ಬೆಂಗಳೂರು [ಸೆ.17]:  ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಗುರುತಿಸಿದ್ದ ಐಎಂಎಗೆ ಸೇರಿದ ಸ್ಥಿರ ಹಾಗೂ ಚರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಕ್ಷಮ ಪ್ರಾಧಿಕಾರ ಶೀಘ್ರ ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ಮತ್ತು ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು. ಅಲ್ಲದೆ, ಸಕ್ಷಮ ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಅವರಿಗೆ ತಕ್ಷಣವೇ ಐದು ಸಿಬ್ಬಂದಿ ಹಾಗೂ ಒಂದು ತಿಂಗಳೊಳಗೆ 25 ಸಿಬ್ಬಂದಿಯನ್ನು ಒದಗಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಇದಕ್ಕೂ ಮುನ್ನ ಸರ್ಕಾರಿ ವಕೀಲ ಎ.ಅಚ್ಚಪ್ಪ, ಆಸ್ತಿ ಪಾಸ್ತಿ ಜಪ್ತಿಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್‌, ಸಿಬಿಐ ತನಿಖಾ ವರದಿಯನ್ನು ಕೂಡ ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಿದರು. ಜತೆಗೆ, ಪ್ರಕರಣದ ತನಿಖೆಯನ್ನು ಸಿಬಿಐ ಆ.30ರಂದು ಕೈಗೆತ್ತಿಕೊಂಡಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿಸಲ್ಲಿಕೆಗೆ ಪೂರ್ವಾನುಮತಿ ಬೇಕಿದೆ. ಹಾಗಾಗಿ ಅನುಮತಿ ಕೋರಿ ಸರ್ಕಾರಕ್ಕೆ ತನಿಖಾ ಸಂಸ್ಥೆ ಮನವಿ ಮಾಡಿದೆ ಎಂದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ಸರ್ಕಾರಿ ಅಧಿಕಾರಿಗಳ ವಿರುದ್ಧ ಆರೋಪಪಟ್ಟಿಸಲ್ಲಿಕೆಗೆ ಪೂರ್ವಾನುಮತಿ ನೀಡಲು ಸರ್ಕಾರವು ಶೀಘ್ರ ಕ್ರಮ ಕೈಗೊಳ್ಳಬೇಕು. ಅ.18ರೊಳಗೆ ಸಿಬಿಐ ಮುಂದಿನ ತನಿಖಾ ಪ್ರಗತಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ರೋಷನ್‌ ಬೇಗ್‌ ಹೆಸರು ಉಲ್ಲೇಖ

ಅರ್ಜಿದಾರರ ಪರ ವಕೀಲರೊಬ್ಬರು ವಾದಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್‌ ಬೇಗ್‌ ಅವರಿಗೆ ತನಿಖಾ ಸಂಸ್ಥೆ ನಾಲ್ಕು ಬಾರಿ ಸಮನ್ಸ್‌ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಜೊತೆಗೆ ಅವರಿಗೆ ರಕ್ಷಣೆ ನೀಡುವಂತೆ ರಾಜ್ಯಪಾಲರು ಎಸ್‌ಐಟಿಗೆ ಪತ್ರ ಬರೆದಿದ್ದಾರೆ. ಇನ್ನೂ ಸಚಿವರೊಬ್ಬರು 10 ಕೋಟಿ ಕೇಳಿದ್ದಾರೆಂದು ಪ್ರಮುಖ ಆರೋಪಿ ತಿಳಿಸಿದ್ದಾನೆ. ಇಬ್ಬರ ಮೇಲೂ ಸಿಬಿಐ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಮತ್ತೊಬ್ಬ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಇಬ್ಬರು ಸರ್ಕಾರಿ ನೌಕರರನ್ನು ಮಾತ್ರ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಜಕಾರಣಿ ಮತ್ತು ಅಧಿಕಾರಿಗಳ ವಿರುದ್ಧ ಎಸ್‌ಐಟಿ ಹಾಗೂ ಸಿಬಿಐ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.