ಕೆಆರ್‌ಎಸ್ ಜಲಾಶಯ ಪರಿಶೀಲಿಸಿ ಕೇಂದ್ರವೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಿ: ಮಾಜಿ ಪ್ರಧಾನಿ ದೇವೇಗೌಡರ ಆಗ್ರಹ
ಕೇಂದ್ರ ಸರ್ಕಾರವು ಕಾವೇರಿ ನದಿಯ ಕೆಆರ್‌ಎಸ್ ಡ್ಯಾಂ ಪರಿಶೀಲನೆ ಮಾಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನ್ಯಾಯ ಕೊಡಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಒತ್ತಾಯಿಸಿದರು.
ಬೆಂಗಳೂರು (ಸೆ.25): ಕಾವೇರಿ ವಿಚಾರವಾಗಿ ಕನ್ನಡ ನಾಡಿಗೆ 60 ವರ್ಷಗಳಿಂದ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರವು 5 ಜನರ ಸಮಿತಿ ರಚಿಸಿ ಕಾವೇರಿಯ ಕೆಆರ್‌ಎಸ್ ಆಣೆಕಟ್ಟೆ ಪರಿಶೀಲನೆ ಮಾಡಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕನ್ನಡ ನಾಡಿಗೆ ನ್ಯಾಯ ಕೊಡಿಸುವಂತೆ ರಾಜ್ಯಸಭೆ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗೊ ನಾನು ಪ್ರಧಾನ ಮಂತ್ರಿ ಗಳಿಗೆ ಪತ್ರ ಬರೆದಿದ್ದೇನೆ. ಇದರ ವಿವರಗಳನ್ನು ನಿಮ್ಮ ಮುಂದೆ ಚಿಕೊಳ್ಳಲಿದ್ದೇನೆ. ನಾನು ಕಾಂಗ್ರೆಸ್, ಬಿಜೆಪಿ ಅಥವಾ ನಮ್ಮ ರಾಜಕೀಯ ನಿರ್ಣಯಗಳ ಬಗ್ಗೆ ನಾನು ಮಾತಾಡಲ್ಲ. ಇಂದು ಕೇವಲ ಕಾವೇರಿ ವಿಚಾರ ಮಾತ್ರ ಮಾತಾಡ್ತೀನಿ. ಕೆಆರ್‌ಎಸ್ ಅಣೆಕಟ್ಟಿನ ಫೋಟೋ ಪ್ರದರ್ಶನ ಮಾಡುತ್ತಾ ತಮಿಳಿನಾಡಿನ ಅಣ್ಣ ತಮ್ಮಂದಿರು ಕೂಡಾ ಅರ್ಥ ಮಾಡಿಕೊಳ್ಳಬೇಕು. ಅವರೂ ಬದುಕಬೇಕು. ನಾನು ರಾಜ್ಯಸಭೆಯಲ್ಲಿ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ಕಾವೇರಿ ಹೋರಾಟಕ್ಕೆ ಬನ್ನಿ ಎಂದ ಕನ್ನಡಿಗರಿಗೆ, ತಮಿಳು ಸಿನಿಮಾ ನೋಡದಂತೆ ಕರೆಕೊಟ್ಟ ನಟ ದರ್ಶನ್!
ಕೆಆರ್‌ಎಸ್ ಆಣೆಕಟ್ಟಿನ ವಾಸ್ತವಾಂಶದ ಬಗ್ಗೆ ನಾವೇನು ವರದಿ ನೀಡಿದ್ದೇವೆಯೋ ಅದನ್ನು ಪರಿಶೀಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಲಶಕ್ತಿ ಸಚಿವಾಲಯಕ್ಕೆ ಪರಿಶೀಲನೆ ಮಾಡಿ ವರದಿ ನೀಡಲು ಸೂಚಿಸಬೇಕು. ನಂತರ, ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸುಪ್ರೀಂ ಕೋರ್ಟ್‌ಗೆ ಒಂದು ಅರ್ಜಿಯನ್ನು ಹಾಕಿ ಎಲ್ಲ ಜಲಾಶಯಗಳನ್ನು ಪರಿಶೀಲನೆ ಮಾಡಿ, ನೀರಿನ ಸಂಗ್ರಹಣೆ ಎಷ್ಟಿದೆ? ಕುಡಿಯುವ ನೀರಿಗೆ ಎಷ್ಟು ಬೇಕು? ಬೆಳೆಗಳು ಎಷ್ಟಿದೆ ಎಂದು ಮಾಹಿತಿ ನೀಡಬೇಕು. ಈಗಾಗಲೇ ನಮಗೆ ಅನ್ಯಾಯವಾಗಿದ್ದು, ಸುಪ್ರೀಂ ಕೋರ್ಟ್ ಮೂಲಕ ಕರ್ನಾಟಕಕ್ಕೆ ನ್ಯಾಯ ಕೊಡಿಸುವ ಕಾರ್ಯ ಮಾಡಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಒತ್ತಾಯಿಸಿದರು.
ಕೇಂದ್ರ ಸರ್ಕಾರಕ್ಕೆ ಕೆಆರ್‌ಎಸ್ ಜಲಾಶಯ ಪರಿಶೀಲನೆಗೆ 5 ಜನರನ್ನು ಕಳಿಸಿ ಕೊಡಿ. ಕರ್ನಾಟಕ ಅಥವಾ ತಮಿಳುನಾಡಿನವರು ಬೇಡ. ಬೇರೆ ರಾಜ್ಯದವರನ್ನು ಕಳಿಸಿ ಕೊಡಿ. ಎರಡೂ ರಾಜ್ಯಗಳ ಪರಿಸ್ಥಿತಿ ಅರ್ಥ ಮಾಡಿಕೊಂಡು ವರದಿ ಕೊಡಿ. ನಾನು ನಿಲ್ಲಲೂ ಆಗಲ್ಲ. ನನ್ನ ಶಕ್ತಿ ಬಳಕೆ ಮಾಡಿ ರಾಜ್ಯಸಭೆಯಲ್ಲಿ ಎದ್ದು ನಿಂತು ಮಾತಾಡಿದ್ದೇನೆ. ಈ ವೇಳೆ ಕನ್ನಡ ನಾಡಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಕಣ್ಣೀರು ಹಾಕಿದ್ದೇನೆ. ನಾಳೆ ಬಂದ್ ವಿಚಾರದಲ್ಲಿ ಯಾರು ಏನು ಮಾತಾಡ್ತಾರೆ ಅದರ ಬಗ್ಗೆ ನಾನು ಮಾತಾಡಲ್ಲ. ನಮ್ಮ ಎಲ್ಲ ಶಾಸಕರು ಕುಳಿತು ಪಕ್ಷದ ಬಗ್ಗೆ ಮಾತಾಡಿದ್ದೇವೆ. ಆ ವಿಚಾರಗಳೆಲ್ಲಾ ಈಗ ಬೇಡ. ಈಗ ಕೇವಲ ಕಾವೇರಿ ವಿಚಾರವಾಗಿ ಮಾತ್ರ ಮಾತನಾಡೋಣ ಎಂದರು.
ಕರ್ನಾಟಕದ 28 ಸದಸ್ಯರು 3 ಗುಂಪುಗಳು: ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಾವೇರಿ ನೀರಿನ ಹೋರಾಟ ಮಾಡಿದಾಗ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಎಸ್.ಎಂ. ಕೃಷ್ಣ ಹಾಗೂ ಕೆ.ಹೆಚ್. ಮುನಿಯಪ್ಪ ಅವರು ಕೇಂದ್ರ ಸಚಿವರಾಗಿದ್ದರು. ಇನ್ನು ಕಾಂಗ್ರೆಸ್‌ನಿಂದ 18 ಸಂಸದರಿದ್ದರು, ಆಗ ನಾನು ಎಲ್ಲರಿಗೂ ಕೈ ಮುಗಿದು ಕಾವೇರಿ ನೀರು ಉಳಿಸುವ ಹೋರಾಟಕ್ಕೆ ಬನ್ನಿ ಎಂದರೂ ಯಾರೊಬ್ಬರೂ ಬರಲಿಲ್ಲ. ನಮ್ಮಲ್ಲಿ 28 ಜನ ಸಂಸದರಿದ್ದರೂ ಮೂರು ಗುಂಪುಗಳಾಗಿವೆ. ತಮಿಳುನಾಡಿನಲ್ಲಿ 40 ಸಂಸದರಿದ್ದರೂ ಅವರೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿದ್ದಾರೆ. ತಮಿಳುನಾಡಿನ ರಾಜಕೀಯ ಶಕ್ತಿ ಬಳಸಿಕೊಳ್ಳಿಕ್ಕಾಗಿ ಈ ರೀತಿ ಮಾಡಿಕೊಳ್ಳುತ್ತಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಷಯದಲ್ಲಿ ದೊಡ್ಡ ಕಾನೂನು ಹೋರಾಟ ಅಗತ್ಯ: ದರ್ಶನ್ ಪುಟ್ಟಣ್ಣಯ್ಯ
ಕರ್ನಾಟಕದ ಬಂದ್‌ಗೆ ಜೆಡಿಎಸ್ ಬೆಂಬಲವಿದೆ: ನಾನು ಸ್ವಾಭಿಮಾನದಿಂದ ಹೇಳ್ತಿದ್ದೇನೆ. ದೆಹಲಿಯಿಂದ ಬಂದಾಕ್ಷಣ ಕುಮಾರಸ್ವಾಮಿ ಕಾವೇರಿ ಹೋರಾಟದ ಸ್ಥಳಕ್ಕೆ ಹೋಗಿ ಬೆಂಬಲ ನೀಡಿದರು. ಇನ್ನು ನಾಳೆ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ಕಾವೇರಿ ಹೋರಾಟಗಳಿಗೆ ಕುಮಾರಸ್ವಾಮಿ ಅವರು ಬೆಂಬಲ ನೀಡದ್ದಾರೆ. ಇನ್ನು ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲರೂ ನಡೆದುಕೊಳ್ಳಬೇಕು. ಇನ್ನು ನಾಳೆ ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ವಿಚಾರಣೆಗೆ ನಡೆಯುತ್ತದೆ. ಇನ್ನು ಹಳೆಯ ಆದೇಶಗಳನ್ನು ನೋಡಿ ಅಧ್ಯಯನ ಮಾಡಿಕೊಂಡು ವಾದವನ್ನು ಮಂಡಿಸಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.