ಹಾಸನ : ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಯೋಧರ ಮೇಲೆ ನಡೆದ ಉಗ್ರರ ದಾಳಿಗೆ ಸಿಎಂ ಎಚ್.ಡಿ ಕುಮಾರಸ್ವಾಮಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.  

ಹಾಸನದ ಚನ್ನರಾಯಪಟ್ಟಣದಲ್ಲಿ ಮಾತನಾಡುತ್ತಾ ಇಂತಹ ಕರಾಳ ಘಟನೆ ನಡೆಯಬಾರದಿತ್ತು. ಇಂಥ ವಿಚ್ಛಿದ್ರ ಶಕ್ತಿ‌ ವಿರುದ್ಧ ನಾವೆಲ್ಲರೂ ಒಂದಾಗಿ ಹೋರಾಡುವ ಅಗತ್ಯವಿದೆ ಎಂದಿದ್ದಾರೆ. ಅಲ್ಲದೇ ಹುತಾತ್ಮರಾದ ಮಂಡ್ಯ  ಯೋಧ ಗುರು ಅವರ ಪತ್ನಿಗೆ  ಸರ್ಕಾರಿ ಉದ್ಯೋಗ ನೀಡುವ ಬಗ್ಗೆಯೂ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. 

ಜನರಿಗಾಗಿ ಕೆಲಸ :  ಜನರ ಆಶೋತ್ತರಗಳಿಗೆ ತಕ್ಕಂತೆ ನಾನು ಕೆಲಸ ಮಾಡುತ್ತಿದ್ದೇನೆ.  ನಾನು ಕಾಂಗ್ರೆಸ್ ಕ್ಲರ್ಕ್ ಅಲ್ಲ. ಆರೂವರೆ ಕೋಟಿ ಜನರ ಕ್ಲರ್ಕ್ ಹೀಗೆಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. 

ಆಪರೇಷನ್ ಆಡಿಯೋ ಬಗ್ಗೆಯೂ ಪ್ರಸ್ತಾಪಿಸಿದ್ದು, ಯಾರಿಂದಲೂ ತಮ್ಮ ಅಧಿಕಾರ ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ನನಗೆ ದೇವರು ಕೊಟ್ಟ ಅಧಿಕಾರ ಎಂದು ಹೇಳಿದ್ದಾರೆ. 

ಪ್ರೀತಂ ಗೌಡ ಅವರನ್ನು ಮುಗಿಸಲು ಸಂಚು ಮಾಡಿದ್ದೇವೆ ಎನ್ನುವ ಆರೋಪ ಸುಳ್ಳು. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷರಾಗಿ ಇಂತಹ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ. 

ಬಿಜೆಪಿ ನಾಯಕರಿಗೆ ಯಾವುದೇ ನೈತಿಕತೆ ಇಲ್ಲ. ನಮ್ಮ ಮೇಲೆ ಸಲ್ಲದ ಆರೋಪ ಮಾಡುತ್ತಿರುವುದು ಅವರ ಸಂಸ್ಕೃತಿ ತೋರಿಸುತ್ತದೆ. ಆದ್ದರಿಂದ ನಾವು ಅವರ ಬಗ್ಗೆ ಮಾತನಾಡದಿರುವುದೇ ಲೇಸು ಎಂದು ಹೇಳಿದ್ದಾರೆ.