಇಡೀ ದೇಶದಲ್ಲೇ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ನೆಲ, ಜಲ, ಧಾನ್ಯ, ವಿವಿಧ ಸಂಸ್ಕೃತಿ, ಭಾಷಾ ವಿಭಿನ್ನತೆ, ಏಕೀಕರಣದ ನಂತರೆ ಸಾಧನೆಗಳು, ಸವಾಲುಗಳೂ ಇವೆ. ಕನ್ನಡ ನಾಡಿನಲ್ಲಿ ಜನಿಸಿರುವುದೇ ನಮ್ಮ ಅದೃಷ್ಟವಾಗಿದೆ. ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಒಪ್ಪಿ-ಅಪ್ಪಿಕೊಳ್ಳುವ ಸಂಸ್ಕೃತಿ ನಮ್ಮದಾಗಿದೆ. ಕನ್ನಡಿಗರಿಗೆ ಹೃದಯ ವೈಶಾಲ್ಯವಿದೆ. ಕೆಲವೊಮ್ಮೆ ಅದೇ ನಮಗೆ ಮುಳುವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಷಾದಿಸಿದರು.
ಆಹಾರೋತ್ಪಾದನೆ ದ್ವಿಗುಣಕ್ಕೆ ಯೋಜನೆ
ರಾಜ್ಯದಲ್ಲಿ 10 ಕೃಷಿ ಹವಾಮಾನ ವಲಯಗಳಿವೆ. ಬೇರಾವ ರಾಜ್ಯದಲ್ಲೂ ಈ ರೀತಿ ವಾತಾವರಣವಿಲ್ಲ. ಇದನ್ನು ಬಳಕೆ ಮಾಡಿಕೊಂಡು ಪರಿಣಾಮಕಾರಿಯಾಗಿ ಕೃಷಿ ಕೈಗೊಂಡರೆ ಎರಡುಪಟ್ಟು ಉತ್ಪಾದನೆ ಮಾಡಬಹುದು. ಕೃಷಿ ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಗತಗೊಂಡರೆ ಯಶಸ್ವಿಯಾಗಬಹುದು. ಇದಕ್ಕಾಗಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ 40 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನೂತನ ಲಾಂಛನ ಬಿಡುಗಡೆ ಮತ್ತು ಕ್ಲಬ್‌ಹೌಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ಸದಸ್ಯರಾದ ಕೆ.ಕೆ.ಮೂರ್ತಿ, ಗೋಪಾಲ ಎಸ್.ಯಡಗೆರೆ ಹಾಜರಿದ್ದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಏರ್ಪಡಿಸಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿಯ 40ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನೂತನ ಲಾಂಛನ ಬಿಡುಗಡೆ ಮತ್ತು ಕ್ಲಬ್‌ಹೌಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
