ಖರ್ಗೆಯನ್ನು ಟೀಕಿಸಿಲ್ಲ, ರಾಜಕೀಯ ಉದ್ದೇಶಕ್ಕೆ ನನ್ನ ಮೇಲೆ ಕೇಸ್: ಆರಗ
ಹಿರಿಯರು, ಮುತ್ಸದ್ದಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟುದೊಡ್ಡವನು ನಾನಲ್ಲ. ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ತೀರ್ಥಹಳ್ಳಿ (ಆ.5): ಹಿರಿಯರು, ಮುತ್ಸದ್ದಿಗಳೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕೆ ಮಾಡುವಷ್ಟುದೊಡ್ಡವನು ನಾನಲ್ಲ. ಅವರ ಬಗ್ಗೆ ಅಪಾರವಾದ ಗೌರವ ಭಾವನೆಯೂ ಇದೆ. ಖರ್ಗೆ ಬಗ್ಗೆ ವ್ಯಂಗ್ಯ ಹೇಳಿಕೆ ಧೃಡಪಡಿಸಿದರೆ ಯಾವುದೇ ಶಿಕ್ಷೆ ಅನುಭವಿಸಲು ನಾನು ಸಿದ್ಧ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ(Eshwar khandre)ಯವರ ಬಗ್ಗೆ ಹೇಳುವ ಸಂದರ್ಭದಲ್ಲಿ ಬಾಯ್ತಪ್ಪಿನಿಂದ ಖರ್ಗೆ ಹೆಸರು ಹೇಳಿದ್ದೇನೆಯೇ ಹೊರತು, ಖರ್ಗೆ ಕುರಿತು ಅವಹೇಳನದ ಮಾತುಗಳನ್ನೇ ಆಡಿಲ್ಲ. ಕಾಂಗ್ರೆಸ್ ಮುಖಂಡರು ರಾಜಕಾರಣದ ಸಲುವಾಗಿ ನನ್ನ ಹೇಳಿಕೆ ತಿರುಚಿದ್ದಾರೆ ಎಂದರು. ಡಾ.ಕಸ್ತೂರಿ ರಂಗನ್ ವರದಿ ಪರವಾಗಿ ಅರಣ್ಯ ಸಚಿವರು ಮಾತನಾಡಿದ ಕಾರಣ ಅವರಿಗೆ ಮಲೆನಾಡಿನ ಜನರ ಮತ್ತು ಅರಣ್ಯ ಸಮಸ್ಯೆ ಅರಿವಿಲ್ಲ ಎಂದು ಹೇಳಿದ್ದೇನೆಯೇ ಹೊರತು, ಯಾರ ಜಾತಿ ನಿಂದನೆಯನ್ನೂ ಮಾಡಿಲ್ಲ. ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು ದೂರು ದಾಖಲಿಸಲಾಗಿದೆ. ಇದನ್ನು ಎದುರಿಸುವ ಶಕ್ತಿಯೂ ನನಗಿದೆ ಎಂದು ಹೇಳಿದರು.
ನಾನು ಖಂಡ್ರೆ ಹೇಳುವ ಬದಲು ಖರ್ಗೆ ಹೇಳಿದ್ದೇನೆ: ಅವಹೇಳನಕಾರಿ ಹೇಳಿಕೆಗೆ ಆರಗ ಪ್ರತಿಕ್ರಿಯೆ!
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದಿದ್ದು, ಮುಂಗಡ ಪತ್ರದಲ್ಲಿ ದಲಿತರಿಗೆ ಮೀಸಲಿದ್ದ ಅರ್ಧದಷ್ಟುಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಆದಕಾರಣ ಸಾರಿಗೆ ವಿದ್ಯುತ್ ಮುಂತಾದ ಇಲಾಖೆಗಳ ನೌಕರರಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ತಮ್ಮ ವೈಫಲ್ಯ ಮುಚ್ಚಿ ಜನರ ಗಮನ ಬೇರೆಡೆ ಸೆಳೆಯಲು ಈ ಪ್ರಕರಣವನ್ನು ದೊಡ್ಡದಾಗಿ ಬಿಂಬಿಸಲಾಗುತ್ತಿದೆ ಎಂದು ಟೀಕಿಸಿದರು.
ಆರಗ ಹೇಳಿಕೆ ಅಸಹನೆಯ ಸಂಕೇತ: ಪ್ರಿಯಾಂಕ್ ಖರ್ಗೆ
ಕಲಬುರಗಿ: ಖರ್ಗೆಯವರ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವ ಪ್ರಿಯಾಂಕ್ ಖರ್ಗೆ ಇದು ಕೇಶವ ಕೃಪಾದ ಹೇಳಿಕೆ, ಆರೆಸ್ಸೆಸ್ ಹೇಳಿಕೆ, ದಲಿತರ ಮೇಲಿನ ಬಿಜೆಪಿ ಅಸಹನೆಯ ಸಂಕೇತ ಎಂದು ವ್ಯಾಖ್ಯಾನಿಸಿದ್ದಾರೆ. ಖರ್ಗೆ ಶೋಷಿತ ಸಮೂಹದಿಂದ ಮೇಲೆದ್ದು ಬಂದು ರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತವರು. ಶೋಷಿತರು ಹೀಗೆ ಬೆಳೆಯೋದು ಇವರಿಗೆ ಸಹಿಸಲು ಆಗುವುದಿಲ್ಲ. ಹೀಗಾಗಿ ಸಲ್ಲದ ಹೇಳಿಕೆ ಕೊಟ್ಟು ಕಿಚಾಯಿಸುತ್ತಾರೆ. ಇಂಥ ಹೇಳಿಕೆಗೆ ಜನರೇ ಉತ್ತರಿಸುತ್ತಾರೆ ಎಂದರು. ಆರಗ ಜ್ಞಾನೇಂದ್ರ ಬಗ್ಗೆ ತಮಗೆ ಅಪಾರ ಗೌರವ ಇತ್ತು. ಆದರೆ ಈ ರೀತಿ ವರ್ಣ, ವರ್ಗ ಭೇದದೊಂದಿಗೆ ಅವರು ಆಡಿರುವ ಮಾತುಗಳಿಂದಾಗಿ ಅವರ ಮೇಲಿನ ಗೌರವ ಕಡಿಮೆಯಾಗಿದೆ ಎಂದರು. ಬಿಜೆಪಿಯ ಈ ಅಸಹನೆ ಬಹಳ ದಿನ ಉಳಿಯುವುದಿಲ್ಲ. ಆರಗ ಅವರ ಕ್ಷಮೆ ನಮಗೆ ಬೇಕಿಲ್ಲ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನು ಪ್ರಕಾರ ಅದು ಮುಂದುವರೆಯಲಿದೆ ಎಂದರು.
ಆರಗ ಜ್ಞಾನೇಂದ್ರ ಸಭ್ಯಸ್ಥರಂತೆ ಮುಖವಾಡ ಧರಿಸಿರುವ ಗೋಮುಖ ವ್ಯಕ್ತಿ: ಶಾಸಕ ತಮ್ಮಯ್ಯ
ಬಿಜೆಪಿ ಕರುನಾಡ ದ್ವೇಷಿ: ಬಿಜೆಪಿಯನ್ನು ಕರುನಾಡು ದ್ವೇಷಿ ಎಂದು ಟೀಕಿಸಿದ ಪ್ರಿಯಾಂಕ್ ಖರ್ಗೆ, ಸಚಿವರು ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿ ಆಗಿ ಬಂದರೆ ತಪ್ಪೇನು? ಇದು ಹೇಗೆ ಕರುನಾಡಿನ ಜನತೆಗೆ ನಾವು ಮಾಡುವ ಅಗೌರವವಾಗುತ್ತದೆ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಬೊಮ್ಮಾಯಿಯವರಿಗೆ ಪ್ರತಿಪಕ್ಷ ಸ್ಥಾನ ನೀಡದೆ ಬಿಜೆಪಿ ಅವರನ್ನೇ ಅಗೌರವಿಸುತ್ತಿದೆ. ಮೊದಲು ಬೊಮ್ಮಾಯಿಯವರು ಅದನ್ನು ಅರ್ಥ ಮಾಡಿಕೊಳ್ಳಲಿ, ತಮ್ಮ ಮನೆಯಲ್ಲಿನ ಹೊಲಸು ಸ್ವಚ್ಚ ಮಾಡಲಿ. ನಂತರ ನಮ್ಮತ್ತ ಬೆರಳು ತೋರಿಸಲಿ ಎಂದು ಜರಿದರು.