Asianet Suvarna News Asianet Suvarna News

ಮಾನ-ಮಾರ್ಯಾದೆ ನೀಚ ರಾಜಕಾರಣ ಎಂದೆಲ್ಲ ಮಾತನಾಡುವ ಸಿದ್ದರಾಮಯ್ಯ ಅವೆಲ್ಲವನ್ನೂ ಮೀರಿದ್ದಾರೆ: ಜನಾರ್ದನ ರೆಡ್ಡಿ ಕಿಡಿ

ಬಳ್ಳಾರಿಯ ಜನರ ಶಾಪದಿಂದ ಸಿಎಂ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆಯಾದರೆ ಸಿದ್ದರಾಮಯ್ಯ ಮಾಡಿರುವ ಹಗರಣ ಹೊರ ಬರುತ್ತದೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Gangavathi bjp mla janardana reddy outraged against cm siddaramaiah rav
Author
First Published Oct 4, 2024, 11:32 AM IST | Last Updated Oct 4, 2024, 12:11 PM IST

ಬಳ್ಳಾರಿ (ಅ.4): ಬಳ್ಳಾರಿಯ ಜನರ ಶಾಪದಿಂದ ಸಿಎಂ ಸಿದ್ದರಾಮಯ್ಯ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆಯಾದರೆ ಸಿದ್ದರಾಮಯ್ಯ ಮಾಡಿರುವ ಹಗರಣ ಹೊರ ಬರುತ್ತದೆ ಎಂದು ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಸುಪ್ರೀಂ ಕೋರ್ಟ್‌ ಅನುಮತಿ ಮೇರೆಗೆ ಬರೋಬ್ಬರಿ 13 ವರ್ಷಗಳ ಬಳಿಕ ಮುಕ್ತವಾಗಿ ಬಳ್ಳಾರಿಗೆ ಆಗಮಿಸಿದ ಜನಾರ್ದನ ರೆಡ್ಡಿಗೆ ಅಭಿಮಾನಿಗಳು ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಸಿದ್ದರಾಮಯ್ಯ ನಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ನನ್ನನ್ನು ಖಳನಾಯಕನಂತೆ ಬಿಂಬಿಸಿದರು. ಬಳ್ಳಾರಿ ಅಭಿವೃದ್ಧಿಯ ಕನಸು ಕಂಡಿದ್ದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದರು. ಈಗ ಅವರೇ ಅನುಭವಿಸುತ್ತಿದ್ದಾರೆ. ಅವರಂತೆ ನಾನು ಮಾತನಾಡುವುದಿಲ್ಲ. ಕೆಟ್ಟ ಭಾಷೆಯನ್ನು ಬಳಸುವುದಿಲ್ಲ. ಆದರೆ, ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ ಎಂಬ ನಂಬಿಕೆ ನನ್ನದು ಎಂದರು.

ಹೆಚ್‌ಡಿ ಕುಮಾರಸ್ವಾಮಿ, ಆರ್ ಅಶೋಕ್ ಇಬ್ಬರೂ ಹುಚ್ಚರು: ಎನ್‌ಎಸ್ ಬೋಸರಾಜು ಕಿಡಿ

ವಾಲ್ಮೀಕಿ ನಿಗಮದ ಹಗರಣ ನಾಗೇಂದ್ರ ಒಬ್ಬರೇ ಮಾಡಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷವೇ ಇದೆ. ಬಳ್ಳಾರಿ ಲೋಕಸಭಾ ಚುನಾವಣೆ ಹಾಗೂ ತೆಲಂಗಾಣ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ. ಹೀಗಾಗಿ ತುಕಾರಾಂ ಸಂಸದ ಸ್ಥಾನಕ್ಕೆ ಅನರ್ಹರಾಗುವುದು ಖಚಿತ ಎಂದು ತಿಳಿಸಿದರು. ಜನಾರ್ದನ ರೆಡ್ಡಿ ಲಕ್ಷ ಕೋಟಿ ಅವ್ಯವಹಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸುತ್ತಿದ್ದರು. ನಾನು ಒಂದೇ ಒಂದು ರುಪಾಯಿ ಅವ್ಯವಹಾರ ಮಾಡಿಲ್ಲ. ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಲಾಗಲಿಲ್ಲ. ವಿನಾಕಾರಣ ನನ್ನ ವಿರುದ್ಧ ಆರೋಪ ಮಾಡುತ್ತಿದ್ದ ಸಿದ್ದರಾಮಯ್ಯ ಅವರೇ ಮುಡಾ ಹಗರಣದಲ್ಲಿ ಸಿಲುಕಿದ್ದಾರೆ. ಬೇನಾಮಿಯಾಗಿ ಐದು ಸಾವಿರ ಕೋಟಿ ರುಪಾಯಿ ಮೌಲ್ಯದ ಭೂಮಿ ಕೊಳ್ಳೆ ಹೊಡೆದಿದ್ದಾರೆ. ಈ ಎಲ್ಲವೂ ತನಿಖೆಯಾಗಬೇಕು. ಯಡಿಯೂರಪ್ಪ ವಿರುದ್ಧ ಆರೋಪ ಬಂದಾಗ ಎಲ್‌.ಕೆ. ಅಡ್ವಾಣಿ ಮಾಡಿದ ಒಂದು ದೂರವಾಣಿ ಕರೆಗೆ ಯಡಿಯೂರಪ್ಪ ರಾಜೀನಾಮೆ ನೀಡಿದರು. ಮಾನ, ಮರ್ಯಾದೆ, ನೀಚ ರಾಜಕಾರಣ ಎಂದೆಲ್ಲ ಮಾತನಾಡುವ ಸಿದ್ದರಾಮಯ್ಯ ಈ ಎಲ್ಲವನ್ನೂ ಮೀರಿದ್ದಾರೆ. ರಾಜೀನಾಮೆ ನೀಡದೇ ಭಂಡತನ ಪ್ರದರ್ಶಿಸುತ್ತಿದ್ದಾರೆ ಎಂದು ಜನಾರ್ದನ ರೆಡ್ಡಿ ಟೀಕಿಸಿದರು.

ಬಳ್ಳಾರಿಯಲ್ಲಿ ಬಿಜೆಪಿ ಮತ್ತೆ ಹಳೆಯ ವೈಭವ ಪಡೆದುಕೊಳ್ಳಲಿದೆ. ಪಕ್ಷದ ಗ್ರಾಪಂ ಸದಸ್ಯರೂ ಇಲ್ಲದ ವೇಳೆ ಜಿಲ್ಲೆಯಲ್ಲಿ ಕಮಲ ಅರಳಿಸಿದ್ದೇನೆ. ಮತ್ತೆ ಪಕ್ಷವನ್ನು ಸಂಘಟಿಸುತ್ತೇನೆ ಎಂದರು.
ಸಂಡೂರು ಉಪ ಚುನಾವಣೆಯಲ್ಲಿ ಯಾರು ಅಭ್ಯರ್ಥಿ ಎಂಬುದು ಮುಖ್ಯವಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.

ಜನಾರ್ದನ ರೆಡ್ಡಿ ಸ್ವಾಗತಕ್ಕೆ ಗೆಳೆಯ ಶ್ರೀರಾಮುಲು ಹಾಗೂ ಸಹೋದರ ಸೋಮಶೇಖರ ರೆಡ್ಡಿ ಬಾರದಿರುವ ಕುರಿತು ಕೇಳಿದ ಪ್ರಶ್ನೆಗೆ, "ಗೆಳೆಯ, ಸಹೋದರ ಆರೋಗ್ಯ ಸಮಸ್ಯೆಯಿಂದಾಗಿ ಬಂದಿಲ್ಲ. ನನ್ನ ಸಹೋದರ ನಡುವೆ ಯಾವುದೇ ಮುನಿಸಿಲ್ಲ. ಪಕ್ಷದ ವಿಚಾರ ಬಂದಾಗ ಯಾವುದು ಕೂಡ ಮುಖ್ಯವಾಗುವುದಿಲ್ಲ. ಪಕ್ಷ ಮುಖ್ಯವಾಗುತ್ತದೆ " ಎಂದು ರೆಡ್ಡಿ ಪ್ರತಿಕ್ರಿಯಿಸಿದರು.

ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಅಸ್ತು: ಬಾಸ್ ಈಸ್ ಬ್ಯಾಕ್ ಎಂದ ಫ್ಯಾನ್ಸ್‌

ಜನಾರ್ದನ ರೆಡ್ಡಿಗೆ ಭರ್ಜರಿ ಸ್ವಾಗತ:

ಬಳ್ಳಾರಿಯಲ್ಲೇ ಶಾಶ್ವತವಾಗಿ ಉಳಿಯಲು ಸುಪ್ರೀಂಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ಜನಾರ್ದನ ರೆಡ್ಡಿಯನ್ನು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಬೆಂಬಲಿಗರು ಅದ್ಧೂರಿಯಾಗಿ ಸ್ವಾಗತಿಸಿಕೊಂಡರು. ನಗರದ ಹೊರವಲಯದ ಅಲ್ಲೀಪುರ ಗ್ರಾಮದಿಂದ ಅದ್ಧೂರಿಯಾಗಿ ಮೆರವಣಿಗೆ ಮೂಲಕ ಜನಾರ್ದನ ರೆಡ್ಡಿಯನ್ನು ಕರೆತರಲಾಯಿತು. ಕ್ರೇನ್‌ಗಳ ಮೂಲಕ ಬೃಹತ್ ಹೂವಿನ ಹಾರ, ಅಭಿಮಾನಿಗಳು ಜೈಕಾರ ಹಾಕಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಅಲ್ಲೀಪುರದಿಂದ ಸುಧಾವೃತ್ತ, ರೈಲ್ವೆ ಫಸ್ಟ್‌ಗೇಟ್, ಮೋತಿ ವೃತ್ತ, ಗಡಗಿ ಚನ್ನಪ್ಪ ವೃತ್ತದ ಮೂಲಕ ಶ್ರೀಕನಕ ದುರ್ಗಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆ ವೇಳೆ ಮಾತನಾಡಿದ ಜನಾರ್ದನ ರೆಡ್ಡಿ, ಹುಟ್ಟೂರಿಗೆ ಮರಳಿ ಬಂದಿರುವ ಬಗ್ಗೆ ಖುಷಿಯಿದೆ. ಬಳ್ಳಾರಿ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ. ನನಸಾಗಿಸುವ ದಿಸೆಯಲ್ಲಿ ಪ್ರಯತ್ನಿಸುತ್ತೇನೆ. 13 ವರ್ಷ ಬಳ್ಳಾರಿಯಿಂದ ದೂರ ಉಳಿದು ನೋವು ಅನುಭವಿಸಿದ್ದೇನೆ. ಬಳ್ಳಾರಿ ಅಭಿವೃದ್ಧಿಗೆ ದೇವರೇ ನನ್ನನ್ನು ಕಳಿಸಿಕೊಟ್ಟಿದ್ದಾನೆ ಎಂದರು

Latest Videos
Follow Us:
Download App:
  • android
  • ios