*  ಜಿಎಸ್‌ಟಿ ಪರಿಹಾರ ಮುಂದುವರೆಸಿ*  ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರವಾದ ಪಕ್ಷ*  ಸಾಂಸ್ಕೃತಿಕ ದೌರ್ಜನ್ಯಗಳು, ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ಪಕ್ಷ ಹೋರಾಟ 

ಬೆಂಗಳೂರು(ಜೂ.04): ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಖಾಸಗಿ ಕ್ಷೇತ್ರದಲ್ಲಿ ಕೂಡ ಮೀಸಲಾತಿ ತರಲು ಬದ್ಧವಾಗಿದೆ. ಪರಿಶಿಷ್ಟಜಾತಿ, ಪಂಗಡ ಮತ್ತು ಹಿಂದುಳಿದ ಜಾತಿಗಳ ಬ್ಯಾಕ್‌ಲಾಗ್‌ ಹುದ್ದೆಗಳ ಭರ್ತಿ ಮತ್ತು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಜಾರಿಗೆ ತರುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರವಾದ ಪಕ್ಷ. ಎಐಸಿಸಿ ಈಗಾಗಲೇ ಅದನ್ನು ಸ್ಪಷ್ಟಪಡಿಸಿದೆ. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಇರುವಂತೆ ಖಾಸಗಿ ಕ್ಷೇತ್ರಗಳಲ್ಲೂ ಮೀಸಲಾತಿ ಜಾರಿಗೊಳಿಸುತ್ತೇವೆ. ಜೊತೆಗೆ ಹೊರಗುತ್ತಿಗೆ ಹುದ್ದೆಗಳ ಭರ್ತಿಯಲ್ಲೂ ಮೀಸಲಾತಿ ಜಾರಿಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

ಸಾಂಸ್ಕೃತಿಕ ದೌರ್ಜನ್ಯಗಳು, ಸಾಂಸ್ಕೃತಿಕ ಭಯೋತ್ಪಾದನೆ ವಿರುದ್ಧ ಪಕ್ಷ ಹೋರಾಟ ಮಾಡಲಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವುದನ್ನು ನಾವು ಖಂಡಿಸುತ್ತೇವೆ. ಆ ಸಮುದಾಯದ ಜನರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ಸರ್ವರಿಗೂ ರಕ್ಷಣೆ ಕೊಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದ ಅವರು, ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ, ಅಡುಗೆ ಎಣ್ಣೆ, ಸಿಮೆಂಟ್‌, ಕಬ್ಬಿಣ, ಗೊಬ್ಬರದ ಬೆಲೆ ಮಿತಿಮೀರಿದೆ. ಇದರಿಂದ ಜನಜೀವನ ಹಾಳಾಗಿದೆ. ನಾವು ಅಧಿಕಾರಕ್ಕೆ ಬಂದ ನಂತರ ಬೆಲೆ ನಿಯಂತ್ರಣ ಕೆಲಸವನ್ನು ಮಾಡುತ್ತೇವೆ. ಪ್ರಸ್ತುತ ಇರುವ ಸರ್ಕಾರದ ಮೇಲೂ ಬೆಲೆ ನಿಯಂತ್ರಿಸುವಂತೆ ಒತ್ತಡ ಹಾಕುತ್ತೇವೆ. ಇದರ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತೇವೆ ಎಂದರು.

ಮಸೀದಿ ಜಾಗದಲ್ಲಿ ದೇವಸ್ಥಾನ ನಿರ್ಮಿಸಿದ್ದರೆ ಸಿದ್ದರಾಮಯ್ಯ ಏನಂತಿದ್ದರು?: ಸಚಿವ ಕೋಟಾ ಪ್ರಶ್ನೆ

ಜಿಎಸ್‌ಟಿ ಪರಿಹಾರ ಮುಂದುವರೆಸಿ:

ಜಿಎಸ್‌ಟಿ ಪರಿಹಾರ ಈ ತಿಂಗಳ ಅಂತ್ಯಕ್ಕೆ (ಜೂನ್‌ 30) ಮುಕ್ತಾಯವಾಗಲಿದೆ. ಅದನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಣೆ ಮಾಡಬೇಕು. ಪ್ರತಿ ವರ್ಷ ಸುಮಾರು 19 ಸಾವಿರ ಕೋಟಿ ರು.ಜಿಎಸ್‌ಟಿ ಪರಿಹಾರವಾಗಿ ರಾಜ್ಯಕ್ಕೆ ಬರುತ್ತಿತ್ತು. ಆದರೆ ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಆಗಲಿ ಅಥವಾ ಮೌಖಿಕವಾಗಿ ಕೂಡ ಮುಂದುವರೆಸುವ ಬಗ್ಗೆ ಹೇಳಿಲ್ಲ. ಜಿಎಸ್‌ಟಿ ಬರುವುದಕ್ಕೂ ಮೊದಲು ನಮ್ಮ ಆದಾಯ ಬೆಳವಣಿಗೆ ದರ ಶೇ.14 ಇತ್ತು, ಜಿಎಸ್‌ಟಿ ಜಾರಿಯಾಗಿ 5 ವರ್ಷದ ನಂತರ ನಮ್ಮ ಆದಾಯ ಬೆಳವಣಿಗೆ ದರ ಶೇ.6ಕ್ಕೆ ಇಳಿದಿದೆ. ಇದರಿಂದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ಜಿಎಸ್‌ಟಿ ಕೌನ್ಸಿಲ್‌ ನಲ್ಲಿ ಒತ್ತಡ ಹಾಕಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜು ಖರ್ಗೆ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಮಾಜಿ ಸಚಿವ ಡಾ.ಜಿ.ಪರಮೇಶ್ವರ್‌, ರಾಜ್ಯಸಭೆ ಮಾಜಿ ಸದಸ್ಯ ರೆಹಮಾನ್‌ಖಾನ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.