* ಸರ್ಕಾರ, ಬಿಬಿಎಂಪಿ ಸಹಯೋಗದ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ* 6 ತಿಂಗಳ ಹಿಂದೆಯೇ ಕಂಪನಿ ಶುರು* ಆದರೆ ತಾಂತ್ರಿಕ, ಆಡಳಿತಾತ್ಮಕ ಸಮಸ್ಯೆಯಿಂದ ತಡ* ತೊಡಕುಗಳನ್ನು ಪರಿಹರಿಸಿದ ಸರ್ಕಾರ, ಈಗ ಕಂಪನಿ ಕಾರ್ಯಾರಂಭ

ಬೆಂಗಳೂರು(ಜೂ,07): ರಾಜಧಾನಿಯಲ್ಲಿ ಕಸ ಸಂಗ್ರಹ, ವಿಂಗಡಣೆ ಮತ್ತು ವಿಲೇವಾರಿ ಬಹುದೊಡ್ಡ ಸವಾಲು. ವೈಜ್ಞಾನಿಕವಾಗಿ ಕಸ ವಿಲೇವಾರಿಗೆಂದೇ ದೇಶದಲ್ಲೆ ಮೊದಲ ಬಾರಿಗೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿ ಕಾರ್ಯಾರಂಭಿಸಿದೆ.

ಸೋಮವಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಬಿಬಿಎಂಪಿ ಕಸ ನಿರ್ವಹಣಾ ವಿಭಾಗದ ವಿಶೇಷ ಆಯುಕ್ತ ಕೆ.ಹರೀಶ್‌ಕುಮಾರ್‌, ಆರು ತಿಂಗಳ ಹಿಂದೆಯೇ ಘನತ್ಯಾಜ್ಯ ನಿರ್ವಹಣೆ ಕಂಪನಿ ಪ್ರಾರಂಭಿಸಿದ್ದೇವೆ. ಇದೀಗ ಕೆಲ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಗಳನ್ನು ಪರಿಹರಿಸಿಕೊಂಡಿದ್ದು ಮನೆ, ಬೀದಿ ಬದಿಯ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣಿಕೆ, ಸಂಗ್ರಹಿಸಿದ ಕಸದ ವೈಜ್ಞಾನಿಕ ವಿಲೇವಾರಿ ಮತ್ತು ಭೂ ಭರ್ತಿ (ಲ್ಯಾಂಡ್‌ಫಿಲ್‌) ನಿರ್ವಹಣೆ ಎಂಬ ಮೂರು ಪ್ರಮುಖ ಚಟುವಟಿಕೆಗಳನ್ನು ಕೈಗೊತ್ತಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಡೆಲಿವರಿ ಬಾಯ್‌ಗೆ ಥಳಿಸಿದ ಟ್ರಾಫಿಕ್ ಪೇದೆಯ ವರ್ಗಾವಣೆ: ವಿಡಿಯೋ ವೈರಲ್‌

ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ನಲ್ಲಿ ಕಸ ಸಂಗ್ರಹಣೆ, ನಿರ್ವಹಣೆಗೆ ಸಂಬಂಧಿಸಿದಂತೆ ಪೂರ್ತಿ ಟೆಂಡರ್‌ ಮಾಡಲು ಸಾಧ್ಯವಾಗಲಿಲ್ಲ. ಟೆಂಡರುದಾರರು ಈ ಕುರಿತು ಆಸಕ್ತಿ ತೋರಿಸಿರಲಿಲ್ಲ. ಹಾಗಾಗಿ ಕೇವಲ 100 ವಾರ್ಡ್‌ಗಳಲ್ಲಿ ಟೆಂಡರ್‌ ಮಾಡಲಾಯಿತು. ಈ ಬಾರಿ ಎಲ್ಲ ವಾರ್ಡ್‌ನಲ್ಲಿ ಟೆಂಡರ್‌ ಮಾಡುತ್ತೇವೆ. ಇದುವರೆಗೆ ಬಿಬಿಎಂಪಿಯಿಂದ ಟೆಂಡರ್‌ ನಿರ್ವಹಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕಂಪನಿಯೇ ಟೆಂಡರ್‌ ನಿರ್ವಹಣೆ ಮಾಡಲಿದೆ. ಜೊತೆಗೆ 7 ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಬಿಬಿಎಂಪಿಯಿಂದ ಕಂಪನಿಗೆ ಹಸ್ತಾಂತರಿಸಲಾಗುವುದು. ಹೀಗೆ ವಿವಿಧ ವಿಚಾರಗಳ ಕುರಿತು ಜೂನ್‌ 8ರಂದು ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.

2020 ರಸ್ತೆಗುಂಡಿ ಮುಚ್ಚಲು ಬಾಕಿ

ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಲ್ಲಿ ಹೆಚ್ಚು ಗುಂಡಿಗಳಿದ್ದು, ಬಹುತೇಕ ಗುಂಡಿಗಳನ್ನು ಮುಚ್ಚಲಾಗಿದೆ. ಫಿಕ್ಸ್‌ ಮೈ ಸ್ಟ್ರೀಟ್‌ ಆ್ಯಪ್‌ ಮೂಲಕ 11,502 ರಸ್ತೆಗುಂಡಿಗಳನ್ನು ಗುರುತಿಸಲಾಗಿದೆ. ಇದು ತಾತ್ಕಾಲಿಕವಾಗಿದ್ದು, ರಸ್ತೆ ಗುಂಡಿಗಳ ಸಂಖ್ಯೆ ಪ್ರತಿದಿನ ಬದಲಾಗುತ್ತಿರುತ್ತದೆ. ಭಾನುವಾರದ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 9482 ಮುಚ್ಚಲಾಗಿದೆ. 2020 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇವೆ. ಕಳೆದ ಮೂರು ದಿನಗಳಿಂದ ಪ್ರತಿ ದಿನ ಸಂಜೆ ಮಳೆ ಬರುತ್ತಿರುವುದರಿಂದ ರಸ್ತೆ ಗುಂಡಿ ಮುಚ್ಚಲು ತೊಂದರೆಯಾಗುತ್ತಿದೆ ಎಂದು ಹರೀಶ್‌ಕುಮಾರ್‌ ಹೇಳಿದರು.

ರಸ್ತೆ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ಎಲ್ಲ ಜವಾಬ್ದಾರಿಯನ್ನು ವಲಯಗಳ ಆಯುಕ್ತರಿಗೆ ವಹಿಸಲಾಗಿದೆ. 25ರಿಂದ 27 ಲಾರಿಗಳನ್ನು ಬಳಸಿಕೊಂಡು ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆ ನಡೆಯುತ್ತಿದೆ. ವಾಹನ ದಟ್ಟಣೆ ದಿನದ ಹೊತ್ತಿನಲ್ಲಿ ಹೆಚ್ಚಾಗಿ ಇರುವುದರಿಂದ ರಾತ್ರಿ ಹೊತ್ತು ಹೆಚ್ಚು ಕಾರ್ಯಾಚರಣೆ ನಡೆಯುತ್ತಿದ್ದು, ಮಳೆ ಬರದಿದ್ದರೆ ಬುಧವಾರದ ಒಳಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.

ಬೆಂಗ್ಳೂರಲ್ಲಿ ಇನ್ನೂ ಇವೆ 1478 ಕಸ ಸುರಿವ ಬ್ಲಾಕ್‌ ಸ್ಪಾಟ್‌ಗಳು..!

ಪ್ಲಾಸ್ಟಿಕ್‌ ನಿಷೇಧ ಕಾರ್ಯಾಚರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲು ವಲಯವಾರು ಕಾರ್ಯಾಚರಣೆ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಪತ್ತೆ ಮಾಡಿ ದಂಡ ಹಾಕುವುದಕ್ಕಿಂತ ಪ್ಲಾಸ್ಟಿಕ್‌ ಸರಬರಾಜು ಮಾಡುವ ವಾಹನಗಳು, ಕಂಪನಿಗಳನ್ನು ಗುರಿಯಾಗಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇತ್ತೀಚೆಗೆ ಕಲಾಸಿಪಾಳ್ಯದಲ್ಲಿ ಗುಜರಾತ್‌ ಮೂಲದ ಪ್ಲಾಸ್ಟಿಕ್‌ ಸರಬರಾಜು ಲಾರಿಯನ್ನು ವಶಕ್ಕೆ ಪಡಿಸಿಕೊಂಡಿದ್ದೇವೆ ಎಂದು ವಿಶೇಷ ಆಯುಕ್ತ ಹರೀಶ್‌ ಕುಮಾರ್‌ ತಿಳಿಸಿದರು.

-