ಮತ್ತೆ ಸಚಿವ ಗಡ್ಕರಿಗೆ ಜೀವ ಬೆದರಿಕೆ ಕರೆ: ಬೆಳಗಾವಿ ಕೈದಿ ಹೆಸರಲ್ಲಿ ಮಂಗಳೂರಿಂದ ಬೆದರಿಕೆ
ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬನ ಹೆಸರಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ಮಾಸುವ ಮುನ್ನವೇ, ಮತ್ತೆ ಅದೇ ವ್ಯಕ್ತಿ ಹೆಸರಲ್ಲಿ ಮಂಗಳವಾರ ಬೆದರಿಕೆ ಕರೆ ಮಾಡಲಾಗಿದೆ.
ಬೆಳಗಾವಿ (ಮಾ.22): ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬನ ಹೆಸರಲ್ಲಿ ಜೀವ ಬೆದರಿಕೆ ಹಾಕಿರುವ ಘಟನೆ ಮಾಸುವ ಮುನ್ನವೇ, ಮತ್ತೆ ಅದೇ ವ್ಯಕ್ತಿ ಹೆಸರಲ್ಲಿ ಮಂಗಳವಾರ ಬೆದರಿಕೆ ಕರೆ ಮಾಡಲಾಗಿದೆ. ಈ ಬಾರಿ ಮಂಗಳೂರಿನ ಮಹಿಳೆಯೊಬ್ಬರಿಗೆ ಸೇರಿದ ಸಂಖ್ಯೆಯಿಂದ ಈ ಕರೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಜ.14ರಂದು ಹಿಂಡಲಗಾ ಕಾರಾಗೃಹದಲ್ಲಿರುವ ಕೈದಿ ಜಯೇಶ್ ಕಾಂತಾ ಅಲಿಯಾಸ್ ಜಯೇಶ್ ಪೂಜಾರಿ ಎಂಬಾತನ ಹೆಸರಲ್ಲಿ ನಾಗ್ಪುರದಲ್ಲಿರುವ ಗಡ್ಕರಿ ಕಚೇರಿಗೆ ಕರೆ ಮಾಡಿ 100 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಒಂದು ವೇಳೆ ಹಣ ಕೊಡದಿದ್ದರೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆಯನ್ನೂ ಹಾಕಲಾಗಿತ್ತು. ಈ ಕರೆ ಹಿಂಡಲಗಾ ಜೈಲಿನಿಂದಲೇ ಬಂದಿದೆ ಎಂಬುದನ್ನು ಖಚಿತಪಡಿಸಿಕೊಂಡ ಮಹಾರಾಷ್ಟ್ರ ಪೊಲೀಸರು ಕಾರಾಗೃಹಕ್ಕೂ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ಆದರೆ, ಜಯೇಶ್ ಕಾಂತಾ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದ.
ಬೆಂ-ಮೈ ಎಕ್ಸ್‌ಪ್ರೆಸ್‌ವೇಯಿಂದ ಕರ್ನಾಟಕದ ಅಭಿವೃದ್ಧಿ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಮೂರು ಬಾರಿ ಕರೆ: ಇದೀಗ ಜಯೇಶ್ ಕಾಂತಾ ಹೆಸರಿನಲ್ಲೇ ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಜನಸಂಪರ್ಕ ಕಚೇರಿ ಲ್ಯಾಂಡ್‌ಲೈನ್‌ಗೆ ಕರೆ ಮಾಡಿ 10 ಕೋಟಿಗೆ ಬೇಡಿಕೆ ಇಡಲಾಗಿದೆ. ಬೆಳಗ್ಗೆ ಎರಡು ಬಾರಿ ಮತ್ತು ಮಧ್ಯಾಹ್ನ ಒಂದು ಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆದರಿಕೆ ಕರೆ ಬಂದ ಸಂಖ್ಯೆಯು ಮಂಗಳೂರಿನ ಮಹಿಳೆಗೆ ಸೇರಿದೆ. ನಾವು ಆಕೆಯನ್ನು ಸಂಪರ್ಕಿಸಿದಾಗ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವುದು ತಿಳಿದು ಬಂದಿದೆ. ಬೆದರಿಕೆ ಕರೆಯನ್ನು ಆಕೆಯ ಸ್ನೇಹಿತರಾರಯರಾದರೂ ಮಾಡಿದ್ದಾರೆಯೇ ಎಂಬ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಮಹಾರಾಷ್ಟ್ರದ ಪೊಲೀಸ್ ಉಪ ಮಹಾನಿರ್ದೇಶಕ ರಾಹುಲ್ ಮದಾನೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಮೊದಲ ಮೆಥನಾಲ್ ಚಾಲಿತ ಬಸ್ ಲೋಕಾರ್ಪಣೆ ಮಾಡಿದ ಸಚಿವ ನಿತಿನ್ ಗಡ್ಕರಿ
ಆದರೆ, ಮಂಗಳೂರು ಪೊಲೀಸರು ಮಾತ್ರ ಈ ಕುರಿತು ತಮಗೆ ಯಾವುದೇ ಮಾಹಿತಿ ನೀಡಿಲ್ಲ, ಮಹಾರಾಷ್ಟ್ರ ಪೊಲೀಸರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ತಿಳಿಸಿದ್ದಾರೆ. ಜಯೇಶ್ ಕಾಂತಾ ಕೂಡ ಮಂಗಳೂರು ಮೂಲದವನೇ ಆಗಿದ್ದಾನೆ. ಕೊಲೆ ಪ್ರಕರಣವೊಂದರಲ್ಲಿ ಆತನನ್ನು ಹಿಂಡಲಗಾ ಜೈಲಿನಲ್ಲಿಡಲಾಗಿದೆ.