‘ಬುರುಡೆ ಕೇಸ್ ಪ್ರಕರಣದಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ನಾನು ಆರಂಭದಲ್ಲೇ ಧೈರ್ಯದಿಂದ ಹೇಳಿದ್ದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ : ‘ಬುರುಡೆ ಕೇಸ್ ಪ್ರಕರಣದಲ್ಲಿ ಧರ್ಮಸ್ಥಳ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ನಾನು ಆರಂಭದಲ್ಲೇ ಧೈರ್ಯದಿಂದ ಹೇಳಿದ್ದೆ. ಅಲ್ಲದೆ, ಡಾ.ವೀರೇಂದ್ರ ಹೆಗ್ಗಡೆ ಅವರ ಕಷ್ಟಕಾಲದಲ್ಲಿ ನಾವು ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದು, ಆ ನಿರ್ಧಾರ ಕೈಗೊಂಡಿದ್ದಕ್ಕೆ ಇಡೀ ಜೈನ ಸಮುದಾಯ ನನಗೆ ಬೆಂಬಲವಾಗಿ ನಿಂತು, ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿ,.‘ನನಗೆ ಧರ್ಮಸ್ಥಳದ ಇತಿಹಾಸ ಗೊತ್ತು. ಅವರು ಯಾರೂ ಸಹ ಈ ರೀತಿ ಮಾಡುವುದಿಲ್ಲ ಎನ್ನುವುದೂ ಗೊತ್ತಿತ್ತು. ಹೀಗಾಗಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿರುವ ಬಗ್ಗೆ ನಾನು ಅಂದೇ ಧೈರ್ಯದಿಂದ ಹೇಳಿದ್ದೆ. ಚಾರ್ಜ್‌ಶೀಟ್ ಪ್ರತಿಯಲ್ಲಿ ಏನಿದೆ ಎಂಬುದನ್ನು ನಾನು ಓದಿಲ್ಲ. ಅಂತಿಮವಾಗಿ ಸತ್ಯ ಹೊರಗಡೆ ಬಂದಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡುವಿನ ಆಳವಾದ ಭಿನ್ನಾಭಿಪ್ರಾಯಗಳ ಕಾರಣಕ್ಕೆ ಈ ಪಿತೂರಿ ನಡೆದಿದೆ’ ಎಂದು ಹೇಳಿದರು.
‘ಡಾ। ಹೆಗ್ಗಡೆ ಅವರ ವಿರುದ್ಧ ಯಾವ ರೀತಿ ಷಡ್ಯಂತ್ರ ಆಯಿತು ಎಂಬುದನ್ನು ನಾವು ನೋಡಿದ್ದೇವೆ. ಆಗ ಅವರ ಕಷ್ಟಕಾಲದಲ್ಲಿ ನಾವು ತೆಗೆದುಕೊಂಡ ನಿರ್ಧಾರವನ್ನು ರಾಷ್ಟ್ರೀಯ, ರಾಜ್ಯ ಮಾಧ್ಯಮಗಳು ಹಾಗೂ ಅನೇಕ ನಾಯಕರು ಪ್ರಶ್ನೆ ಮಾಡಿದರು. ಆದರೆ, ಪ್ರಕರಣದ ಆರಂಭದಲ್ಲಿಯೇ ಷಡ್ಯಂತ್ರ ನಡೆದಿದ್ದನ್ನು ನಾನು ಹೇಳಿದ್ದೇನೆ. ಯಾರ ಒತ್ತಡಕ್ಕೂ ಮಣಿಯದೆ, ನನ್ನ ಅನುಭವ ಹಾಗೂ ನನಗೆ ತಿಳಿದಿದ್ದನ್ನು ಹೇಳಿದ್ದೇನೆ’ ಎಂದರು,
ಷಡ್ಯಂತ್ರ ನಡೆದಿದ್ದು ಸಾಬೀತು: ಧರ್ಮಸ್ಥಳ ಕ್ಷೇತ್ರದ ಹೇಳಿಕೆ
ಬೆಳ್ತಂಗಡಿ: ಶ್ರೀ ಕ್ಷೇತ್ರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಹೇಳಿಕೆ ನೀಡಿದೆ. ಧರ್ಮಸ್ಥಳ ಗ್ರಾಮದ ವಿರುದ್ಧ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದೆ.
ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖೆಯ ಮಾಹಿತಿ ಒದಗಿಸಿದೆ
ಶ್ರೀ ಕ್ಷೇತ್ರ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖೆಯ ಮಾಹಿತಿ ಒದಗಿಸಿದೆ ಎಂದು ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೇವೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲಿನ ವ್ಯವಸ್ಥಿತ ಷಡ್ಯಂತ್ರಗಳು ಮೇಲಿಂದ ಮೇಲೆ ನಡೆಯುತ್ತಾ ಬಂದಿದೆ ಎನ್ನುವುದಕ್ಕೆ ಇದೂ ಕೂಡ ಒಂದು ಉದಾಹರಣೆಯೇ.
ಇದೇ ರೀತಿಯ ಷಡ್ಯಂತ್ರ ಮುಂದೆಂದೂ ಮತ್ಯಾವ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಾಗದಂತೆ ತಡೆಯುವ ಅವಶ್ಯಕತೆಯಿದ್ದು ಸರ್ಕಾರ ಈ ವಿಚಾರವಾಗಿ ಗಮನವಹಿಸಬೇಕೆಂದು ವಿನಂತಿ ಮಾಡುತ್ತೇವೆ. ಈ ಷಡ್ಯಂತ್ರದ ಹಿಂದಿರುವ ಶಕ್ತಿಗಳಿಗೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಆಶಯ ವ್ಯಕ್ತಪಡಿಸಿದೆ.


