ಭದ್ರಾ ನದಿಯ ತೀರಕ್ಕೆ ಬಂತು ಭಾರೀ ಗಾತ್ರದ ಮೊಸಳೆಗಳು: ಆತಂಕಗೊಂಡಿರುವ ಸ್ಥಳೀಯರು!
ಭದ್ರೆಯ ಒಡಲು ಮಳೆಗಾಲದಲ್ಲಿ ಮಾತ್ರ ಭಯಂಕರವಲ್ಲ, ಬೇಸಿಗೆ-ಚಳಿಗಾಲದಲ್ಲೂ ಭಯಂಕರವೇ. ಯಾಕಂದ್ರೆ, ಮಲೆನಾಡಿನ ಚಳಿ ಜೊತೆ ನೀರಲ್ಲೇ ಇದ್ದು ದೇಹ ತಂಡಿಯಾದಾಗ ಮೊಸಳೆಗಳು ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡುತ್ತಿರೋದು ಭದ್ರಾ ನದಿ ತಟದ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಜ.26): ಭದ್ರೆಯ ಒಡಲು ಮಳೆಗಾಲದಲ್ಲಿ ಮಾತ್ರ ಭಯಂಕರವಲ್ಲ, ಬೇಸಿಗೆ-ಚಳಿಗಾಲದಲ್ಲೂ ಭಯಂಕರವೇ. ಯಾಕಂದ್ರೆ, ಮಲೆನಾಡಿನ ಚಳಿ ಜೊತೆ ನೀರಲ್ಲೇ ಇದ್ದು ದೇಹ ತಂಡಿಯಾದಾಗ ಮೊಸಳೆಗಳು ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡುತ್ತಿರೋದು ಭದ್ರಾ ನದಿ ತಟದ ನಿವಾಸಿಗಳನ್ನ ಬೆಚ್ಚಿಬೀಳಿಸಿದೆ. ಆರರಿಂದ ಹದಿನೈದು ಅಡಿವರೆಗೆ ಉದ್ದವಿರೋ ಮೊಸಳೆಗಳನ್ನ ಕಂಡ ಮಲೆನಾಡಿಗರು ಕನಸಲ್ಲೂ ಭದ್ರೆಯನ್ನ ನೆನೆಯುತ್ತಿಲ್ಲ. ಅಸಲಿಗೆ ಈ ದೈತ್ಯ ಮೊಸಳೆಗಳನ್ನ ಸಾಕ್ತಿರೋದು ಅರಣ್ಯ ಇಲಾಖೆ ಹಾಗೂ ಸ್ಥಳಿಯರೇ ಎನ್ನುವ ಆರೋಪ ಕೇಳಿಬಂದಿದೆ.
ಮೊಸಳೆ ಕಂಡು ಆತಂಕಗೊಂಡಿರುವ ಸ್ಥಳೀಯರು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರೆಯ ತಟದಲ್ಲಿ ರಾಜಾರೋಷವಾಗಿ ಮೊಸಳೆ ಮಲಗಿರುವ ದೃಶ್ಯ ನೋಡಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಆರು ಅಡಿ ಉದ್ದದಿಂದ 15 ಅಡಿಯವರೆಗೆ ಉದ್ದವಿರೋ ಇನ್ನೂ ಏಳೆಂಟು ಮೊಸಳೆಗಳಿವೆ. ಬಾಳೆಹೊನ್ನೂರಿನ ಭದ್ರಾ ನದಿಯ ದಡದಲ್ಲಿ ಆಗಿಂದಾಗ್ಗೆ ಅಲ್ಲಲ್ಲೇ ಬಂದು ಹೀಗೆ ಮಲಗುತ್ವೆ. ಉಭಯವಾಸಿ ಪ್ರಾಣಿಯಾಗಿರೋ ಮೊಸಳೆ ಯಾವಾಗ ಎಲ್ಲಿರುತ್ತೋ ಅಂತ ಹೆದರಿ, ಸ್ಥಳಿಯರ್ಯಾರು ಹೊಲ-ಗದ್ದೆ-ತೋಟಗಳಿಗೆ ಹೋಗ್ತಿಲ್ಲ. ನದಿ ಬಳಿಯೂ ಬರ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದ್ರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ತಿಲ್ಲ ಎನ್ನುವುದು ಸ್ಥಳೀಯರ ಆರೋಪ
ಪಕ್ಷ ವಿರೋಧಿಗಳನ್ನು ಕುತ್ತಿಗೆ ಹಿಡಿದು ಆಚೆ ಹಾಕಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ
ಮಾಂಸದಂಗಡಿ ಮಾಲೀಕರು ಹಾಗೂ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ: ಸಾಲದಕ್ಕೆ ಇಲ್ಲಿ ಮೊಸಳೆಗಳಿರೋದು ಅರಣ್ಯ ಇಲಾಖೆಗೂ ಗೊತ್ತು. ಬಾಳೆಹೊನ್ನೂರಿನ ಕೋಳಿ-ಮಾಂಸದಂಗಡಿಯವ್ರಿಗೂ ಗೊತ್ತು. ಅಂಗಡಿಗಳಲ್ಲಿ ಕ್ಲೀನ್ ಮಾಡಿದ ಕೋಳಿ-ಕುರಿಯ ವೇಸ್ಟ್ಗಳನ್ನ ಅಂಗಡಿಯವ್ರು ತಂದು ನದಿಗೆ ಹಾಕ್ತಿರೋದ್ರಿಂದ ಮೊಸಳೆಗಳು ಹೆಚ್ಚಾಗಿವೆ ಅಂತಾರೆ ಸ್ಥಳಿಯರು. ಪ್ರತಿ ದಿನ ಹುಡುಕಾಡದಂತೆ, ಹೋರಾಡದಂತೆ ಆಹಾರ ಸಿಗ್ತಿರೋದ್ರಿಂದ ಮೊಸಳೆಗಳು ಮುಂದಕ್ಕೂ ಹೊಗ್ತಿಲ್ಲ. ಹಿಂದಕ್ಕೂ ಹೋಗ್ತಿಲ್ಲ. ಬಾಳೆಹೊನ್ನೂರು ನಗರದ ಬ್ರಿಡ್ಜ್ ಕೆಳಗೆಯೇ ವಾಸ ಮಾಡ್ತಿವೆ. ಸ್ಥಳಿಯರು ಸಾಕಷ್ಟು ಬಾರಿ ಕೋಳಿ ಅಂಗಡಿಯವ್ರಿಗೆ ಇಲ್ಲಿಗೆ ಕೋಳಿಗಳ ವೇಸ್ಟ್ ಹಾಕಬೇಡಿ ಎಂದು ಹೇಳಿದ್ರು ಯಾರೂ ಕೇಳ್ತಿಲ್ವಂತೆ. ಮತ್ತೆ ತಂದು ಇಲ್ಲಿಗೆ ಸುರಿಯುತ್ತಾರಂತೆ.
ನಮ್ಮ ಗ್ಯಾರಂಟಿ ಲೇವಡಿ ಮಾಡಿ ಮೋದಿ ಅವರೇ ಕೊಡಲು ಹೊರಟಿದ್ದಾರೆ: ಸಿದ್ದರಾಮಯ್ಯ
ಈ ಬಗ್ಗೆ ಸ್ಥಳಿಯರು ಅರಣ್ಯ ಇಲಾಖೆ ಗಮನಕ್ಕೂ ತಂದ್ರು ಅವ್ರು ಕೂಡ ಯಾವುದೇ ರೀತಿಯ ಕ್ರಮಕೈಗೊಳ್ಳದಿರೋದ್ರಿಂದ ಕ್ರಮೇಣ ಮೊಸಳೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಸ್ಥಳಿಯರು ಮಾಂಸದಂಗಡಿ ಮಾಲೀಕರು ಹಾಗೂ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸ್ಥಳಿಯರು ಹೇಳೋ ಪ್ರಕಾರ ಕೋಳಿ-ಮಾಂಸದಂಗಡಿಯವ್ರು ವೇಸ್ಟ್ ಹಾಕ್ತಿದ್ರೆ ಕೂಡಲೇ ನಿಲ್ಲಿಸಬೇಕು. ಯಾಕಂದ್ರೆ, ಎಲ್ಲರಿಗೂ ಭಯ ಇರುತ್ತೆ. ಎಲ್ಲರದ್ದೂ ಜೀವಾನೆ. ಅನಾಹುತವೊಂದು ನಡೆದ ಮೇಲೆ ಕ್ರಮ ಕೈಗೊಳ್ಳೋ ಬದಲು, ಅರಣ್ಯ ಇಲಾಖೆ ಕೂಡ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸ್ಥಳಿಯರ ಆತಂಕವನ್ನ ದೂರಮಾಡಬೇಕಿದೆ.