ಎನ್‌.ಎಲ್‌. ಶಿವಮಾದು

ಬೆಂಗಳೂರು(ಜು.19): ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಈ ವರ್ಷ ಆನ್‌ಲೈನ್‌ ಶಿಕ್ಷಣವೇ ಅನಿವಾರ್ಯವಾಗಲಿದೆಯೇ?

- ಹೌದು, ಎನ್ನುತ್ತಿವೆ ಶಿಕ್ಷಣ ಇಲಾಖೆ ಮೂಲಗಳು. ಈ ಮೂಲಗಳ ಪ್ರಕಾರ, ಈ ವರ್ಷ ಖಾಸಗಿ ಶಾಲೆಗಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ದೂರದರ್ಶನದಲ್ಲಿ ಶಿಕ್ಷಣ ಇಲಾಖೆ ಪ್ರಸಾರ ಮಾಡುವ ‘ಸೇತುಬಂಧ’ ಶೈಕ್ಷಣಿಕ ಕಾರ್ಯಕ್ರಮವನ್ನೇ ಅವಲಂಬಿಸಿ ಶಿಕ್ಷಣ ಪಡೆಯಬೇಕಾಗುತ್ತದೆ.

ಸೋಂಕು ಹೆಚ್ಚಳ ಬೆಂಗಳೂರು ನಂ.1: ರಾಜ್ಯ ರಾಜಧಾನಿ ಈಗ ದೇಶದ ಕೊರೋನಾ ಹಾಟ್‌ಸ್ಪಾಟ್‌!

ಹೀಗಾಗಿಯೇ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳು ದೂರದರ್ಶನದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಆಧರಿಸಿ ಸಮರ್ಪಕವಾಗಿ ಶಿಕ್ಷಣ ಪಡೆಯುತ್ತಿದ್ದಾರೆಯೇ ಎಂಬ ನಿಗಾ ವಹಿಸಲು ಪ್ರತಿ 20 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ನಿಯೋಜಿಸಲು ಶಿಕ್ಷಣ ಇಲಾಖೆ ಯೋಜಿಸಿದೆ. ಈ ಆಫ್‌ಲೈನ್‌ ಶಿಕ್ಷಣ ಸಮರ್ಪಕವಾಗಿ ಮಕ್ಕಳಿಗೆ ತಲುಪುವಂತೆ ಮಾಡುವಲ್ಲಿ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಯಾವ್ಯಾವ ಕಾರ್ಯಭಾರ ನಿಭಾಯಿಸಬೇಕು ಎಂಬ ರೂಪರೇಷೆಯನ್ನು ಇಲಾಖೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.

ಆನ್‌ಲೈನ್‌ ಶಿಕ್ಷಣವೇ ಏಕೆ?:

ಕೊರೋನಾ ಪಿಡುಗು ನಿಕಟ ಭವಿಷ್ಯದಲ್ಲಿ ನಿಯಂತ್ರಣಕ್ಕೆ ಬರುವ ಸೂಚನೆಯಿಲ್ಲದ ಕಾರಣ ಆನ್‌ಲೈನ್‌ ಶಿಕ್ಷಣದ ಮೂಲಕವೇ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳ ಆನ್‌ಲೈನ್‌ ಶಿಕ್ಷಣಕ್ಕೆ ಒಪ್ಪಿಗೆ ನೀಡಲಾಗಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಈ ರೀತಿ ಸಂಪೂರ್ಣವಾಗಿ ಆನ್‌ಲೈನ್‌ ತರಗತಿ ನಡೆಸಲು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಹೀಗಾಗಿಯೇ ಸರ್ಕಾರಿ ಮತ್ತು ಅನುದಾನಿತ ಶಾಲೆ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ತರಗತಿಗಳ ಮೂಲಕ ಶಿಕ್ಷಣ ನೀಡುವುದೇ ಉಚಿತ ಎಂಬ ನಿರ್ಧಾರಕ್ಕೆ ಇಲಾಖೆ ಬಂದಿದೆ.

ಹೀಗಾಗಿ ಪ್ರತಿ 20 ವಿದ್ಯಾರ್ಥಿಗಳ ಹೊಣೆಯನ್ನು ಒಬ್ಬ ಶಿಕ್ಷಕರಿಗೆ ನೀಡಲು ತೀರ್ಮಾನಿಸಲಾಗಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಪಠ್ಯವನ್ನು ನೋಡಿ ಶಿಕ್ಷಕರು ತಮ್ಮದೇ ಶೈಲಿಯಲ್ಲಿ ಆಯಾ ಶಾಲಾ ವಿದ್ಯಾರ್ಥಿಗಳಿಗೆ ಉಂಟಾಗುವ ಗೊಂದಲ, ಪೂರಕ ಅಂಶಗಳನ್ನು ತಿಳಿಸಿಕೊಡಬಹುದು. ಇದೇ ರೀತಿ ವಿದ್ಯಾರ್ಥಿಗಳು ಕೂಡ ಆಯಾ ಶಾಲಾ ಶಿಕ್ಷಕರನ್ನು ಸಂಪರ್ಕಿಸಿ ತಮ್ಮ ಸಂಶಯಗಳನ್ನು ಬಗೆಹರಿಸಿಕೊಳ್ಳುವಂತಹ ಮಾರ್ಗಸೂಚಿಗಳನ್ನು ಇಲಾಖೆಯಲ್ಲಿ ಸಿದ್ಧಪಡಿಸಲಾಗುತ್ತಿದೆ.

ಆ್ಯಂಟಿಜೆನ್‌ನಲ್ಲಿ ನೆಗೆಟಿವ್‌, ಲ್ಯಾಬ್‌ ಟೆಸ್ಟಲ್ಲಿ ಪಾಸಿಟಿವ್‌!

ಇದೇ ವೇಳೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಹೊಣೆಗಾರಿಕೆ ನೀಡಲಾಗುತ್ತಿದೆ. ಒಟ್ಟಾರೆ ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ ಆನ್‌ಲೈನ್‌ ಶಿಕ್ಷಣವನ್ನು ಯಶಸ್ವಿಗೊಳಿಸುವ ಉದ್ದೇಶ ಹೊಂದಲಾಗಿದೆ.

ಖಾಸಗಿ ಶಾಲೆಗಳಲ್ಲಿ ಎಂದಿನಂತೆ ಆನ್‌ಲೈನ್‌:

ಈಗಾಗಲೇ ಖಾಸಗಿ ಶಾಲೆಗಳಲ್ಲಿ ಅಧಿಕೃತವಾಗಿಯೇ ಆನ್‌ಲೈನ್‌ ತರಗತಿಗಳನ್ನು ನಡೆಸಲಾಗುತ್ತಿದೆ. ಆನ್‌ಲೈನ್‌ ಶಿಕ್ಷಣ ವಿರೋಧಿಸಿ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ದೂರುಗಳು ದಾಖಲಾಗಿವೆ. ಹೀಗಿದ್ದರೂ ಒಂದೇ ಒಂದು ಶಾಲೆಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಂಡಿರುವ ಉದಾಹರಣೆಗಳಿಲ್ಲ. ತನ್ಮೂಲಕ ತೋರಿಕೆಗೆ ಆನ್‌ಲೈನ್‌ಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದ್ದರೂ ಪರೋಕ್ಷವಾಗಿ ಬೆಂಬಲ ನೀಡಿದಂತಿದೆ.

ಕೊರೋನಾ ಸ್ಥಿತಿ ಡಿಸೆಂಬರ್‌-ಜನವರಿ ವರೆಗೂ ಮುಂದುವರಿದರೆ ವಿದ್ಯಾರ್ಥಿಗಳಿಗೆ ಒಂದು ಶೈಕ್ಷಣಿಕ ವರ್ಷ ಹಾಳಾಗಬಾರದು ಎಂಬ ಉದ್ದೇಶದಿಂದ ಆನ್‌ಲೈನ್‌ ಕಲಿಕೆಗೆ ನಿಯಂತ್ರಣ ಮಾಡದಿರಲು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

ಖಾಸಗಿಗೆ ಆನ್‌ಲೈನ್‌: ಸರ್ಕಾರಿಗೆ ದೂರದರ್ಶನ

ಖಾಸಗಿ ಶಾಲೆಗಳು ಈಗಾಗಲೇ ಇಂಟರ್‌ನೆಟ್‌ ಆಧಾರಿತ ಆನ್‌ಲೈನ್‌ ಹಾಗೂ ಆಫ್‌ಲೈನ್‌ ತರಗತಿಗಳನ್ನು ಆರಂಭಿಸಿವೆ. ಆದರೆ, ಈ ಸವಲತ್ತುಗಳನ್ನು ಹೊಂದಿರದ ಬಡ ವಿದ್ಯಾರ್ಥಿಗಳೇ ಹೆಚ್ಚಿರುವ ಸರ್ಕಾರಿ ಶಾಲಾ ಮಕ್ಕಳಿಗೆ ದೂರದರ್ಶನದಲ್ಲಿ ಶಿಕ್ಷಣ ಇಲಾಖೆ ‘ಸೇತುಬಂಧ’ ಎಂಬ ಕಾರ್ಯಕ್ರಮದ ಮೂಲಕ ಪಾಠ ಮಾಡಲು ವ್ಯವಸ್ಥೆ ಮಾಡಿದೆ.