ಬೆಂಗಳೂರು[ಜ.15]:  ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಿರ ಹಾಗೂ ಚರ ಆಸ್ತಿ ಜಪ್ತಿ ಪ್ರಕ್ರಿಯೆ ನಡೆಸುವ ಸಂಬಂಧ ಸಕ್ಷಮ ಪ್ರಾಧಿಕಾರ ರಚಿಸಿ ಇದಕ್ಕೆ ಹಿರಿಯ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರನ್ನು ಐಎಂಎ ಪ್ರಕರಣದ ವಿಶೇಷ ಅಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕೆಲ ತಿಂಗಳ ಹಿಂದೆ ಹರ್ಷ ಗುಪ್ತಾ ಅವರಿಗೆ ಐಎಂಎ ಪ್ರಕರಣದ ಸ್ಥಿರ ಹಾಗೂ ಚರ ಆಸ್ತಿ ಜಪ್ತಿ ಮಾಡುವ ಸಂಬಂಧ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿತ್ತು. ಬೇರೆ ಹುದ್ದೆ ಜತೆ ಈ ಹುದ್ದೆಯನ್ನು ಹರ್ಷ ಗುಪ್ತಾ ಅವರು ನಿರ್ವಹಣೆ ಮಾಡುತ್ತಿದ್ದರು. ಇನ್ನು ಮುಂದೆ ಸಕ್ಷಮ ಪ್ರಾಧಿಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂದುವರೆಯಲಿದ್ದಾರೆ. ಇದಕ್ಕೆಂದೆ ಐಎಂಎ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಎಂಬ ಹೊಸ ಹುದ್ದೆ ಎಂದು ಸೃಷ್ಟಿಸಿ ಸರ್ಕಾರ ಆದೇಶಿಸಿದೆ.

IMA ವಂಚನೆ: CBIಗೆ ಸಿಕ್ತು ಸೀಕ್ರೆಟ್ ಡೈರಿ; ಬಂಡವಾಳ ಬಿಚ್ಚಿಟ್ಟ ಪೊಲೀಸ್ ಅಧಿಕಾರಿ...

ಈಗಾಗಲೇ ವಿಶೇಷ ತನಿಖಾ ತಂಡ (ಎಸ್‌ಐಟಿ) ಗುರುತಿಸಿದ ಐಎಂಎಗೆ ಸೇರಿದ ಸ್ಥಿರ ಹಾಗೂ ಚರ ಆಸ್ತಿಯನ್ನು ಮುಟ್ಟಗೋಲು ಹಾಕಿಕೊಂಡು ವಿಶೇಷ ನ್ಯಾಯಾಲಯಕ್ಕೆ ಮಾಹಿತಿ ನೀಡಲಿದೆ. ಬಳಿಕ ಕೋರ್ಟ್‌ ಸೂಚನೆ ಮೇರೆಗೆ ಆಸ್ತಿ ಹರಾಜು ಹಾಕಿ ಕೋರ್ಟ್‌ ಸೂಚನೆಯಂತೆ ಸಂತ್ರಸ್ತರಿಗೆ ಹಣ ಹಂಚಿಕೆ ಮಾಡಲಿದೆ. ಈ ಹುದ್ದೆಯು ಸರ್ಕಾರದ ಕಾರ್ಯದರ್ಶಿ ಹುದ್ದೆ ಸಮನಾಂತರವಾಗಿದೆ.