ಪಡಿತರ ಅಕ್ಕಿ ಅಕ್ರಮದಲ್ಲಿ ಪ್ರಭಾವಿ ಸಚಿವನ ಹೆಸರು ? ಬಂಧಿತ ಮಣಿಕಂಠ ರಾಥೋಡ್ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಏನಿದೆ?
ಸರ್ಕಾರಿ ಗೋದಾಮಿನಿಂದ (TAPCMS) ಅಂದಾಜು 2 ಕೋಟಿ ರು. ಮೌಲ್ಯದ, 6088 ಕ್ವಿಂ.ನಷ್ಟು ಪಡಿತರ ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಬಗ್ಗೆ ನ.25, 2023 ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು
ಬೆಂಗಳೂರು (ಜು.22): ಸರ್ಕಾರಿ ಗೋದಾಮಿನಿಂದ (TAPCMS) ಅಂದಾಜು 2 ಕೋಟಿ ರು. ಮೌಲ್ಯದ, 6088 ಕ್ವಿಂ.ನಷ್ಟು ಪಡಿತರ ಅಕ್ಕಿ ದಾಸ್ತಾನು ನಾಪತ್ತೆಯಾಗಿರುವ ಬಗ್ಗೆ ನ.25, 2023 ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಆಗ ಹಲವರ ಬಂಧಿಸಿದ ವೇಳೆ ಆರೋಪಿಗಳ ಹೇಳಿಕೆ ಮೇರೆಗೆ, ವಿಚಾರಣೆ ಮುಂದುವರಿದ ಭಾಗವಾಗಿ ನಾಲ್ಕು ದಿನಗಳ ಹಿಂದೆ ಮಣಿಕಂಠನನ್ನು ಶಹಾಪುರ ಪೊಲೀಸರು ಕಲಬುರಗಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿರುವ ಬಂಧಿತ ಆರೋಪಿ ಮಣಿಕಂಠ ರಾಠೋಡ್, ಅಕ್ರಮದ ರೂವಾರಿ ಚಾಮನಾಳದ ಮಲ್ಲಿಕ್ ಎಂಬಾತನನ್ನು ಪಾರು ಮಾಡಿಸಲು ವಿನಾಕಾರಣ ತನ್ನನ್ನು ಈ ಅಕ್ಕಿ ಹಗರಣದಲ್ಲಿ ಸಿಲುಕಿಸಲಾಗುತ್ತಿದೆ ಎಂದು ದೂರಿದ್ದಾನೆನ್ನಲಾಗಿದೆ.
ಬಿಜೆಪಿ ತೊರೆದರೆ ಕಾಂಗ್ರೆಸ್‌ನಿಂದ ನಿಗಮಾಧ್ಯಕ್ಷ ಹುದ್ದೆ ಆಮಿಷ: ಮಣಿಕಂಠ ಆರೋಪ
ಮಣಿಕಂಠ ಬರೆದಿದ್ದಾನೆ ಎನ್ನಲಾದ ಇಂತಹುದ್ದೊಂದು ಪತ್ರದಲ್ಲಿ ಸಚಿವರೊಬ್ಬರ ಹೆಸರು ಉಲ್ಲೇಖಿಸಿ, ಮಲ್ಲಿಕ್ ಎಂಬಾತನ ಮೂಲಕ ಸಚಿವರ ಭೇಟಿಯಾಗಿದ್ದೆ. ಆಗ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದು, ದುಡ್ಡಿನ ಅವಶ್ಯಕತೆ ಹಿನ್ನೆಲೆ ಪಡಿತರ ಅಕ್ಕಿ ಖರೀದಿಸುವಂತೆ ತನಗೆ ಹೇಳಲಾಗಿತ್ತು ಎಂದು ತಿಳಿಸಲಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿತ್ತಾಪುರ ಮತಕ್ಷೇತ್ರದಿಂದ ಪ್ರಿಯಾಂಕ ಖರ್ಗೆ(Priyank kharge) ವಿರುದ್ಧ ಮಣಿಕಂಠ(Manikanth rathod) ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಸೋಲು ಕಂಡಿದ್ದರು. ಆ ವೇಳೆ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಣಿಕಂಠ, ಅಪಘಾತದ ಮೂಲಕ ತನ್ನ ಕೊಲೆಗೆ ಸಂಚು ನಡೆಸಲಾಗಿದೆ ಎಂಬ ಹೇಳಿಕೆ ಸೃಷ್ಟಿಸಲಾಗಿತ್ತು ಎಂದು ನಂತರದಲ್ಲಿ ಕೇಳಿಬಂದಿತ್ತು.