Asianet Suvarna News Asianet Suvarna News

ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಶೆಡ್ಯೂಲ್‌ 9ಕ್ಕೆ ಸೇರಿಸಿ: ಕೇಂದ್ರಕ್ಕೆ ರಾಜ್ಯದಿಂದ ಪತ್ರ

ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರವು ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. 

Increase in SC ST Reservation Add to Schedule 9 Letter from State to Central gvd
Author
First Published Mar 24, 2023, 5:22 AM IST

ಬೆಂಗಳೂರು (ಮಾ.24): ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗಕ್ಕೆ ಮೀಸಲಾತಿ ಹೆಚ್ಚಳ ಮಾಡಿ ತೀರ್ಮಾನ ಕೈಗೊಂಡಿರುವ ರಾಜ್ಯ ಸರ್ಕಾರವು ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಗುರುವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಕುಮಾರ್‌ ಬಲ್ಲಾ ಅವರಿಗೆ ಶಿಫಾರಸು ಮಾಡಿ ಪತ್ರ ಬರೆದಿದ್ದಾರೆ. ಜತೆಗೆ ಮೀಸಲಾತಿ ಹೆಚ್ಚಳದ ವಿಧೇಯಕವನ್ನೂ ಲಗತ್ತಿಸಿದ್ದಾರೆ.

ರಾಜ್ಯ ಸರ್ಕಾರವು ಎಸ್‌ಸಿ ವರ್ಗಕ್ಕೆ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಮತ್ತು ಎಸ್‌ಟಿ ವರ್ಗದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಿದೆ. ಈ ಸಂಬಂಧ ಉಭಯ ಸದನದಲ್ಲಿ ಒಪ್ಪಿಗೆ ಪಡೆದು ರಾಜ್ಯಪಾಲರ ಅಂಕಿತವನ್ನು ಸಹ ಪಡೆದುಕೊಳ್ಳಲಾಗಿದೆ. ಮೀಸಲಾತಿ ಪ್ರಮಾಣವು ಶೇ.50ಕ್ಕಿಂತ ಹೆಚ್ಚಳವಾಗುವುದರಿಂದ ಕೇಂದ್ರ ಸರ್ಕಾರವು ಸಂವಿಧಾನದ ಶೆಡ್ಯೂಲ್‌ 9ಕ್ಕೆ ಸೇರಿಸಿ ಮೀಸಲಾತಿ ಅನುಷ್ಠಾನಕ್ಕೆ ಅನುವು ನೀಡಬೇಕು ಎಂದು ಶಿಫಾರಸಿನಲ್ಲಿ ಕೋರಲಾಗಿದೆ. ಮೀಸಲಾತಿ ಪ್ರಮಾಣವು ಶೇ.50ರಷ್ಟುಮೀರುವಂತಿಲ್ಲ ಎಂದು ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತೀರ್ಪು ನೀಡಿದೆ. 

ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ

ರಾಜ್ಯದಲ್ಲಿ ಈಗ ಶೇ.50ರಷ್ಟು ಮೀಸಲಾತಿ ಇದೆ. ಹೆಚ್ಚಳ ಜಾರಿಯಾದರೆ ಈ ಪ್ರಮಾಣವು ಶೇ.56ರಷ್ಟು ಆಗಲಿದೆ. ಶೇ.50ರ ಮಿತಿ ಮೀರುವುದರಿಂದ ಅನುಷ್ಠಾನ ಮಾಡುವುದು ಕಷ್ಟಕರ. ಶೆಡ್ಯೂಲ್‌ 9ಕ್ಕೆ ಸೇರ್ಪಡೆ ಮಾಡುವುದರಿಂದ ಮೀಸಲಾತಿ ಪ್ರಮಾಣವು ಹೆಚ್ಚಳ ಮಾಡಲು ಸಾಧ್ಯವಾಗಲಿದೆ. ಈಗಾಗಲೇ ತಮಿಳುನಾಡು ಸರ್ಕಾರ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣವು ಶೇ.50ಕ್ಕಿಂತ ಮೀರಿದ್ದು, ಶೆಡ್ಯೂಲ್‌-9ಕ್ಕೆ ಸೇರಿಸಲಾಗಿದೆ. ಇತರೆ ರಾಜ್ಯದಲ್ಲಿ ಶೆಡ್ಯೂಲ್‌ 9ಕ್ಕೆ ಸೇರಿಸಿರುವಂತೆಯೇ ರಾಜ್ಯದ ಪ್ರಸ್ತಾಪವನ್ನು ಕೇಂದ್ರವು ಒಪ್ಪಿ ಶೆಡ್ಯೂಲ್‌-9ಕ್ಕೆ ಸೇರಿಸಿದರೆ ಮೀಸಲಾತಿ ಹೆಚ್ಚಳ ಅನುಷ್ಠಾನ ಮಾಡಲು ಸಾಧ್ಯವಾಗಲಿದೆ.

ಎಸ್‌ಸಿ ಮೀಸಲು ಹೆಚ್ಚಿಸಿ ಸರ್ಕಾರದ ಕೊಡುಗೆ: ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಿಸುವ ಮೂಲಕ ಪರಿಶಿಷ್ಟಜಾತಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಮಹತ್ವದ ಕೊಡುಗೆ ನೀಡಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ವತಿಯಿಂದ ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ನಡೆದ ಎಸ್‌ಸಿ ಮೋರ್ಚಾ ಹಾಗೂ ಒಬಿಸಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಮೀಸಲಾತಿ ಹೆಚ್ಚಿಸುವ ಮೂಲಕ ಪರಿಶಿಷ್ಟಜಾತಿಯ ಜನರ ಬಹುಕಾಲದ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸಿದೆ. 

ಸಿಎಂ ಬೊಮ್ಮಾಯಿ ಸೇರಿ ಬಿಜೆಪಿಯಲ್ಲಿ ಎಲ್ಲರೂ ಭ್ರಷ್ಟರು: ಸಿದ್ದರಾಮಯ್ಯ

ಇದರಿಂದಾಗಿ ದಲಿತ ನಾಯಕರು ಇಂದು ಬಿಜೆಪಿ ಬಗ್ಗೆ ಭರವಸೆ ಹೊಂದಿದ್ದಾರೆ. 23.5 ಲಕ್ಷ ಎಸ್‌ಸಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಪರಿಶಿಷ್ಟಜಾತಿಯ ಶೇ.82 ಮಂದಿಗೆ ಇದರಿಂದ ಪ್ರಯೋಜನ ಆಗಿದೆ. ಎಸ್‌ಸಿ ಮತ್ತು ಹಿಂದುಳಿದ ವರ್ಗಗಳ ಮಕ್ಕಳಿಗೆ ಹಾಸ್ಟೆಲ್‌ ಸೌಲಭ್ಯ ಒದಗಿಸಲಾಗಿದೆ. ಎಸ್‌ಸಿ ವಿದ್ಯಾರ್ಥಿಗಳು ಲಂಡನ್‌ಗೆ ತೆರಳಿ ಅಧ್ಯಯನ ನಡೆಸುವ ಅವಕಾಶವನ್ನು ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದರು. ಕಾಂಗ್ರೆಸ್‌ ಪಕ್ಷಕ್ಕೆ ಜನರು ಮತ ನೀಡುವುದಿಲ್ಲ ಎಂದು ಕಾಂಗ್ರೆಸಿಗರಿಗೆ ಗೊತ್ತಾಗಿದೆ. ಅದಕ್ಕಾಗಿ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಶತಮಾನದ ಇತಿಹಾಸ ಇರುವ ಪಕ್ಷವೊಂದು ಗ್ಯಾರಂಟಿ ಕಾರ್ಡ್‌ ನೀಡುವ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಕೋಟ ಲೇವಿಡ ಮಾಡಿದರು.

Follow Us:
Download App:
  • android
  • ios