ವಾಲ್ಮೀಕಿ ನಿಗಮ ಹಗರಣದ ಬೆನ್ನಲ್ಲೇ ಪ್ರವಾಸೋದ್ಯಮ ಇಲಾಖೆಯಲ್ಲೂ ಅಕ್ರಮ ಹಣ ವರ್ಗಾವಾಣೆ..!
ಪ್ರವಾಸೋ ದ್ಯಮ ಇಲಾಖೆಯ 2.47 ಹಣ ಅಕ್ರಮ ವಾಗಿ ವರ್ಗಾ ವಣೆಯಾ ಗಿರುವ ಕುರಿತು ಈಗಾಗಲೇ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ: ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ
ಬಾಗಲಕೋಟೆ(ಜು.14): ರಾಜ್ಯದಲ್ಲಿ ವಾಲ್ಮೀಕಿ ಹಗರಣ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ ಬಾಗಲಕೋಟೆ ನಗರದಲ್ಲೂ ಪ್ರವಾಸೋದ್ಯಮ ಇಲಾಖೆಯ ಹಣವನ್ನು ಅಧಿಕಾರಿಗಳ ಗಮನಕ್ಕೆ ತರದೇ ₹2.47 ಕೋಟಿಗೂ ಅಧಿಕ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಐಡಿಬಿಐ ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ₹2 ಕೋಟಿಗೂ ಅಧಿಕ ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿದ ಮ್ಯಾನೇಜರ್ ಮತ್ತು ಸಿಬ್ಬಂದಿಯ ವಿರುದ್ಧ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಗೋಪಾಲ ಹಿತ್ತಲಮನಿ ದೂರು ದಾಖಲಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯ ₹2.47 ಕೋಟಿಗೂ ಅಧಿಕ ಹಣದ ವಂಚನೆಯನ್ನು ಐಡಿಬಿಐ ಬ್ಯಾಂಕ್ ಖಾತೆಗಳ ಮೂಲಕ ₹2,47,73,999 ಹಣ ವಿವಿಧ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದ್ದು, ಇದು ಇದೀಗ ಬೆಳಕಿಗೆ ಬಂದಿದೆ.
ಬಳ್ಳಾರಿ ಬಂಟನ ಭ್ರಷ್ಟ ಚರಿತ್ರೆ ನೋಡಿಯೂ ತಪ್ಪು ಮಾಡಿದ್ರಾ ಸಿದ್ದು..?'ನಾಗ'ಕೋಟೆಯಲ್ಲೇ ಬಂಧಿಯಾದ ನಾಗೇಂದ್ರ..!
ಅಕ್ರಮ ಹಣ ವರ್ಗಾವಣೆ ಬಗ್ಗೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿದ್ದರಿಂದ ಸಹಜವಾಗಿ ಪ್ರಕರಣದಲ್ಲಿ ಯಾರ್‍ಯಾರು ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದಲೇ ಬೆಳಕಿಗೆ ಬರಬೇಕಿದೆ. ಜು.11ರಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಎಂಬುವರಿಂದ ಎಫ್‌ಐಆರ್ ದಾಖಲಿಸಿದ ನಂತರದಲ್ಲಿ, ಬಾಗಲಕೋಟೆ ಐಡಿಬಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಯಬೇಕಿದೆ.
2021ರಿಂದ 2024 ಫೆಬ್ರುವರಿ ನಡುವೆ ಹಣ ವರ್ಗ
28.10.2021ರಿಂದ 22.2.2024ರವರೆಗಿನ ನಡುವೆ ವಂಚನೆಯಾಗಿದ್ದು, ಡಿಸಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರ ಹೆಸರಲ್ಲಿ ಐಡಿಬಿಐ ಬ್ಯಾಂಕ್‌ನಲ್ಲಿ ಖಾತೆ ಇವೆ. ಖಾತೆ ತೆರೆದು ಮೂರು ಅಕೌಂಟ್ ನಂಬರ್‌ನಿಂದ ವಿವಿಧ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಯಾವ ಖಾತೆಗೆ ಎಷ್ಟು ಹಣ ವರ್ಗ?:
ಐಡಿಬಿಐ ಬ್ಯಾಂಕ್ ಖಾತೆ ನಂಬರ್ 1071104000160063 ಖಾತೆ ಮೂಲಕ 28.10.2021 ರಿಂದ 22.02.2024ರ ವರೆಗೆ ಒಟ್ಟು ₹1,35,96,500 ಖಾತೆ ನಂ 1071104000165228 ಮೂಲಕ 4.5.2022 ರಿಂದ 7.11.2022ವರೆಗೆ ₹1,01,33,750, ಮೂರನೇ ಖಾತೆ 1071104000165501 ಖಾತೆ ಮೂಲಕ 11.10.2022 ರಂದು ₹10,43,749 ಒಟ್ಟು ಹೀಗೆ ₹2,47,73,999 28.10.2021 ರಿಂದ 22.2.2024 ರವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗಿದೆ.
ಸರ್ಕಾರಕ್ಕೆ ಮೋಸ ಎಂದು ಪ್ರಕರಣ:
ಪ್ರವಾಸೋದ್ಯಮ ಇಲಾಖೆ ಅನುಮತಿಯಿಲ್ಲದೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದ ಹಣವನ್ನು ಆರೋಪಿತರು ತಮಗೆ ಬೇಕಾದ ರೀತಿಯಲ್ಲಿ ವರ್ಗಾವಣೆ ಮಾಡಿದ್ದಾರೆ. ಇಲಾಖೆ ಹಣ ತೆಗೆದುಕೊಂಡು ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಐಪಿಸಿ 1860(403,406,409,420) ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?:
ಪ್ರವಾಸೋದ್ಯಮದ ಇಲಾಖೆಯ ಅಧಿಕಾರಿಯೊಬ್ಬರು ಐಡಿಬಿಐ ಬ್ಯಾಂಕ್‌ಗೆ ಹೋಗಿ ಸ್ಟೇಟ್ ತಂದಾಗ ₹1.63 ಕೋಟಿ ಹಣ ಇತ್ತು. ನಂತರ ಬಂದು ಪರಿಶೀಲನೆ ಮಾಡಿದಾಗ ಹಣ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ನಂತರ ಬ್ಯಾಂಕ್‌ಗೆ ಹೋಗಿ ಸ್ಟೇಟ್‌ಮೆಂಟ್ ತೆಗೆಸಿದಾಗ ಬ್ಯಾಂಕ್ ಅಕೌಂಟ್‌ನಲ್ಲಿ ಕೇವಲ ₹2,915 ಇರುವುದು ಮಾತ್ರ ಪತ್ತೆಯಾಗಿದೆ
ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆಯಲ್ಲಿ ಸಭೆ ಮಾಡಲಾಗಿದೆ. ಬ್ಯಾಂಕ್ ಅಧಿಕಾರಿಗಳನ್ನು ಕರೆದು ಮಾತನಾಡಿದ್ದು ತನಿಖೆಯ ನಂತರದಲ್ಲಿ ಎಲ್ಲವೂ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ ತಿಳಿಸಿದ್ದಾರೆ.
ವಾಲ್ಮೀಕಿ ನಿಗಮದಲ್ಲಿ ಬಹುಕೋಟಿ ಹಗರಣ: ನಾಗೇಂದ್ರ ಬಂಧನ ಬಳಿಕ ಬಸನಗೌಡ ದದ್ದಲ್ ನಾಪತ್ತೆ!
ಕಳೆದ ಎರಡ್ಮೂರು ದಿನಗಳ ಹಿಂದೆಯಷ್ಟೇ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸಂಬಂಧ ಪ್ರವಾಸೋದ್ಯಮ ಅಧಿಕಾರಿ ಮತ್ತು ಐಡಿಬಿಐ ಬ್ಯಾಂಕ್ ಸಿಬ್ಬಂದಿ ಜೊತೆ ಚರ್ಚಿಸಿದ್ದೇವೆ. ಹಣ ಯಾವ ಖಾತೆಗೆ ವರ್ಗಾವಣೆ ಆಗಿದೆ ಎನ್ನುವುದನ್ನು ಕೇಳಿದ್ದೇವೆ. ಪ್ರವಾಸೋದ್ಯಮ ಅಧಿಕಾರಿಗಳು ಸಹ ನಿರಂತರ ಅಕೌಂಟ್ ಚೆಕ್ ಮಾಡಬೇಕಿತ್ತು. ಆದರೆ, ಮಾಡಿಲ್ಲ, ಈ ಬಗ್ಗೆ ವಿಚಾರಿಸುತ್ತಿದ್ದೇವೆ. ೨೦೨೧ರಿಂದ ೨೪ರವರೆಗೆ ಆಗಿರುವ ವರ್ಗಾವಣೆ ಬಗ್ಗೆ ಮಾಹಿತಿ ಪಡೆಯಲು ಹೇಳಿದ್ದೇವೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದ್ದಾರೆ.
ಹಗರಣದಲ್ಲಿ ಯಾರೇ ಭಾಗಿಯಾಗಿದ್ರೂ ಶಿಕ್ಷೆ
ಪ್ರವಾಸೋ ದ್ಯಮ ಇಲಾಖೆಯ 2.47 ಹಣ ಅಕ್ರಮ ವಾಗಿ ವರ್ಗಾ ವಣೆಯಾ ಗಿರುವ ಕುರಿತು ಈಗಾಗಲೇ ದೂರು ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.