ಬೆಂಗ್ಳೂರಲ್ಲಿ ಇನ್ನೂ ಇವೆ 1478 ಕಸ ಸುರಿವ ಬ್ಲಾಕ್ ಸ್ಪಾಟ್‌ಗಳು..!
* ಪ್ರತಿವರ್ಷ ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ 1500 ಕೋಟಿ ವೆಚ್ಚ
* ಕೋಟ್ಯಂತರ ರು. ಖರ್ಚು ಮಾಡಿದರೂ ಬ್ಲಾಕ್ ಸ್ಪಾಟ್ ಮುಕ್ತವಾಗದ ನಗರ
* ದಂಡಕ್ಕೂ ಕ್ಯಾರೇ ಎನ್ನದ ಜನರು
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಮೇ.28): ಸಿಲಿಕಾನ್ ಸಿಟಿ ಬೆಂಗಳೂರು ವಿಶ್ವದರ್ಜೆಯ ಮಾನ್ಯತೆ ಪಡೆದ ನಗರವಾಗಿದ್ದರೂ ವಾರ್ಷಿಕವಾಗಿ ತ್ಯಾಜ್ಯ ನಿರ್ವಹಣೆಗೆ ಕೋಟ್ಯಾಂತರ ರುಪಾಯಿ ವಚ್ಚ ಮಾಡಿದರೂ ನಗರದಲ್ಲಿ ಬ್ಲಾಕ್ ಸ್ಪಾಟ್‌ಗಳು (ಕಸ ಸುರಿಯುವ ಸ್ಥಳ) ಮುಕ್ತವಾಗಿಲ್ಲ.
ಬಿಬಿಎಂಪಿ ಪ್ರತಿವರ್ಷ ಸುಮಾರು ಒಂದೂವರೆ ಸಾವಿರ ಕೋಟಿ ರು.ಗಳನ್ನು ಬೆಂಗಳೂರಿನ ತ್ಯಾಜ್ಯ ಸಂಗ್ರಹಣೆ, ವಿಲೇವಾರಿಗೆ ವೆಚ್ಚ ಮಾಡುತ್ತಿದೆ. ಎಲ್ಲಂದರಲ್ಲಿ ತ್ಯಾಜ್ಯ ಸುರಿಯುವವರಿಗೆ ದಂಡ ವಿಧಿಸುವುದಕ್ಕೆ ಮಾಜಿ ಸೈನಿಕರನ್ನು ನಿಯೋಜನೆ ಮಾಡಿಕೊಂಡು ವಾರ್ಷಿಕ ಕೋಟ್ಯಂತರ ರು. ವೇತನ ಪಾವತಿಸುತ್ತಿದೆ. ಬ್ಲಾಕ್‌ಸ್ಪಾಟ್‌ಗಳ ಬಳಿ ಸಿಸಿ ಕ್ಯಾಮರಾ ಅಳವಡಿಕೆ, ಜಾಗೃತಿ ಮೂಡಿಸುವುದು. ರಂಗೋಲಿ ಹಾಕುವುದು ಸೇರಿದಂತೆ ಏನೆಲ್ಲಾ ಮಾಡಿದರೂ ವಿಶ್ವ ಖ್ಯಾತಿಯ ನಗರ ಮಾತ್ರ ಬ್ಲಾಕ್ ಸ್ಪಾಟ್‌ನಿಂದ ಮುಕ್ತಿ ತೊರೆತ್ತಿಲ್ಲ. ಕೇಂದ್ರ ಸರ್ಕಾರ ನಡೆಸುವ ಸ್ವಚ್ಛ ಭಾರತ್ ಅಭಿಯಾನದಲ್ಲಿ ಈ ಹಿಂದಿನ ವರ್ಷಗಳಲ್ಲಿ ಬ್ಲಾಕ್‌ಸ್ಪಾಟ್‌ನಿಂದಲೇ ಅಂಕ ಕಳೆದುಕೊಂಡು ಬಿಬಿಎಂಪಿ ಕಡಿಮೆ ರಾರಯಂಕ್ ಪಡೆದಿತ್ತು ಎಂಬುದನ್ನು ಸ್ಮರಿಸಬಹುದಾಗಿದೆ.
ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಫುಡ್ ಡೆಲಿವರಿ ಬಾಯ್ ಸಾವು
1,478 ಬ್ಲಾಕ್ ಸ್ಪಾಟ್ ಜೀವಂತ:
ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳಿದ್ದು, ಪ್ರತಿ ವಾರ್ಡ್‌ಗೆ ಕನಿಷ್ಠ 8 ರಿಂದ 10 ಬ್ಲಾಕ್‌ಸ್ಪಾಟ್‌ಗಳಂತೆ ಒಟ್ಟು 1,478 ಬ್ಲಾಕ್ ಸ್ಪಾಟ್‌ಗಳಿವೆ ಎಂದು ಬಿಬಿಎಂಪಿ ಘನತ್ಯಾಜ್ಯ ವಿಭಾಗ ಗುರುತಿಸಿದೆ. ಪ್ರತಿ ದಿನ ಇವುಗಳನ್ನು ಪಾಲಿಕೆಯಿಂದ ಸ್ವಚ್ಛಗೊಳಿಸಲಾಗುತ್ತಿದೆ. ಮರು ದಿನ ಅದೇ ಸ್ಥಳದಲ್ಲಿ ಮತ್ತೆ ಬ್ಲಾಕ್ ಸ್ಪಾಟ್ ಸೃಷ್ಟಿಯಾಗುತ್ತಿದೆ. 80 ಬ್ಲಾಕ್ ಸ್ಪಾಟ್‌ಗಳು ವಿವಿಧ ಕಾರಣದಿಂದ ಸ್ವಚ್ಛಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಮಹದೇವಪುರ ವಲಯ ನಂಬರ್ ಒನ್:
ಬಿಬಿಎಂಪಿಯ ಎಂಟು ವಲಯಗಳ ಪೈಕಿ ಹೆಚ್ಚು ಐಟಿ,ಬಿಟಿ ಕಂಪನಿಗಳು, ವಿದ್ಯಾವಂತರು, ತಂತ್ರಜ್ಞರು ನೆಲೆಸಿರುವ ಮಹದೇವಪುರ ವಲಯದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಬ್ಲಾಕ್ ಸ್ಪಾಟ್‌ಗಳಿವೆ. ಈ ಮೂಲಕ ಎಂಟು ವಲಯಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ. 300ಕ್ಕೂ ಅಧಿಕ ಬ್ಲಾಕ್‌ಸ್ಪಾಟ್‌ಗಳಿವೆ. ವಿದೇಶಿಗರು ಮತ್ತು ಹೊರ ರಾಜ್ಯದವರು ಹೆಚ್ಚಾಗಿ ನೆಲೆಸಿದ್ದಾರೆ. ಅಪಾರ್ಚ್‌ಮೆಂಟ್, ವಾಣಿಜ್ಯ ಕಟ್ಟಡಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಹದೇವಪುರ ವಲಯದಲ್ಲಿ ಹೆಚ್ಚಿನ ಸಂಖ್ಯೆಯ ಬ್ಲಾಕ್ ಸ್ಪಾಟ್‌ಗಳಿವೆ ಎಂದು ಬಿಬಿಎಂಪಿ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಉಳಿದಂತೆ ಎರಡನೇ ಸ್ಥಾನದಲ್ಲಿ ಪಶ್ಚಿಮ, ಮೂರನೇ ಸ್ಥಾನದಲ್ಲಿ ಪೂರ್ವ ವಲಯವಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ಬ್ಲಾಕ್ ಸ್ಪಾಟ್ ಹೊಂದುವ ಮೂಲಕ ಕೊನೆಯ ಸ್ಥಾನ ಪಡೆದುಕೊಂಡಿದೆ.
BBMP: ಹೆಚ್ಚು ತ್ಯಾಜ್ಯ ಇದ್ದರೆ ನೀವೇ ವಿಲೇವಾರಿ ಮಾಡಿ..!
ದಂಡಕ್ಕೂ ಕ್ಯಾರೇ ಎನ್ನದ ಜನರು:
ನಗರದ ಎಲ್ಲೆಂದರಲ್ಲಿ ಕಸ ಸುರಿಯುವವರಿಗೆ ಬಿಬಿಎಂಪಿಯು ನೇಮಿಸಿದ ಮಾರ್ಷಲ್‌ಗಳು ಹಿಡಿದು ದಂಡ ವಿಧಿಸುತ್ತಿದ್ದಾರೆ. ಕಳೆದ ಐದು ತಿಂಗಳಲ್ಲಿ 55 ಸಾವಿರ ಮಂದಿಯಿಂದ ಬರೋಬ್ಬರಿ 1.19 ಕೋಟಿ ರು. ದಂಡ ವಸೂಲಿ ಮಾಡಲಾಗಿದೆ. ಆದರೂ ಬ್ಲಾಕ್ ಸ್ಪಾಟ್ ಸಮಸ್ಯೆ ಪರಿಹಾರವಾಗಿಲ್ಲ.
ವಲಯವಾರು ಬ್ಲಾಕ್ ಸ್ಪಾಟ್
ವಲಯ ಬ್ಲಾಕ್ ಸ್ಪಾಟ್
ಪೂರ್ವ 250
ಪಶ್ಚಿಮ 268
ದಕ್ಷಿಣ 227
ಮಹದೇವಪುರ 344
ಆರ್‌ಆರ್‌ನಗರ 86
ಯಲಹಂಕ 121
ದಾಸರಹಳ್ಳಿ 61
ಬೊಮ್ಮನಹಳ್ಳಿ 121
ಒಟ್ಟು 1,478
ಬ್ಲಾಕ್‌ಸ್ಪಾಟ್ ಮುಕ್ತಗೊಳಿಸುವುದಕ್ಕೆ ದಂಡ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ದಿನ ಈ ಬ್ಲಾಕ್ ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. 80 ಬ್ಲಾಕ್ ಸ್ಪಾಟ್‌ಗಳನ್ನು ವಿವಿಧ ಕಾರಣದಿಂದ ಸ್ವಚ್ಛಗೊಳಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ಪಾಲಿಕೆ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್ ಶಿನ್ನಾಳ್ಕರ್ ತಿಳಿಸಿದ್ದಾರೆ.