ಬೆಂಗಳೂರು[ಜ.29]: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

"

ಐಎಂಎ ಸಮೂಹದ ಕಂಪನಿಗಳ ವಿರುದ್ಧ ದೂರು ಕೇಳಿಬಂದಾಗ ಅಂದಿನ ಪೊಲೀಸ್‌ ಅಧಿಕಾರಿಯೊಬ್ಬರು ತನಿಖೆ ನಡೆಸಿದ್ದರು. ಐಎಂಎ ಪರವಾಗಿ ವರದಿಗಳನ್ನು ಸಿದ್ಧಪಡಿಸಿ ಕ್ಲೀನ್‌ ಚಿಟ್‌ ನೀಡಿದ್ದರು. ಹಾಗಾಗಿ, ಐಎಂಎ ವಿರುದ್ಧ ಯಾವುದೇ ಕ್ರಮ ಜರುಗಿಸಲು ಯಾರೂ ಮುಂದಾಗಲಿಲ್ಲ. ಐಎಂಎ ವಂಚನೆ ಮುಂದುವರಿಯಲು ಇದು ಕಾರಣವಾಯಿತು ಎಂಬ ಆರೋಪ ಕೇಳಿ ಬಂದಿತ್ತು. ಈಗ ಐಎಂಎ ಸಂಸ್ಥೆಯ ಮುಖ್ಯಸ್ಥ ಹಾಗೂ ಹಗರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ನೀಡಿದ್ದ ಹೇಳಿಕೆಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

ಐಎಂಎ ವಿಶೇಷ ತನಿಖಾಧಿಕಾರಿಯಾಗಿ ಹರ್ಷಗುಪ್ತಾ ನೇಮಕ

ಅಲ್ಲದೆ, ಪೂರ್ವ ವಿಭಾಗದ ಡಿಸಿಪಿಯೊಬ್ಬರಿಗೆ ಲಂಚ ನೀಡಿದ್ದಾಗಿ ಮನ್ಸೂರ್‌ ಬಾಯ್ಬಿಟ್ಟಿದ್ದ. ಸಿಬಿಐಗೂ ಮುನ್ನ ಪ್ರಕರಣದ ತನಿಖೆ ನಡೆಸುತ್ತಿದ್ದ ಎಸ್‌ಐಟಿ ಅಂದಿನ ಡಿಸಿಪಿಯನ್ನು ವಿಚಾರಣೆ ನಡೆಸಿತ್ತು. ಪ್ರಕರಣ ಸಿಬಿಐಗೆ ವರ್ಗಾವಣೆಯಾದ ಬಳಿಕ ಡಿಸಿಪಿ ಸೇರಿದಂತೆ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಯನ್ನು ಹಲವು ಬಾರಿ ವಿಚಾರಣೆ ನಡೆಸಲಾಗಿತ್ತು. ತನಿಖೆ ವೇಳೆ ಐಎಂಎ ಪ್ರಕರಣದಲ್ಲಿ ಇಬ್ಬರು ಅಧಿಕಾರಿಗಳು ಪರೋಕ್ಷವಾಗಿ ನೆರವು ನೀಡಿದ್ದರು ಎಂಬುದನ್ನು ಸಿಬಿಐ ಅಧಿಕಾರಿಗಳು ಪತ್ತೆಹಚ್ಚಿದ್ದರು ಎನ್ನಲಾಗಿದೆ.

ಹೀಗಾಗಿ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅನುಮತಿ ನೀಡುವಂತೆ ಸಿಬಿಐ ಸರ್ಕಾರಕ್ಕೆ ಅನುಮತಿ ಕೇಳಿ ಪತ್ರ ಬರೆದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಅಧಿಕಾರಿಗಳ ವಿರುದ್ಧ ತನಿಖೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಐಎಂಎ ಆಸ್ತಿ ಮುಟ್ಟುಗೋಲಿಗೆ ಅಧಿಸೂಚನೆ ಹೊರಡಿಸಿ: ಕೋರ್ಟ್