ಚೀನಾದ ಬೀಜಿಂಗ್‌ನಂತೆ ಬಳ್ಳಾರಿ ಮಿಂಚುವಂತೆ ಮಾಡುವ ಕನಸಿದೆ: ಜನಾರ್ದನ ರೆಡ್ಡಿ
ಹೊಸಪೇಟೆ, ಬಳ್ಳಾರಿ, ಸಂಡೂರು ವ್ಯಾಪ್ತಿಯ 530 ಚ.ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕೆಗಳು, ತರಬೇತಿ ಕೇಂದ್ರಗಳು, ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಚೀನಾದ ಬೀಜಿಂಗ್‌ನಂತೆ ಭಾರತದಲ್ಲಿ ಬಳ್ಳಾರಿಯನ್ನು ಮಿಂಚುವಂತೆ ಮಾಡುವ ಕನಸಿದೆ ಎಂದು ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ತಿಳಿಸಿದರು.
ಕೂಡ್ಲಿಗಿ (ಅ.7): ಹೊಸಪೇಟೆ, ಬಳ್ಳಾರಿ, ಸಂಡೂರು ವ್ಯಾಪ್ತಿಯ 530 ಚ.ಕಿ.ಮೀ. ವ್ಯಾಪ್ತಿಯಲ್ಲಿ ಕೈಗಾರಿಕೆಗಳು, ತರಬೇತಿ ಕೇಂದ್ರಗಳು, ಉತ್ತಮ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಚೀನಾದ ಬೀಜಿಂಗ್‌ನಂತೆ ಭಾರತದಲ್ಲಿ ಬಳ್ಳಾರಿಯನ್ನು ಮಿಂಚುವಂತೆ ಮಾಡುವ ಕನಸಿದೆ ಎಂದು ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ತಿಳಿಸಿದರು.
ಹಲವು ವರ್ಷಗಳ ನಂತರ ಮೊದಲ ಬಾರಿಗೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಿದ ಶಾಸಕ ಜನಾರ್ದನ ರೆಡ್ಡಿ, ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ನಿವಾಸದಲ್ಲಿ ಶುಕ್ರವಾರ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದರು.
ನನ್ನನ್ನು ಸುಳ್ಳು ಕೇಸುಗಳಿಂದ ಬಂಧಿಸಿ, ನೋವು ನೀಡಲಾಯಿತು. 2004ರ ಲೋಕಸಭಾ ಚುನಾವಣೆಯಲ್ಲಿ ಕರುಣಾಕರ ರೆಡ್ಡಿ ಸ್ಪರ್ಧಿಸಿದ್ದಾಗ ಕೂಡ್ಲಿಗಿ ಕ್ಷೇತ್ರದ ಜನತೆ ತೋರಿದ ಪ್ರೀತಿಯನ್ನು ಮರೆಯುವುದಿಲ್ಲ. ಕೂಡ್ಲಿಗಿ ತಾಲೂಕು ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಗೆ ಬಾರದಂತೆ ಮಾಡಿರುವ ನೋವನ್ನು ತೀರಿಸಿಕೊಳ್ಳಬೇಕಿದೆ. ಇನ್ಮುಂದೆ ನಿಮ್ಮ ಸೇವೆಗೆ ಸದಾ ಸಿದ್ಧ. ಹಾಗಾಗಿ, 2028ರ ಚುನಾವಣೆಯಲ್ಲಿ ಕೂಡ್ಲಿಗಿ ಸೇರಿ ಎಲ್ಲೆಲ್ಲೂ ಬಿಜೆಪಿಯನ್ನು ಗೆಲ್ಲಿಸುವಂತಾಗಬೇಕು ಎಂದು ತಿಳಿಸಿದರು.
ಮಾನ-ಮಾರ್ಯಾದೆ ನೀಚ ರಾಜಕಾರಣ ಎಂದೆಲ್ಲ ಮಾತನಾಡುವ ಸಿದ್ದರಾಮಯ್ಯ ಅವೆಲ್ಲವನ್ನೂ ಮೀರಿದ್ದಾರೆ: ಜನಾರ್ದನ ರೆಡ್ಡಿ ಕಿಡಿ
ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಜನಾರ್ದನ ರೆಡ್ಡಿ ಕೃಪಾಶೀರ್ವಾದದಿಂದ ನಾನು ಸೇರಿದಂತೆ ಸಾಕಷ್ಟು ಯುವಕರು ರಾಜಕೀಯವಾಗಿ ಬೆಳೆದಿದ್ದೇವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿದೆ. ಆದರೆ, ಜನಾರ್ದನ ರೆಡ್ಡಿ ಮಾಡದ ತಪ್ಪಿಗೆ ವನವಾಸ ಅನುಭವಿಸುಂತಾಯಿತು. ಬಳ್ಳಾರಿ ಜಿಲ್ಲೆಗೆ ಜಿ.ಜನಾರ್ದನ ರೆಡ್ಡಿ ಆಗಮಿಸದಂತೆ ಹೇಗೆ ಪಿತೂರು ಮಾಡಿದರೋ ಹಾಗೆಯೇ ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಗೆ ಕಾಲಿಡದಂಥ ಪರಿಸ್ಥಿತಿಯೂ ಬರಲಿದೆ ಎಂದು ಭವಿಷ್ಯ ನುಡಿದರು.
ಬಳ್ಳಾರಿ ಮಾಜಿ ಸಂಸದ ವೈ.ದೇವೇಂದ್ರಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕೆ.ನಾಗರಾಜ, ಮುಖಂಡರಾದ ರಾಮದುರ್ಗ ಸೂರ್ಯಪಾಪಣ್ಣ, ಹುರುಳಿಹಾಳು ಎಚ್.ರೇವಣ್ಣ, ರಜನಿಕಾಂತ್, ಪವಿತ್ರಾ, ಎಂ.ಬಿ. ಅಯ್ಯನಹಳ್ಳಿ ನಾಗಭೂಷಣ, ಕೆ.ಎಸ್. ದಿವಾಕರ, ಕೆ.ಚನ್ನಪ್ಪ, ಉಜ್ಜಿನಿ ಲೋಕಪ್ಪ, ಭರಮನಗೌಡ, ಜಿ.ಟಿ. ಪಂಪಣ್ಣ ಸೇರಿ ಇತರರಿದ್ದರು.
ವಾಲ್ಮೀಕಿ ನಿಗಮ ಹಗರಣ: ಪ್ರಕರಣದಲ್ಲಿ ನಾಗೇಂದ್ರನ ಬಲಿಪಶು ಮಾಡಲಾಗಿದೆ: ಜನಾರ್ದನ ರೆಡ್ಡಿ ವಾಗ್ದಾಳಿ
ಇದಕ್ಕೂ ಮುನ್ನ ಪಟ್ಟಣದ ಕೊತ್ತಲ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಶಾಸಕ ಜನಾರ್ದನ ರೆಡ್ಡಿ, ಬಿಜೆಪಿ ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸೇರಿ ಅಪಾರ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಕೂಡ್ಲಿಗಿ ಪಟ್ಟಣದಲ್ಲಿ ಶುಕ್ರವಾರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಗಂಗಾವತಿ ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಎಸ್.ಟಿ.ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಸ್ವಾಗತಿಸಿದರು