ಕಾಲ್ತುಳಿತ ಪ್ರಕರಣದ ಕುನ್ಹಾ ವರದಿ, ಸೌಮ್ಯಲತಾ ಅವರ ಎಸ್‌ಐಟಿ ನಿರ್ಗಮನ, ಸಿಎಂ ಮತ್ತು ಡಿಸಿಎಂ ದೆಹಲಿ ಭೇಟಿ, ಜಾತಿ ಸಮೀಕ್ಷೆ ಮತ್ತು ಆಂಧ್ರದ ಬಿಜೆಪಿ ಮುಖಂಡರ ಹತ್ಯೆ ಪ್ರಕರಣಗಳ ಕುರಿತು ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆಗಳು.

ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ಓಬಿಸಿ ಸಲಹಾ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (G Parameshwara) ತಿಳಿಸಿದ್ದಾರೆ. ಒಬಿಸಿ ಸಲಹಾ ಮಂಡಳಿಯ ಸಭೆ ದೆಹಲಿಯಲ್ಲಿ ನಡೆಯುತ್ತಿದೆ. ಆ ಸಭೆಯಲ್ಲಿ ಭಾಗವಹಿಸಲು ಸಿಎಂ ಮತ್ತು ಡಿಸಿಎಂ ಇಬ್ಬರೂ ದೆಹಲಿಗೆ ತೆರಳುತ್ತಿದ್ದಾರೆ. ನಮಗೆ ಆ ಸಭೆಗೆ ಯಾವುದೇ ಆಹ್ವಾನ ಬಂದಿಲ್ಲ ಎಂದಿದ್ದಾರೆ.

ಜಾತಿ ಸಮೀಕ್ಷೆಯ (Karnataka Caste Survey) ಕುರಿತು ಹೇಳಿಕೆ ನೀಡಿದ ಗೃಹ ಸಚಿವ ಪರಮೇಶ್ವರ್ ಸಮೀಕ್ಷೆ ಮಾಡಲು 16 ದಿನಗಳ ಕಾಲಾವಕಾಶ ಸಾಕು. ಇಂದಿನ ತಂತ್ರಜ್ಞಾನದಿಂದ ದ್ರುತವಾಗಿ ಸಮೀಕ್ಷೆ ನಡೆಸುವುದು ಸಾಧ್ಯ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಸಂಘರ್ಷವಿಲ್ಲ. ನಮ್ಮ ರಾಜ್ಯದ ಮಟ್ಟಿಗೆ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯ ಅರಿವುಗಾಗಿ ನಾವು ಈ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದಲ್ಲಿ ನಡೆದ ಇಬ್ಬರು ಬಿಜೆಪಿ ಮುಖಂಡರ ಹತ್ಯೆ ಪ್ರಕರಣದ ಕುರಿತು ಮಾತನಾಡಿದ ಅವರು, "ಈ ಪ್ರಕರಣವು ಆಂಧ್ರದಲ್ಲಿ ನಡೆದಿರುವುದರಿಂದ ತನಿಖೆಯನ್ನು ಆ ರಾಜ್ಯದ ಪೊಲೀಸರು ನಡೆಸುತ್ತಿದ್ದಾರೆ. ಆದರೆ ಹತ್ಯೆಯಾದವರು ಕರ್ನಾಟಕದವರೆಂಬ ಹಿನ್ನಲೆಯಲ್ಲಿ ಆಂಧ್ರ ಪೊಲೀಸರು ಇಲ್ಲಿ ಬಂದು ಸಹ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ಕೂಡ ಈ ಪ್ರಕರಣದ ವಿಚಾರದಲ್ಲಿ ಫಾಲೋಅಪ್ ನಿರ್ವಹಿಸುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕಾಲ್ತುಳಿತ ಪ್ರಕರಣ, ಕೊಹ್ಲಿ ಪಾತ್ರವಿದೆಯೇ? ಪರಮೇಶ್ವರ ಏನಂದ್ರು?

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಕುನ್ಹಾ ನೀಡಿರುವ ವರದಿ ಬಗ್ಗೆ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ. ನ್ಯಾಯಮೂರ್ತಿ ಕುನ್ಹಾ ಅವರು ನೀಡಿರುವ ಶಿಫಾರಸುಗಳನ್ನಾಧರಿಸಿ, ಅದರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಕ್ರಿಮಿನಲ್ ಪ್ರೊಸೀಜರ್ ಬಗ್ಗೆ ಕೂಡ ಅವರು ಕೆಲವು ಶಿಫಾರಸುಗಳನ್ನು ನೀಡಿದ್ದಾರೆ. ಆ ಭಾಗವನ್ನು ಕೂಡ ಸಂಪುಟದೊಳಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ.

ಕೊಹ್ಲಿ ಅವರ ಪಾತ್ರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರವಾಗಿ ಮಾತನಾಡಿದ ಅವರು, ನ್ಯಾಯಮೂರ್ತಿ ಕುನ್ಹಾ ಅವರ ವರದಿಯಲ್ಲಿ ಕೊಹ್ಲಿ ಅವರ ಬಗ್ಗೆ ನಿರ್ದಿಷ್ಟವಾಗಿ ಏನೂ ಉಲ್ಲೇಖವಿಲ್ಲ. ಆದರೆ ತಂಡದ ವರ್ತನೆ ಅಥವಾ ತಪಾಸಣೆಯ ಅಂಶಗಳು ಇದ್ದರೆ, ಅದನ್ನು ಸಂಪುಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಇದು ಒಬ್ಬ ವ್ಯಕ್ತಿಯ ವಿಚಾರವಲ್ಲ. ಇದು ತಂಡದ ಕಾರ್ಯಪದ್ಧತಿಯ ಬಗ್ಗೆ. ಯಾರ್ಯಾರು ಯಾವ ರೀತಿಯ ಪಾತ್ರವಹಿಸಿದ್ದಾರೆ ಎಂಬುದರ ಪ್ರಸ್ತಾಪ ವರದಿಯಲ್ಲಿ ಇದೆ ಎಂದು ಪರಮೇಶ್ವರ್ ಹೇಳಿದರು.

ಎಸ್‌ಐಟಿಯಿಂದ ಐಪಿಎಸ್ ಅಧಿಕಾರಿ ಸೌಮ್ಯಲತಾ ಹೊರಕ್ಕೆ

ಎಸ್‌ಐಟಿ (ವಿಶೇಷ ತನಿಖಾ ತಂಡ) ಸದಸ್ಯೆಯಾಗಿದ್ದ ಐಪಿಎಸ್ ಅಧಿಕಾರಿ ಸೌಮ್ಯಲತಾ ಅವರು ತಂಡದಿಂದ ಹೊರಗುಳಿಯಲಿದ್ದಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೌಮ್ಯಲತಾ ಅವರು ಎಸ್‌ಐಟಿ ತಂಡದಿಂದ ಹೊರಡುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನನಗೆ ಸಿಕ್ಕಿಲ್ಲ. ಆದರೆ ಅನಧಿಕೃತವಾಗಿ ಅವರು ಈ ಕುರಿತು ಪತ್ರ ಬರೆದಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೇನೆ. ವೈಯಕ್ತಿಕ ಕಾರಣ ಇದೆ ಹಾಗಾಗಿ ತಂಡದಿಂದ ಹೊರಗುಳಿಯುವ ಬಗ್ಗೆ ಅನ್‌ಅಫಿಷಿಯಲ್ ಆಗಿ ಮಾಹಿತಿ ಕೊಟ್ಟಿದ್ದಾರೆ. ಅವರನ್ನು ತಂಡದಿಂದ ರೀಪ್ಲೇಸ್ ಮಾಡಲಾಗುತ್ತೆ ಎಂದರು.