ಬೆಂಗಳೂರು(ಡಿ.29): ಮಹಾಸಂತ ಪೇಜಾವರ ಶ್ರೀ ವಿಶ್ವೇಶ ತೀರ್ಥರ ಅಂತ್ಯಕ್ರಿಯೆ ಇಂದು(ಭಾನುವಾರ) ನೆರವೇರಿತು. ಬೆಂಗಳೂರಿನ ವಿದ್ಯಾಪೀಠದಲ್ಲಿ ಮಾಧ್ವ ಸಂಪ್ರದಾಯದ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು. 

ವಿದ್ಯಾಪೀಠದ ಕಾರ್ಯದರ್ಶಿ ಕೇಶವಚಾರ್ಯ ನೇತೃತ್ವ ದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದ್ದು, ಶ್ರೀಗಳನ್ನ ಪದ್ಮಾಸನದಲ್ಲಿ, ಮಣ್ಣಿನ ಗುಂಡಿಯೊಳಗೆ ಕೂರಿಸಿ ಅಂತಿಮ ವಿದಾಯ ಹೇಳಲಾಯಿತು.

ಇದಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಪುರುಷ ಸೂಕ್ತ ಮೊದಲಾದ ಮಂತ್ರಗಳಿಂದ ಅಭಿಷೇಕ ಮಾಡಲಾಯಿತು. ಬಳಿಕ ಶ್ರೀಗಳ ಪಾರ್ಥಿವ ಶರೀರಕ್ಕೆ ಅವಭೃತ ಸ್ನಾನ ಮಾಡಿಸಲಾಯಿತು.

ಶುಕ್ರವಾರ ಬಂದ್ರೆ ನಮಾಜ್ ನೆನಪಿಸುತ್ತಿದ್ರು: ಪೇಜಾವರ ಶ್ರೀ ಕಾರು ಚಾಲಕ ಆರೀಫ್‌ ಮನದ ಮಾತುಗಳು

ಶ್ರೀಗಳ ಪಾರ್ಥಿವ ಶರೀರಕ್ಕೆ ಗಂಧ ಮಾಲ್ಯಗಳಿಂದ ಅಲಂಕಾರ ಮಾಡಿ, ಶ್ರೀಗಂಧ, ಪಚ್ಚಕರ್ಪೂರ , ತುಳಸಿ, ನವರತ್ನಗಳನ್ನು ಬಳಸಿ ಪೂಜೆ ನೆರವೇರಿಸಲಾಯಿತು. ಬಳಿಕ ಶ್ರೀಗಳು ಉಪಯೋಗಿಸುತ್ತಿದ್ದ ದಂಡವನ್ನು 3 ತುಂಡು ಮಾಡಲಾಯಿತು.

ಜಪದ ಮಣಿ, ಪಾತ್ರೆಗಳನ್ನು ಪಾರ್ಥಿವ ಶರೀರದ ಜತೆಗೆ ಇಟ್ಟು, ಉಪ್ಪು, ಸಾಸಿವೆ, ಮೆಣಸುಗಳಿಂದ ಗುಂಡಿಯನ್ನು ಮುಚ್ಚಲಾಯಿತು. ಈ ಮೂಲಕ ದೇಶ ಕಂಡ ಅಪರೂಪದ ಸಂತ ಲೌಖಿಕ ಜಗತ್ತಿನಿಂದ ದೈವೀ ಜಗತ್ತಿನೆಡೆ ಪ್ರಯಾಣ ಬೆಳೆಸಿದರು.

ವಿಷ್ಣುಮೂರ್ತಿ ಆಚಾರ್ಯ ತಂಡದಿಂದ ವಿಧಿವಿಧಾನ ಪ್ರಕ್ರಿಯೆ ನೆರವೇರಿದ್ದು, ತಮ್ಮ ಪ್ರೀತಿಯ ಶ್ರೀಗಳನ್ನು ಸಹಸ್ರಾರು ಜನರು ಅಶ್ರುತರ್ಪಣದ ಮೂಲಕ ಬೀಳ್ಕೊಟ್ಟರು.

ಪೇಜಾವರ ಶ್ರೀ ಅಂತ್ಯಸಂಸ್ಕಾರದ ಧಾರ್ಮಿಕ ವಿಧಿ ವಿಧಾನಗಳ ಫುಲ್ ಡಿಟೇಲ್

ಇನ್ನು ಪೇಜಾವರ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳು, ಪ್ರಮುಖ ರಾಜಕೀಯ ಮುಖಂಡರು ಹಾಗೂ ನಾಡಿನ ಹಲವು ಮಠಾಧೀಶರು ಭಾಗವಹಿಸಿದ್ದರು.