ಸುಜಾತಾ ಬಂಧನ ಪ್ರಕರಣಕ್ಕೆ ಸಂಬಂಧ ಕೇಂದ್ರ ಸಚಿವ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ. ಪೊಲೀಸರು ಕಾಂಗ್ರೆಸ್ ಕೈಗೊಂಬೆಯಾಗಿದ್ದು, ಹಳೆಯ ವಿಡಿಯೋ ಬಳಸಿ ರಾಜಕೀಯ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಸಿಐಡಿ ತನಿಖೆ ತಿರಸ್ಕರಿಸಿ, ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.
ಹುಬ್ಬಳ್ಳಿ (ಜ.9): ಸುಜಾತಾ ಎಂಬಾಕೆಯ ಬಂಧನ ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕಾಂಗ್ರೆಸ್ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಹಳೆಯ ವಿಡಿಯೋ ಇಟ್ಟುಕೊಂಡು ರಾಜಕೀಯ ಸಂಚು?
ಪ್ರಕರಣದ ಕುರಿತು ಮಾತನಾಡಿದ ಕೇಂದ್ರ ಸಚಿವ ಜೋಶಿ ಅವರು, ಈಗ ವೈರಲ್ ಆಗಿರುವ ವಿಡಿಯೋ 2023ರದ್ದು. ಆದರೆ ಸುಜಾತಾ ಬಿಜೆಪಿ ಸೇರಿದ್ದು 2025ರಲ್ಲಿ. ಹಳೆಯ ವಿಡಿಯೋಗಳನ್ನು ಇಟ್ಟುಕೊಂಡು ಈಗ ರಾಜಕೀಯ ಮಾಡುತ್ತಿರುವುದು ಸರಿಯಲ್ಲ. ಆ ವಿಡಿಯೋಗಳು ಪೊಲೀಸ್ ಮೂಲದಿಂದಲೇ ಕಾಂಗ್ರೆಸ್ ನಾಯಕರ ಕೈಗೆ ತಲುಪಿವೆ ಎಂದು ಆರೋಪಿಸಿದರು. ಹಲ್ಲೆ ನಡೆದಿರುವುದು ಸುಜಾತಾ ಮನೆಯ ಮುಂದೆ ಹೊರತು ಬೇರೆ ಎಲ್ಲೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪೊಲೀಸ್ ಕಮಿಷನರ್ ನಡೆಗೆ ಆಕ್ಷೇಪ
ನಾನು ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ವಿಷಯವನ್ನು ವಿನಾಕಾರಣ ದೊಡ್ಡದು ಮಾಡಬೇಡಿ ಎಂದು ಹೇಳಿದ್ದೆ. ಆದರೆ ಈಗ ಸುಜಾತಾ ಮನೆಯವರನ್ನು ಅರೆಸ್ಟ್ ಮಾಡಲಾಗಿದೆ. ಕಮಿಷನರ್, ಡಿಸಿಪಿ ಮತ್ತು ಎಸಿಪಿ ಅವರು ನಾವು ರಾತ್ರಿ ಸುಜಾತಾ ಮನೆಗೆ ಹೋಗಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಪೊಲೀಸರು ಮೊದಲೇ ಷರಾ ಬರೆಯುತ್ತಿದ್ದಾರೆ ಎಂದು ತನಿಖಾ ವೈಖರಿಯನ್ನು ಪ್ರಶ್ನಿಸಿದರು.
ಬಿಎಲ್‌ಒ ವಿರೋಧಿಸಿದಾಗಲೇ ಸುಮೊಟೋ ಕೇಸ್ ದಾಖಲಾಗಬೇಕಿತ್ತು
ಬಿ ಎಲ್ ಓ (BLO) ಅವರಿಗೆ ವಿರೋಧ ಮಾಡಿದಾಗಲೇ ಸುಮೋಟೋ ಕೇಸ್ ದಾಖಲಿಸಿದ್ದರೆ ಇಷ್ಟೆಲ್ಲ ಘಟನೆಗಳು ನಡೆಯುತ್ತಿರಲಿಲ್ಲ. ಬಿಜೆಪಿಯಲ್ಲಿ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ನಾವು ಅದನ್ನು ಸಮರ್ಥಿಸುವುದಿಲ್ಲ. ಆದರೆ, ಸುಜಾತಾ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾಳೆ ಎಂಬ ಕಾರಣಕ್ಕೆ ಕಾನೂನು ಬಾಹಿರವಾಗಿ ಬಂಧಿಸುವುದು ಸರಿಯಲ್ಲ. ಕ್ರಿಮಿನಲ್ ಆಗಿದ್ದಾಳೆ ಎಂದು ರಸ್ತೆ ಮೇಲೆ ನಿಂತು ಗುಂಡು ಹೊಡೆಯಲು ಸಾಧ್ಯವೇ? ಎಂದು ಆಕ್ರೋಶ ಹೊರಹಾಕಿದರು.
ಸಿಐಡಿ ತನಿಖೆ: ಕಾಂಗ್ರೆಸ್ ಪಾಲಿನ 'ವಾಷಿಂಗ್ ಮಷೀನ್'
ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಕ್ಕೆ ಪ್ರತಿಕ್ರಿಯಿಸಿದ ಜೋಶಿ, ತಪ್ಪೇ ಮಾಡದಿದ್ದರೆ ತನಿಖೆಗೆ ಯಾಕೆ ಕೊಟ್ಟಿದ್ದೀರಿ? ನಮಗೆ ಸಿಐಡಿ ತನಿಖೆಯ ಮೇಲೆ ನಂಬಿಕೆಯಿಲ್ಲ, ಅದೊಂತರ ಕಾಂಗ್ರೆಸ್ ಪಾಲಿನ ವಾಷಿಂಗ್ ಮಷೀನ್ ಇದ್ದಂತೆ. ಅಲ್ಲಿಗೆ ಹೋದರೆ ಎಲ್ಲರೂ ಕ್ಲೀನ್ ಆಗಿ ಹೊರಬರುತ್ತಾರೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಪಿಎಸ್‌ಐ ಬನ್ನಿಕೊಪ್ಪ ಅಮಾನತಿಗೆ ಆಗ್ರಹ
ಪಿಎಸ್‌ಐ ಬನ್ನಿಕೊಪ್ಪ ಎಂಬುವವರು ಬಹಳಷ್ಟು ತೊಂದರೆ ಕೊಡುತ್ತಿದ್ದಾರೆ. ಕೇವಲ ಮೂರು ದಿನಗಳಲ್ಲಿ ಮೂರು ಕೇಸ್‌ಗಳನ್ನು ದಾಖಲಿಸಿದ್ದಾರೆ. ಅವರನ್ನು ಕೂಡಲೇ ಅಮಾನತು ಮಾಡಬೇಕು. ಗೃಹ ಸಚಿವರಿಗೆ ನಾನು ಕೇಳುವುದು ಇಷ್ಟೇ, ಪೊಲೀಸರಿಗೆ ನೀವೇ ಸರ್ಟಿಫಿಕೇಟ್ ಕೊಡಬೇಡಿ. ಕಾಂಗ್ರೆಸ್ ಪಾರ್ಟಿ ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತಿದೆ ಎಂದರು.
ಬೈರತಿ ಬಸವರಾಜ್ ಪ್ರಕರಣದ ಪ್ರಸ್ತಾಪ
ಇದೇ ವೇಳೆ ಬೈರತಿ ಬಸವರಾಜ್ ಅವರ ಕುರಿತು ಪ್ರಸ್ತಾಪಿಸಿದ ಸಚಿವರು, ಬೈರತಿ ಬಸವರಾಜ್ ಅವರನ್ನು ಕೊಲೆ ಪ್ರಕರಣದಲ್ಲಿ A5 ಆರೋಪಿಯನ್ನಾಗಿ ಮಾಡಲಾಗಿದೆ. ಆದರೆ ಅವರು ಕೊಲೆ ಕೇಸ್‌ನಲ್ಲಿ ಭಾಗಿಯಾಗಿಲ್ಲ. ಇದು ರಾಜಕೀಯ ಪ್ರೇರಿತ ಎಂದು ದೂರಿದರು.


