ಹುಬ್ಬಳ್ಳಿಗೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್, ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ, ಮರ್ಯಾದೆ ಹತ್ಯೆ ಖಂಡನೆ ಹಾಗೂ ನೊಂದ ಕುಟುಂಬಕ್ಕೆ ಸಹಾಯದ ಭರವಸೆ ನೀಡಿದರು. 'ಸಂಕ್ರಾಂತಿ ಕ್ರಾಂತಿ' ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದ ಅವರು, ದಲಿತ ಸಿಎಂ ವಿಚಾರದಲ್ಲಿ ಮೌನ ವಹಿಸಿದರು.

ಹುಬ್ಬಳ್ಳಿ (ಡಿ.31): ಇಂದು ಹುಬ್ಬಳ್ಳಿಗೆ ಭೇಟಿ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ಹೊಸ ವರ್ಷಾಚರಣೆ, ಮರ್ಯಾದೆ ಹತ್ಯೆ ಹಾಗೂ ರಾಜ್ಯ ರಾಜಕೀಯದ ಕುರಿತು ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಹೊಸ ವರ್ಷಾಚರಣೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದ ಗೃಹ ಸಚಿವರು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಜನರು ಇತರರಿಗೆ ತೊಂದರೆ ನೀಡದೆ, ಶಾಂತಿಯುತವಾಗಿ ಸಂಭ್ರಮಿಸಲಿ' ಅವರು ಕರೆ ನೀಡಿದರು.

ಮರ್ಯಾದೆ ಹತ್ಯೆ ಪ್ರಕರಣ: ಜನರ ಮನಸ್ಥಿತಿ ಬದಲಾಗಲಿ

ಇತ್ತೀಚಿನ ಮರ್ಯಾದೆ ಹತ್ಯೆ ವಿಚಾರದ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಸಚಿವರು, ಆಧುನಿಕ ಜಗತ್ತಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಈ ಬಗ್ಗೆ ಈಗಾಗಲೇ ತನಿಖೆ ಆರಂಭವಾಗಿದ್ದು, ಕಾನೂನು ತನ್ನ ಕೆಲಸ ಮಾಡಲಿದೆ. ಆದರೆ ಕೇವಲ ಕಾನೂನಿನಿಂದ ಇದು ಸಾಧ್ಯವಿಲ್ಲ, ಜನರ ಮನಸ್ಥಿತಿಯಲ್ಲಿ ಬದಲಾವಣೆ ಆಗಬೇಕು ಎಂದರು. ಅಲ್ಲದೆ, ನೊಂದ ಕುಟುಂಬಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು. ಈ ಸಮಯದಲ್ಲಿ ವಿಪಕ್ಷಗಳು ಸರ್ಕಾರದ ಜೊತೆ ನಿಲ್ಲಬೇಕು ಎಂದು ಮನವಿ ಮಾಡಿದರು.

'ಸಂಕ್ರಾಂತಿ ಕ್ರಾಂತಿ' ಎಂದರೇನು?

ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ 'ಸಂಕ್ರಾಂತಿ ಕ್ರಾಂತಿ' ಎಂಬ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಗೃಹ ಸಚಿವರು ಅಂತರ ಕಾಯ್ದುಕೊಂಡರು. 'ಕ್ರಾಂತಿ ಎಂದರೆ ಏನು? ಅದರ ಬಗ್ಗೆ ನಾನು ಈಗ ಪ್ರತಿಕ್ರಿಯೆ ನೀಡಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ನಾನು ಈಗಾಗಲೇ ನಮ್ಮ ನಿಲುವು ತಿಳಿಸಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡಲಿದೆ" ಎಂದು ಸ್ಪಷ್ಟಪಡಿಸಿದರು.

ದಲಿತ ಸಿಎಂ ವಿಚಾರದಲ್ಲಿ ಮೌನಕ್ಕೆ ಶರಣಾದ ಸಚಿವರು

ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ದಲಿತ ಸಿಎಂ ಬದಲಾವಣೆ ಕುರಿತಾದ ಪ್ರಶ್ನೆಗಳಿಗೆ ಗೃಹ ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದರು. ಈ ಮೂಲಕ ಸೂಕ್ಷ್ಮ ರಾಜಕೀಯ ವಿಷಯಗಳ ಬಗ್ಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಅವರು ಎಚ್ಚರಿಕೆ ವಹಿಸಿದರು.