ಕಳೆದ ಮೂರು ವರ್ಷಗಳಲ್ಲಿ 'ಪಾಕಿಸ್ತಾನ್‌ ಜಿಂದಾಬಾದ್‌' ಘೋಷಣೆ ಕೂಗಿದವರ ವಿರುದ್ಧ ಆರು ಸ್ವಯಂ ಪ್ರೇರಿತ ದೂರು ದಾಖಲಿಸಿ, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ವಿಧಾನ ಪರಿಷತ್‌ನಲ್ಲಿ ತಿಳಿಸಿದ್ದಾರೆ. ಸಿ.ಟಿ. ರವಿ ಅವರ ಪ್ರಶ್ನೆಗೆ ಉತ್ತರಿಸಿದರು.

ವಿಧಾನ ಪರಿಷತ್‌ (ಡಿ.19): ಕಳೆದ ಮೂರು ವರ್ಷದಿಂದ ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗಿದವರ ಮೇಲೆ ಪೊಲೀಸರು ಆರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ. 

ಗುರುವಾರ ಬಿಜೆಪಿಯ ಸಿ.ಟಿ.ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಘೋಷಣೆ ಕೂಗಿದ ಸಂಬಂಧ 12 ದೂರುಗಳು ದಾಖಲಾಗಿದ್ದು, 5 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ. ಮೂರು ಪ್ರಕರಣಗಳ ತನಿಖೆ ನಡೆಯುತ್ತಿದೆ. ಒಂದು ಪ್ರಕರಣದಲ್ಲಿ ಸಿ ವರದಿ ಸಲ್ಲಿಕೆಯಾಗಿದೆ. ಒಂದು ಪ್ರಕರಣದಲ್ಲಿ ಎಫ್‌ಎಸ್‌ಎಲ್‌ ವರದಿ ಬಾಕಿ ಇದೆ ಎಂದರು.

61,299 ಸ್ವಯಂ ಪ್ರೇರಿತ ದೂರು ದಾಖಲು

ಕಳೆದ ಎರಡೂವರೆ ವರ್ಷಗಳಲ್ಲಿ ಪೊಲೀಸರು ವಿವಿಧ ಮಾನದಂಡ ಆಧರಿಸಿ 61,299 ದೂರುಗಳನ್ನು ಪೊಲೀಸರು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದಾರೆ. ಪ್ರಮುಖವಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾದ ಸಂದರ್ಭ, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟು ಮಾಡಿದ ಸಂದರ್ಭ, ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲಿ ಸೇರಿ ವಿವಿಧ ವಿಷಯಗಳ ಸಂಬಂಧ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು.

ದಾಖಲಿಸಿಕೊಂಡಿರುವ ಯಾವುದೇ ದೂರುಗಳನ್ನು ಹಿಂಪಡೆಲಿಲ್ದ. ದಾಖಲಿಸಿರುವ ಸ್ವಯಂ ಪ್ರೇರಿತ ದೂರುಗಳಲ್ಲಿ 57,646 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈ ಪೈಕಿ 3126 ಪ್ರಕರಣಗಳ ತನಿಖೆಯಲ್ಲಿವೆ ಎಂದು ಸಚಿವ ಡಾ.ಪರಮೇಶ್ವರ್‌ ವಿವರಿಸಿದರು.

- ಒಟ್ಟು ಸ್ವಯಂಪೇರಿತ 6 ಕೇಸ್‌ ದಾಖಲು

- ಎಂಎಲ್ಸಿ ಸಿ.ಟಿ.ರವಿ ಪ್ರಶ್ನೆಗೆ ಪರಂ ಉತ್ತರ