2025ನೇ ವರ್ಷದಲ್ಲಿ ಆರ್‌ಎಸ್‌ಎಸ್‌ನಿಂದ ಒಟ್ಟು 518 ಸ್ಥಳಗಳಲ್ಲಿ ರಾಷ್ಟ್ರೀಯ ಪಥ ಸಂಚಲನ ಕಾರ್ಯಕ್ರಮ ನಡೆದಿದ್ದು, 1.44 ಲಕ್ಷ ಮಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, ಪಥಸಂಚಲನದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮುಗಲಭೆ ನಡೆದಿಲ್ಲ ಎಂದು ಡಾ। ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆ : ಪ್ರಸಕ್ತ 2025ನೇ ವರ್ಷದಲ್ಲಿ ರಾಜ್ಯಾದ್ಯಂತ ಆರ್‌ಎಸ್‌ಎಸ್‌ನಿಂದ ಒಟ್ಟು 518 ಸ್ಥಳಗಳಲ್ಲಿ ರಾಷ್ಟ್ರೀಯ ಪಥ ಸಂಚಲನ ಕಾರ್ಯಕ್ರಮ ನಡೆದಿದ್ದು, 1.44 ಲಕ್ಷ ಮಂದಿ ಪಥಸಂಚಲನದಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ, ಈವರೆಗೆ ನಡೆದಿರುವ ಪಥಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮುಗಲಭೆಗಳು ನಡೆದಿಲ್ಲ ಎಂದು ಗೃಹ ಸಚಿವ ಡಾ। ಜಿ. ಪರಮೇಶ್ವರ್ ಹೇಳಿದ್ದಾರೆ.
518 ಕಡೆ ನಡೆದ ಪಥಸಂಚಲನ
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನೀಲ್‌ಕುಮಾರ್ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಪರಮೇಶ್ವರ್ ಅವರು, 518 ಕಡೆ ನಡೆದ ಪಥಸಂಚಲನದಲ್ಲಿ 1,44,293 ಮಂದಿ ಭಾಗವಹಿಸಿದ್ದರು ಎಂದು ಹೇಳಿದ್ದಾರೆ.
ಬೆಂಗಳೂರು ನಗರದ 97 ಕಡೆ ನಡೆದ ಪಥಸಂಚಲನದಲ್ಲಿ 30,233 ಮಂದಿ ಭಾಗಿಯಾಗಿದ್ದರು. ಇದೇ ರೀತಿ ಉತ್ತರ ಕನ್ನಡ, ಕಾರವಾರದಲ್ಲಿ 45 ಸ್ಥಳಗಳಲ್ಲಿ 13,615 ಮಂದಿ, ದಕ್ಷಿಣ ಕನ್ನಡ ಜಿಲ್ಲೆಯ 10 ಸ್ಥಳದಲ್ಲಿ 8,410 ಮಂದಿ, ಶಿವಮೊಗ್ಗ ಜಿಲ್ಲೆಯಲ್ಲಿ 19 ಸ್ಥಳಗಳಲ್ಲಿ 14,283 ಮಂದಿ, ತುಮಕೂರು ಜಿಲ್ಲೆಯ 11 ಸ್ಥಳಗಳಲ್ಲಿ 5,900 ಮಂದಿ, ಹಾಸನ ಜಿಲ್ಲೆಯ 8 ಸ್ಥಳಗಳಲ್ಲಿ 3,550, ಹುಬ್ಬಳ್ಳಿ-ಧಾರವಾಡದಲ್ಲಿ ಎರಡು ತಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 15,000 ಮಂದಿ ಸೇರಿ ವಿವಿಧ ಜಿಲ್ಲೆಗಳಲ್ಲಿ 1.44 ಲಕ್ಷ ಮಂದಿ ಭಾಗವಹಿಸಿದ್ದರು ಎಂದು ಉತ್ತರದಲ್ಲಿ ತಿಳಿಸಿದ್ದಾರೆ.
ಪರಮೇಶ್ವರ್ ಅವರ ಹೇಳಿಕೆ ಪೆಟ್ಟು ನೀಡಿದೆ
ಪ್ರಚಾರ ಗಿಟ್ಟಿಸಿಕೊಳ್ಳಲು ಹಾಗೂ ಹೈಕಮಾಂಡ್ ಗಮನ ಸೆಳೆಯಲು ಹೇಳಿಕೆ ನೀಡುವ ರಾಜ್ಯ ಸಚಿವರಿಗೆ ಪರಮೇಶ್ವರ್ ಅವರ ಹೇಳಿಕೆ ಪೆಟ್ಟು ನೀಡಿದೆ. ಒಂದೇ ಒಂದು ಹಿಂಸೆ ಇಲ್ಲದೇ ಈ ವರ್ಷ 518 ಪಥಸಂಚಲನ ನಡೆದಿದೆ ಎಂದು ಪರಂ ಅವರೇ ಹೇಳಿದ್ದಾರೆ.
- ಬಿ.ಎಲ್. ಸಂತೋಷ್, ಬಿಜೆಪಿ ಸಂಘಟನಾ ಕಾರ್ಯದರ್ಶಿ


