Karnataka Politics: ದೇವೇಗೌಡ ಬಿಟ್ಟ ದಾಳದಿಂದ ಸಿದ್ದು, ಡಿಕೆಶಿ ದಿಢೀರ್‌ ಒಗ್ಗಟ್ಟು!

*   ಖರ್ಗೆಗೆ ಸಿಎಂ ಆಸೆ ತೋರಿಸಿದ ಗೌಡ
*   ದಿಲ್ಲಿಗೆ ಹಾರಿದ ಖರ್ಗೆ
*   ಮೂರನೇ ಶಕ್ತಿ ಉದಯ ಭೀತಿ
 

Solidarity Between Siddaramaiah and DK Shivakumar After HD Devegowda Statement grg

ಬೆಂಗಳೂರು(ಜೂ.03): ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲುವಿಗಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಉರುಳಿಸಿದ ‘ಖರ್ಗೆ ದಾಳ’ವು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನಡುವೆ ಮೈತ್ರಿ ಮೂಡಿಸಿದೆ. ಇದು ಕಾಂಗ್ರೆಸ್‌ನಲ್ಲಿ ಭಾರಿ ಸಂಚಲನ ಹುಟ್ಟುಹಾಕಿದೆ.

ದೇವನಹಳ್ಳಿ ಸಮೀಪ ನವ ಸಂಕಲ್ಪ ಸಭೆಯ ವೇಳೆ ಉಭಯ ನಾಯಕರು ಸುಮಾರು 20 ನಿಮಿಷ ನೇರಾನೇರ ಮಾತುಕತೆ ನಡೆಸಿದರು. ಅನಂತರ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ ಎರಡನೇ ಅಭ್ಯರ್ಥಿ ಕಣದಲ್ಲಿ ಉಳಿಯಬೇಕು ಎಂಬುದು ತಮ್ಮಿಬ್ಬರ ಒಗ್ಗಟ್ಟಿನ ನಿಲುವು ಎಂದು ಸ್ಪಷ್ಟಪಡಿಸಿದರು. ಆದರೆ, ಈ ಮಾತುಕತೆ ಕೇವಲ ರಾಜ್ಯಸಭೆ ಚುನಾವಣೆ ಮಟ್ಟಿಗೆ ಸೀಮಿತವಾಗಿಲ್ಲ. ತಮ್ಮಿಬ್ಬರ ಭಿನ್ನಾಭಿಪ್ರಾಯದ ಪರಿಣಾಮವಾಗಿ ಮೂರನೇ ಶಕ್ತಿ ರಾಜ್ಯ ಕಾಂಗ್ರೆಸ್‌ ರಾಜಕಾರಣದೊಳಗೆ ನುಸುಳಲು ಅವಕಾಶ ಸಿಗುವಂತೆ ಆಗಬಾರದು ಎಂಬುದು ಮಾತುಕತೆಯ ಮೂಲ ಉದ್ದೇಶವಾಗಿತ್ತು.

Rajya Sabha Elections: ಕೈ 2ನೇ ಅಭ್ಯರ್ಥಿ ವಾಪಸಿಗೆ ಖರ್ಗೆ ಮೂಲಕ ದೇವೇಗೌಡ ಯತ್ನ

ಇದಕ್ಕಾಗಿ, ಇದುವರೆಗಿನ ಭಿನ್ನಾಭಿಪ್ರಾಯಗಳನ್ನು ಒತ್ತಟ್ಟಿಗೆ ಇಟ್ಟು ಒಗ್ಗೂಡಿದ್ದೇವೆ ಎಂಬ ಸಂದೇಶವನ್ನು ಹೈಕಮಾಂಡ್‌ ಮತ್ತು ನಾಡಿನ ಜನತೆಗೂ ರವಾನಿಸಬೇಕು. ಅಲ್ಲದೆ, ಈ ನಿಲುವಿನ ಬಗ್ಗೆ ಹೈಕಮಾಂಡ್‌ಗೆ ಸ್ಪಷ್ಟತೆ ನೀಡಲು ಶೀಘ್ರವೇ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಏನಿದು ದೇವೇಗೌಡರ ದಾಳ?:

ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಯುವಂತೆ ಮಾಡಿದ ಸಿದ್ದರಾಮಯ್ಯ ಅವರು ಜೆಡಿಎಸ್‌ ಅಭ್ಯರ್ಥಿಗೆ ಗೆಲುವಿನ ಅವಕಾಶವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದರು. ಇದರಿಂದಾಗಿ ವರಿಷ್ಠ ದೇವೇಗೌಡರು ತಮ್ಮ ಅಭ್ಯರ್ಥಿ ಉಳಿವಿಗಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ನಲ್ಲಿ ಹೊಂದಿರುವ ಪ್ರಭಾವ ಬಳಕೆ ಮಾಡಲು ಮುಂದಾದರು ಎನ್ನಲಾಗಿದೆ.

ಆರೆಸ್ಸೆಸ್‌ ಕಂಡರೆ ಎಲ್ಲರಿಗೂ ಭಯ: ಸದಾನಂದಗೌಡ ಮಾತಿಗೆ ಸಿದ್ದು ತಿರುಗೇಟು!

ಮೂಲಗಳ ಪ್ರಕಾರ, ದೇವೇಗೌಡ ಅವರೇ ನೇರವಾಗಿ ಖರ್ಗೆ ಅವರನ್ನು ಸಂಪರ್ಕಿಸಿ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಕಣದಿಂದ ಹಿಂದಕ್ಕೆ ಸರಿಯುವಂತೆ ಹಾಗೂ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಹೈಕಮಾಂಡ್‌ ಮನವೊಲಿಸಲು ಮನವಿ ಮಾಡಿದ್ದಾರೆ. ಈ ಮಾತುಕತೆ ವೇಳೆ ದೇವೇಗೌಡರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಖರ್ಗೆ ಅವರು ವಂಚಿತರಾದ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜತೆಗೆ, ಮುಂಬರುವ ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರವಾಗುವ ಸಾಧ್ಯತೆಯೇ ಹೆಚ್ಚು. ಹೀಗೇನಾದರೂ ಆದಲ್ಲಿ ಕಾಂಗ್ರೆಸ್‌ಗೆ ನಿಮ್ಮ ಪರವಾಗಿ ಬೆಂಬಲ ನೀಡಲು ಜೆಡಿಎಸ್‌ ಸದಾ ಸಿದ್ಧವಾಗಿರುತ್ತದೆ ಎಂದು ನೇರ ಭರವಸೆಯನ್ನು ನೀಡಿದರು ಎನ್ನಲಾಗಿದೆ.

ಇದರ ಪರಿಣಾಮವೋ ಏನೋ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್‌ ಭೇಟಿಗೆ ದೆಹಲಿಗೆ ತೆರಳಿ, ಕುಪೇಂದ್ರ ರೆಡ್ಡಿ ಪರವಾಗಿ ಹೈಕಮಾಂಡ್‌ ಜತೆ ಮಾತುಕತೆ ನಡೆಸಿದರು ಎನ್ನಲಾಗಿದೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಚ್ಚೆತ್ತ ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಬಣದ ನಾಯಕರು ತಮ್ಮ ನಾಯಕರಿಗೆ ಬೆನ್ನು ಬಿದ್ದು ಇಬ್ಬರು ಪರಸ್ಪರ ನೇರಾನೇರ ಮಾತನಾಡುವಂತೆ ಮನವೊಲಿಸಿದ್ದಾರೆ. ಇದರ ಫಲವಾಗಿಯೇ ಗುರುವಾರ ನವ ಚೈತನ್ಯ ಸಭೆಯ ವೇಳೆ ಉಭಯ ನಾಯಕರು ಮಾತುಕತೆ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಒಗ್ಗೂಡೋಣ. ಜತೆಗೆ, ನಮ್ಮಿಬ್ಬರ ಭಿನ್ನಮತದ ಲಾಭವನ್ನು ಪಡೆಯಲು ಯಾವುದೇ ಮೂರನೇ ವ್ಯಕ್ತಿಗೆ ಅವಕಾಶ ನೀಡುವುದು ಬೇಡ ಎಂದು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios