Asianet Suvarna News Asianet Suvarna News

ಬಿಎಸ್‌ವೈ, ಎಚ್‌ಡಿಕೆ ನಡುವೆ ಶುರುವಾಯ್ತು ಹೋಟೆಲ್‌ ಫೈಟ್‌!: ಏನಿದರ ರಹಸ್ಯ?

ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ನಡುವೆ ಹೊಟೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಫೈಟ್ ಒಂದು ಆರಂಭವಾಗಿದೆ. ಅಷ್ಟಕ್ಕೂ ಯಾಕೆ ಈ ಫೈಟ್ ಅಂತೀರಾ? ಇಲ್ಲಿದೆ ವಿವರ

Hotel Room Fight Started Between HD Kumaraswamy and BS yeddyurappa
Author
Bangalore, First Published Dec 20, 2018, 1:46 PM IST

ಬೆಳಗಾವಿ[ಡಿ.20]: ಮುಖ್ಯಮಂತ್ರಿಗಳು ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಕೊಠಡಿ ಹೊಂದಿದ್ದಾರೆ ಎನ್ನಲಾದ ವಿಚಾರವು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ನಡುವೆ ಮಾತಿನ ಚಕಮಕಿ ಮತ್ತು ಸವಾಲಿಗೆ ಪ್ರತಿ ಸವಾಲು ಹಾಕಿದ ಪ್ರಸಂಗ ನಡೆಯಿತು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಾನು ಕೊಠಡಿ ಪಡೆದುಕೊಂಡಿದ್ದೆ ಎಂಬುದನ್ನು ಸಾಬೀತುಪಡಿಸಿದರೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಸವಾಲು ಹಾಕಿದರು. ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ, ಹೋಟೆಲ್‌ನಲ್ಲಿ ವರ್ಗಾವಣೆ ದಂಧೆ ನಡೆಸಿರುವುದನ್ನು ಸಾಬೀತುಪಡಿಸಿದರೆ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದಿಲ್ಲ ಎಂದು ಪ್ರತಿ ಸವಾಲೆಸೆದರು.

ಬರಗಾಲ ಕುರಿತ ಚರ್ಚೆಗೆ ಬುಧವಾರ ಉತ್ತರ ನೀಡುವ ವೇಳೆ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ತಂಗಿರುವ ಕುರಿತು ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅಧಿಕಾರಕ್ಕೆ ಬಂದ ಬಳಿಕ ನಾನು ಸರ್ಕಾರಿ ಬಂಗಲೆಯನ್ನು ತೆಗೆದುಕೊಂಡಿಲ್ಲ. ಹೋಟೆಲ್‌ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಒಂದು ಕೊಠಡಿಯನ್ನು ತೆಗೆದುಕೊಂಡಿದ್ದು, ಈ ಹಿಂದಿನ ಮುಖ್ಯಮಂತ್ರಿಗಳು ಸಹ ತೆಗೆದುಕೊಂಡಿದ್ದರು. ಪ್ರತಿಪಕ್ಷ ನಾಯಕರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅದೇ ಹೋಟೆಲ್‌ನಲ್ಲಿ ಕೊಠಡಿಯನ್ನು ಪಡೆದುಕೊಂಡಿದ್ದರು ಎಂದು ಹೇಳಿದರು.

ಮುಖ್ಯಮಂತ್ರಿಯ ಹೇಳಿಕೆಯಿಂದ ಗರಂ ಆದ ಯಡಿಯೂರಪ್ಪ, ಮುಖ್ಯಮಂತ್ರಿಯಾದ ತರುವಾಯ ತಾಜ್‌ ವೆಸ್ಟ್‌ ಎಂಡ್‌ನಲ್ಲಿ ಕೊಠಡಿ ಪಡೆದುಕೊಂಡಿರುವ ಬಗ್ಗೆ ಸಾಬೀತು ಪಡಿಸಿದರೆ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಏರು ಧ್ವನಿಯಲ್ಲಿ ಹೇಳಿದರು.

ನಿಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆರೋಪ ಮಾಡಿಕೊಳ್ಳಲಾಗುತ್ತಿದೆ. ಹೋಟೆಲ್‌ನಲ್ಲಿ ವರ್ಗಾವಣೆ ದಂಧೆ ನಡೆಸಲಾಗುತ್ತಿದೆ ಎಂಬುದು ಜನರ ಮತ್ತು ನನ್ನ ಆರೋಪವು ಆಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಒಂದು ಕೊಠಡಿಯನ್ನು ತೆಗೆದುಕೊಂಡಿದ್ದೇನೆ. ಹಿಂದಿನ ಮುಖ್ಯಮಂತ್ರಿಗಳು ಸಹ ತೆಗೆದುಕೊಂಡಿದ್ದರು. ಇದಕ್ಕೆ ಯಾವುದೇ ರೀತಿಯ ಭತ್ಯೆಗಳನ್ನು ಪಡೆದುಕೊಂಡಿಲ್ಲ. ಯಾವೊಬ್ಬ ಅಧಿಕಾರಿಗಳಿಗೂ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಸಮಯ ಕೊಟ್ಟಿಲ್ಲ. ವರ್ಗಾವಣೆ ದಂಧೆ ನಡೆಸಿರುವ ಬಗ್ಗೆ ಸಾಬೀತು ಪಡಿಸಿದರೆ ಈ ಸ್ಥಾನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಕಟುವಾಗಿ ನುಡಿದ ಅವರು, ಹೋಟೆಲ್‌ನಲ್ಲಿ ಯಾವುದೇ ರೀತಿಯಲ್ಲೂ ಅವ್ಯವಹಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಸಚಿವ ಎಚ್‌.ಡಿ. ರೇವಣ್ಣ ನಮಗೆ ಯಾವ ಸ್ಟಾರ್‌ ಗೊತ್ತಿಲ್ಲ ಎಂದಾಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ನೀನು ಬಿಡಪ್ಪ. 100 ಸ್ಟಾರ್‌ ಎಂದು ಚಟಾಕಿ ಹಾರಿಸಿ ಚರ್ಚೆಗೆ ಇತಿಶ್ರೀ ಹಾಡಿದರು.

Follow Us:
Download App:
  • android
  • ios