ಹುಬ್ಬಳ್ಳಿಯ ಮಹಿಳೆ ವಿವಸ್ತ್ರ ಪ್ರಕರಣಕ್ಕೆ ಸಂಬಂಧ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪೊಲೀಸರ ವರ್ತನೆಯನ್ನು ಖಂಡಿಸಿ, ಪ್ರಕರಣದ ವಿಡಿಯೋ ವೈರಲ್ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಆರೋಪಿಸಿದರು. ಈ ಘಟನೆ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಆಗ್ರಹಿಸಿದರು..
ಹುಬ್ಬಳ್ಳಿ (ಜ.9): ರಾಜ್ಯಾದ್ಯಂತ ತಲ್ಲಣ ಮೂಡಿಸಿರುವ ಹುಬ್ಬಳ್ಳಿಯ ಮಹಿಳೆ ವಿವಸ್ತ್ರ ಪ್ರಕರಣ ಇದೀಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯಲ್ಲಿ ಗುಡುಗಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಲ್ಲದೆ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದರು.
ಆಕೆ ಉಗ್ರಗಾಮಿಯೇ..? ಪೊಲೀಸರ ಅತಿರೇಕದ ವರ್ತನೆಗೆ ಕಿಡಿ
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅಶೋಕ್, ಬಂಧಿತ ಮಹಿಳೆ ಸುಜಾತಾ ಅವರೇನು ಉಗ್ರಗಾಮಿಯೇ ಅಥವಾ ಕೊಲೆ ಆರೋಪಿಯೇ? ಒಬ್ಬ ಮಹಿಳೆಯನ್ನು ಬಂಧಿಸಲು 40 ಜನ ಪೊಲೀಸ್ ಸಿಬ್ಬಂದಿ ಹೋಗುವ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದರು. ಚುನಾವಣಾ ಆಯೋಗದ ಕೆಲಸದ ಭಾಗವಾಗಿ ಬಿಎಲ್ಓ ಜೊತೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ, ಅದರಂತೆ ಆಕೆಯ ಜೊತೆ ಸಹೋದರ ಹೋಗಿದ್ದ. ಆದರೆ ಇದೇ ಪಾಲಿಕೆ ಸದಸ್ಯೆಯನ್ನು ಬಂಧಿಸುವಾಗ ಇನ್ನೋವಾ ಕಾರಿನಲ್ಲಿ ರಾಜಮರ್ಯಾದೆಯಿಂದ ಕರೆತರುತ್ತೀರಿ, ಸಾಮಾನ್ಯ ಮಹಿಳೆಯ ವಿಷಯದಲ್ಲಿ ಇಷ್ಟು ಕ್ರೌರ್ಯವೇಕೆ? ಎಂದು ಪೊಲೀಸರ ತಾರತಮ್ಯವನ್ನು ಖಂಡಿಸಿದರು.
ಆಕೆ ಬಟ್ಟೆ ಬಿಚ್ಚುವಾಗ 40 ಸಿಬ್ಬಂದಿ ಕತ್ತೆ ಕಾಯ್ತಿದ್ರಾ?
ಯಾವುದೇ ತನಿಖಾ ವರದಿ ಬರುವ ಮುನ್ನವೇ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದನ್ನು ಅಶೋಕ್ ಟೀಕಿಸಿದರು. ಸರಕಾರ ಯಾವುದೇ ತನಿಖೆ ಇಲ್ಲದೆ ಕ್ಲೀನ್ ಚಿಟ್ ನೀಡುತ್ತಿದೆ. ಆಕೆಯೇ ಬಟ್ಟೆ ಬಿಚ್ಚಿಕೊಂಡಳು ಎಂದು ಹೇಳುತ್ತಿದ್ದಾರೆ. ಹಾಗಿದ್ದರೆ ಅಲ್ಲಿಗೆ ಹೋಗಿದ್ದ 40 ಜನ ಸಿಬ್ಬಂದಿ ಕತ್ತೆ ಕಾಯುತ್ತಿದ್ದರಾ? ಆಕೆ ಬಟ್ಟೆ ಬಿಚ್ಚಿಕೊಳ್ಳುವಾಗ ತಡೆಯಲು ಪೊಲೀಸರಿಗೆ ಸಾಧ್ಯವಾಗಲಿಲ್ಲವೇ? ಪೊಲೀಸರು ಇಲ್ಲಿ ದುಶ್ಯಾಸನರಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ವಿಡಿಯೋ ವೈರಲ್ ತಂತ್ರ - ರಾಜಕೀಯ ಪಿತೂರಿ?
ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋ ಬಿಡುಗಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರು, ವಾರದಿಂದ ಇಲ್ಲದ ವಿಡಿಯೋ ನಾವು ಹುಬ್ಬಳ್ಳಿಗೆ ಬರುತ್ತೇವೆ ಎಂದು ಹೇಳಿದ ತಕ್ಷಣ ಪ್ರತ್ಯಕ್ಷವಾಯಿತು. ಹಳೆಯ ಅಪರಾಧಗಳಿದ್ದರೆ ಅದಕ್ಕೆ ಶಿಕ್ಷೆಯಾಗಲಿ, ಆದರೆ ಈಗ ನಡೆದಿರುವ ಈ ಅಮಾನವೀಯ ಕೃತ್ಯ ಸರಿಯೇ ಎಂಬುದು ನಮ್ಮ ಪ್ರಶ್ನೆ. ನಮ್ಮ ಭೇಟಿಯ ದೆಸೆಯಿಂದಲೇ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಮಹಿಳಾ ಸುರಕ್ಷತೆಯಲ್ಲಿ ಸರ್ಕಾರ ವಿಫಲ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದ ಅಶೋಕ್, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೌಡಿಗಳ ಮತ್ತು ಪುಂಡರ ಉಪಟಳ ಹೆಚ್ಚಾಗಿದೆ. ಕಳೆದ ಎರಡುವರೆ ವರ್ಷಗಳಲ್ಲಿ ರಾಜ್ಯದಲ್ಲಿ ಬರೋಬ್ಬರಿ 43 ಸಾವಿರ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಮಹಿಳೆಯರ ಮೇಲೆ ಹಲ್ಲೆ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು? ಠಾಣೆಗೆ ಹೋದರೆ ಪೊಲೀಸರೇ ಆರೋಪಿಗಳ ಪರವಾಗಿ ನಿಲ್ಲುತ್ತಿದ್ದಾರೆ. ಬಳ್ಳಾರಿ ಗಲಾಟೆ ಪ್ರಕರಣದಲ್ಲಿ ಪೊಲೀಸರೇ ಆರೋಪಿಗಳಿಗೆ ಬಾಡಿಗಾರ್ಡ್ ರೀತಿ ವರ್ತಿಸಿದ್ದಾರೆ ಇದೆಂತಹ ಕರ್ಮ ಇವರದು? ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಾಂಗ ತನಿಖೆಗೆ ಆಗ್ರಹ
ಈ ಪ್ರಕರಣವು ಪಾರದರ್ಶಕವಾಗಿ ತನಿಖೆಯಾಗಬೇಕಾದರೆ ಸರ್ಕಾರ ಕೂಡಲೇ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಅಶೋಕ್ ಒತ್ತಾಯಿಸಿದರು. ಅಲ್ಲದೆ, ಕರ್ತವ್ಯ ಲೋಪ ಎಸಗಿದ ಮತ್ತು ಮಹಿಳೆಯ ಘನತೆಗೆ ಧಕ್ಕೆ ತಂದ ಸಂಬಂಧಪಟ್ಟ ಸಿಪಿಐ ಹಾಗೂ ಇತರೆ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು ಎಂದು ಸರ್ಕಾರಕ್ಕೆ ಗಡುವು ನೀಡಿದ್ದಾರೆ.


