ನವದೆಹಲಿ: 50 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಭಾರತದ 9 ಮಹಾನಗರಗಳ ಪೈಕಿ ಬೆಂಗಳೂರು, ಹೈದರಾಬಾದ್‌ ಹಾಗೂ ಪುಣೆ ನಗರಗಳಲ್ಲಿ ಕೊರೋನಾ ವೈರಸ್‌ ಸೋಂಕು ಈಗ ತೀವ್ರಗತಿಯಲ್ಲಿ ಏರುತ್ತಿದ್ದು, ಕೊರೋನಾದ ‘ಹೊಸ ಹಾಟ್‌ಸ್ಪಾಟ್‌’ ಆಗಿ ಪರಿವರ್ತನೆಗೊಂಡಿವೆ. ಆದರೆ, ಈ ಮುನ್ನ ಸೋಂಕಿನ ಕೇಂದ್ರಗಳಾಗಿದ್ದ ಮುಂಬೈ, ದಿಲ್ಲಿ, ಚೆನ್ನೈ ಹಾಗೂ ಅಹಮದಾಬಾದ್‌ನಲ್ಲಿ ಸೋಂಕಿನ ಏರುಗತಿಯಲ್ಲಿ ಇಳಿಕೆಯಾಗುತ್ತಿದೆ ಎಂಬುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ.

9 ನಗರಗಳ ಪೈಕಿ ಕೊರೋನಾ ಅತಿ ಹೆಚ್ಚು ಏರುಮುಖದಲ್ಲಿ ಸಾಗುತ್ತಿರುವುದು ಬೆಂಗಳೂರಿನಲ್ಲಿ. ಇಲ್ಲಿ ಕಳೆದ 4 ವಾರಗಳಲ್ಲಿ ಶೇ.12.9ರ ದರದಲ್ಲಿ (ದಿನಕ್ಕೆ) ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಇದೇ ವೇಳೆ, ಶೇ.8.9ರ ದರದಲ್ಲಿ (ದಿನಕ್ಕೆ) ಸಾವಿನ ಸಂಖ್ಯೆ ಏರಿದೆ. ಇನ್ನು 10 ಲಕ್ಷ ಜನಸಂಖ್ಯೆಯಲ್ಲಿ ಬೆಂಗಳೂರಲ್ಲಿ 2061 ಜನರಿಗೆ ಕೊರೋನಾ ದೃಢಪಟ್ಟಿದೆ ಹಾಗೂ 39 ಮಂದಿ ಸಾವನ್ನಪ್ಪಿದ್ದಾರೆ.

ಈ ವರ್ಷವಿಡೀ ಆನ್‌ಲೈನ್‌ ಕ್ಲಾಸೇ ಗತಿ?: ಶಿಕ್ಷಣ ಇಲಾಖೆ ಮೂಲಗಳಿಂದಲೇ ಮಾಹಿತಿ

ನಂತರದ ಸ್ಥಾನದಲ್ಲಿರುವ ಹೈದರಾಬಾದ್‌ನಲ್ಲಿ ಶೇ.7.8 ದರದಲ್ಲಿ (ದಿನಕ್ಕೆ) ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಪ್ರತಿ 10 ಲಕ್ಷ ಜನಸಂಖ್ಯೆಯಲ್ಲಿ 3,342 ಜನರಿಗೆ ಕೊರೋನಾ ತಗುಲಿದ್ದು, 3 ಸಾವು ಸಂಭವಿಸಿವೆ.

3ನೇ ಸ್ಥಾನದಲ್ಲಿರುವ ಪುಣೆಯಲ್ಲಿ ಶೇ.4.5 ದರದಲ್ಲಿ ಕೊರೋನಾ ಏರುತ್ತಿದೆ. ಸಾವಿನ ಸಂಖ್ಯೆ ಶೇ.2.4ರಷ್ಟುಹೆಚ್ಚಿದೆ. 10 ಲಕ್ಷ ಜನಸಂಖ್ಯೆಯಲ್ಲಿ 6,383 ಜನರಿಗೆ ಸೋಂಕು ತಾಗಿದ್ದು, 165 ಮಂದಿ ಮೃತಪಟ್ಟಿದ್ದಾರೆ.

ಆದರೆ, ಮುಂಬೈ, ದಿಲ್ಲಿ, ಚೆನ್ನೈ ಹಾಗೂ ಅಹಮದಾಬಾದ್‌ಗಳಲ್ಲಿ ಕಳೆದ 4 ವಾರದಲ್ಲಿ ಸೋಂಕು ಏರಿಕೆ ದರ ಇಳಿಮುಖವಾಗಿದೆ.

ಅಹಮದಾಬಾದ್‌ನಲ್ಲಿ ಸೋಂಕು ಏರುಗತಿಯಲ್ಲಿದ್ದರೂ ಮೊದಲಿನಂತಿಲ್ಲ. ಇಲ್ಲಿ ಶೇ.1.1ರ ದರದಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಮುಂಬೈನಲ್ಲಿ ಶೇ.2.4, ಚೆನ್ನೈನಲ್ಲಿ ಶೇ.3.3 ಹಾಗೂ ದಿಲ್ಲಿಯಲ್ಲಿ ಶೇ.3.4ರ ದರದಲ್ಲಿ ಸೋಂಕು ಏರುಮುಖವಾಗಿದೆ. ಈ ಮೂಲಕ ಬೆಂಗಳೂರು, ಹೈದರಾಬಾದ್‌ ಹಾಗೂ ಪುಣೆಗಳು ಸೋಂಕಿನ ಏರುಗತಿಯಲ್ಲಿ ಈ ನಗರಗಳನ್ನು ಹಿಂದಿಕ್ಕಿದಂತಾಗಿದೆ.

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!

ಚೆನ್ನೈ, ಮುಂಬೈ ನಂ.1:

ಪ್ರತಿ 10 ಲಕ್ಷ ಜನಸಂಖ್ಯೆಗೆ ಹೋಲಿಸಿ ಪ್ರಕರಣಗಳ ಸಂಖ್ಯೆ ಗಮನಿಸಿದಾಗ ಚೆನ್ನೈ ನಂ.1 ಸ್ಥಾನ ಪಡೆದಿದೆ. ಚೆನ್ನೈನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 8,595 ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಮುಂಬೈ, ಪುಣೆ ಹಾಗೂ ಕೋಲ್ಕತಾ ಇವೆ.

ಆದರೆ, ಪ್ರತಿ 10 ಲಕ್ಷ ಜನಸಂಖ್ಯೆಗೆ ಸಾವಿನ ಪ್ರಕರಣಗಳನ್ನು ಗಮನಿಸಿದಾಗ ಮುಂಬೈನಲ್ಲಿ 345 ಸಾವು ಸಂಭವಿಸಿದ್ದು ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನದಲ್ಲಿ ಅಹಮದಾಬಾದ್‌ ಹಾಗೂ ದಿಲ್ಲಿ ಇವೆ.

ಇನ್ನು ಸಾವಿನಲ್ಲಿ (ಪ್ರತಿ 100 ಪಾಸಿಟಿವ್‌ ಪ್ರಕರಣಗಳಲ್ಲಿ) ಅಹಮದಾಬಾದ್‌ ಮುಂದಿದೆ. ನಂತರದ ಸ್ಥಾನ ಮುಂಬೈ ಹಾಗೂ ಕೋಲ್ಕತಾ ಪಾಲಾಗಿದೆ.

ಯಾರೂ ಸುರಕ್ಷಿತ ಅಲ್ಲ, ಹುಷಾರು!

- ಕೊರೋನಾದಿಂದಾಗಿ ಆರೋಗ್ಯ ಹೊರತುಪಡಿಸಿ ಇತರೆ ಕ್ಷೇತ್ರಗಳ ಮೇಲೆ ಅಂಥಾ ಅಡ್ಡ ಪರಿಣಾಮಗಳಿಲ್ಲ ಎಂದು ಬಿಂಬಿಸುವ ಯತ್ನ ಅನೇಕ ಕಡೆಯಿಂದ ನಡೆಯುತ್ತಿದೆ

- ಆದರೆ, ವಾಸ್ತವ ಹಾಗಿಲ್ಲ. ರಾಜ್ಯವೂ ಸೇರಿದಂತೆ ದೇಶದಲ್ಲಿ ಸೋಂಕು, ಸಾವಿನ ಪ್ರಮಾಣ ತೀವ್ರವಾಗಿ ಏರುತ್ತಿದೆ. ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತ ಸಾಗುತ್ತಿದೆ

- ಹೆಮ್ಮಾರಿ ವೈರಾಣುವಿನಿಂದ ಸದ್ಯಕ್ಕಂತೂ ಯಾರೂ ಸುರಕ್ಷಿತರಲ್ಲ. ಈ ರೀತಿಯ ಸಂಕಷ್ಟದ ಸನ್ನಿವೇಶ ಇನ್ನೂ ಹಲವು ತಿಂಗಳ ಕಾಲ ಮುಂದುವರಿಯುವುದು ನಿಚ್ಚಳವಾಗಿದೆ

- ತಜ್ಞರು, ಸರ್ಕಾರದ ಪ್ರತಿನಿಧಿಗಳು ಸೇರಿ ಪರಿಸ್ಥಿತಿಯ ಸ್ಥೂಲಾವಲೋಕನ ನಡೆಸಿದ ಎಲ್ಲರೂ ಇದನ್ನು ಪ್ರತಿಪಾದಿಸುತ್ತಲೇ ಇದ್ದಾರೆ. ಹಾಗಾಗಿ ಜನರೇ, ಇನ್ನೂ ಹುಷಾರಾಗಿರಿ