*   ಚಳ್ಳಕೆರೆಯ ಡಿಆರ್‌ಡಿಒ ರೇಂಜ್‌ನಲ್ಲಿ ಪರೀಕ್ಷೆ*  ವಿಮಾನ ‘ಹನ್ಸ್‌-ಎನ್‌ಜಿ’ ತನ್ನ ಇಂಜಿನ್‌ ಪರೀಕ್ಷೆ ಯಶಸ್ವಿ*  ಪೈಲಟ್‌ಗಳಾಗಿ ಕಾರ್ಯನಿರ್ವಹಿಸಿದ ವಿಂಗ್‌ ಕಮಾಂಡರ್‌ ಕೆ.ವಿ.ಪ್ರಕಾಶ್‌-ವಿಂಗ್‌ ಕಮಾಂಡರ್‌ ಎನ್‌ಡಿಎಸ್‌ ರೆಡ್ಡಿ  

ಬೆಂಗಳೂರು(ಮೇ.18): ದೇಶದ ಮೊದಲ ಎರಡು ಆಸನಗಳ ಅತ್ಯಾಧುನಿಕ ತರಬೇತಿ ಯುದ್ಧ ವಿಮಾನ ‘ಹನ್ಸ್‌-ಎನ್‌ಜಿ’ ತನ್ನ ಇಂಜಿನ್‌ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಪರಿಷತ್‌ - ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ (ಸಿಎಸ್‌ಐಆರ್‌-ಎನ್‌ಎಎಲ್‌) ಹನ್ಸ್‌-ಎನ್‌ಜಿ ಅಭಿವೃದ್ಧಿಪಡಿಸಿದ್ದು, ಮಂಗಳವಾರ ಚಳ್ಳಕೆರೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಲ್ಲಿ ಇನ್‌-ಫ್ಲೈಟ್‌ ರಿಲೈಟ್‌ ಟೆಸ್ಟ್‌ ನಡೆಸಲಾಗಿದೆ.

ಈ ಪರೀಕ್ಷೆಯಲ್ಲಿ ಹನ್ಸ್‌-ಎನ್‌ಜಿ ಉತ್ತಿರ್ಣವಾಗಿರುವುದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದಿಂದ ಹಾರಾಟ ಪ್ರಮಾಣ ಪತ್ರ ಪಡೆಯುವ ದಿಸೆಯಲ್ಲಿ ಮಹತ್ವದ ಮೈಲಿಗಲ್ಲು ಎಂದು ಸಿಎಸ್‌ಐಆರ್‌ - ಎನ್‌ಎಎಲ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Uttara Kannada:ಕಾರವಾರದಲ್ಲಿ ಏರ್‌ಕ್ರಾಫ್ಟ್‌ ಮ್ಯೂಸಿಯಂ ನಿರ್ಮಾಣ ಕಾಮಗಾರಿ ವಿಳಂಬ

6,000 ದಿಂದ 7,000 ಅಡಿ ಎತ್ತರದಲ್ಲಿ ಗಂಟೆಗೆ 60ರಿಂದ 70 ನಾಟ್‌ (ಒಂದು ನಾಟ್‌ ಎಂದರೆ 1.852 ಕಿಮೀ) ವೇಗದಲ್ಲಿ ವಿಮಾನ ಹಾರಾಟ ನಡೆಸಿತು. ಪೈಲಟ್‌ಗಳಾಗಿ ವಿಂಗ್‌ ಕಮಾಂಡರ್‌ ಕೆ.ವಿ.ಪ್ರಕಾಶ್‌ ಮತ್ತು ವಿಂಗ್‌ ಕಮಾಂಡರ್‌ ಎನ್‌ಡಿಎಸ್‌ ರೆಡ್ಡಿ ಕಾರ್ಯನಿರ್ವಹಿಸಿದ್ದರು.

ಪರೀಕ್ಷಾರ್ಥ ಹಾರಾಟದ ಮೇಲ್ವಿಚಾರಣೆಯನ್ನು ಹನ್ಸ್‌ ಯೋಜನಾ ನಿರ್ದೇಶಕ ಅಬ್ಬಾನಿ ರಿಂಕು ಸೇರಿದಂತೆ ವಿನ್ಯಾಸ ತಂಡದ ಹಿರಿಯ ಅಧಿಕಾರಿಗಳಾದ ವಿಂಗ್‌ ಕಮಾಂಡರ್‌ ಸೆಂಥಿಲ್‌ ಕುಮಾರ್‌, ಸಾಹಿಲ್‌ ಸರಿನ್‌, ಎಂ.ರಂಗಚಾರಿ ನಿರ್ವಹಿಸಿದರು. ಸಿಎಸ್‌ಐಆರ್‌ - ಎನ್‌ಎಎಲ್‌ನ ನಿರ್ದೇಶಕ ಜಿತೇಂದ್ರ ಜೆ. ಜಾಧವ್‌ ಹನ್ಸ್‌ ಅಭಿವೃದ್ಧಿಪಡಿಸಿದ ತಂಡವನ್ನು ಅಭಿನಂದಿಸಿದ್ದಾರೆ.