ಸಿಎಂ ಪತ್ನಿ ಮತ್ತು ಸಚಿವ ಬೈರತಿ ಸುರೇಶ್‌ಗೆ ಇಡಿ ನೋಟಿಸ್ ನೀಡಿರುವ ವಿಚಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇಡಿ ನೋಟಿಸ್‌ಗೆ ಸಂಬಂಧಿಸಿದಂತೆ ಕಾನೂನಿನ ಬಗ್ಗೆ ಮಾತನಾಡಲು ತಮಗೆ ಅರ್ಹತೆ ಇಲ್ಲ ಎಂದು ಹೇಳಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳಿದ್ದಾರೆ.

ಯಾದಗಿರಿ (ಜ.27): ನಾಳೆ ವಿಚಾರಣೆಗೆ ಹೋಗ್ತಾರೋ ಇಲ್ವೋ ನನಗೆ ಗೊತ್ತಿಲ್ಲ ಅವರಿಗೆ ಇಡಿ ನೋಟಿಸ್ ಕೊಟ್ಟಿರೋ ಮಾಹಿತಿ ಇದೆ. ನೋಟಿಸ್ ಕೊಟ್ಟಿದ್ರೆ ಅದಕ್ಕೆ ಅವರೇ ಉತ್ತರವನ್ನು ಕೊಡ್ತಾರೆ ಎಂದು ಗೃಹ ಸಚಿವ ಪರಮೇಶ್ವರ ಅವರು ಪ್ರತಿಕ್ರಿಯಿಸಿದರು.

ಇಂದು ಯಾದಗಿರಿ ಭೇಟಿ ನೀಡಿದ್ದ ವೇಳೆ ಸಿಎಂ ಪತ್ನಿ, ಸಚಿವ ಬೈರತ್ತಿ ಸುರೇಶ್ ಗೆ ಇ.ಡಿ ನೋಟಿಸ್ ವಿಚಾರ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇ.ಡಿ.ಯವರು ಏನ್ ಅಪೇಕ್ಷೆ ಪಡ್ತಾರೆ ಅದಕ್ಕೆ ತಕ್ಕ ಉತ್ತರ ಕೊಡ್ತಾರೆ‌. ಕಾನೂನಿನ ಬಗ್ಗೆ ಮಾತಾಡೋಕೆ ನಮ್ಗೆ ಅರ್ಹತೆಯಿಲ್ಲ. ಇ.ಡಿ ನೋಟೀಸ್ ಸೇರಿದಂತೆ ಬೇರೆ ಬೇರೆ ಸಂಸ್ಥೆಗಳಿಂದ ತನಿಖೆ ನಡೆಯುತ್ತಿದೆ. ಹೀಗಾಗಿ ಇದರ ಬಗ್ಗೆ ಮಾತನಾಡೋಕೆ ಆಗೋಲ್ಲ. ಇದೊಂದು ರಾಜಕೀಯ ಪ್ರೇರಿತ ಅಂತಾ ಹಿಂದೆ ನಮ್ಮ ಪಕ್ಷದ ಅಧ್ಯಕ್ಷರೇ ಹೇಳಿದ್ದಾರೆ. ಮುಡಾ ಪ್ರಕರಣದಲ್ಲಿ ಇಡಿ ನೋಟಿಸ್ ರಾಜಕೀಯ ಪ್ರೇರಿತ ಅಂತಾ ಮೊದಲಿನಿಂದಲೂ ಹೇಳ್ತಾ ಬಂದಿದ್ದೇವೆ. ಹೀಗಾಗಿ ಈಗಲೂ ಅದನ್ನೇ ಹೇಳ್ತೇವೆ ಎಂದರು.

Watchಹೌದು ಪತ್ನಿಗೆ ಇ.ಡಿ ನೋಟಿಸ್ ಬಂದಿದೆ ಎಂದ CM

300 ಕೋಟಿ ರೂ. ಅಷ್ಟು ಹಣ ಆ ಸೈಟ್ ಗಳಲ್ಲಿ ಜನರೇಟ್ ಆಗಬಹುದು ಅಂತ ಹೇಳಲಾಗಿದೆ. 70-80 ಜನರ ಪಟ್ಟಿ ಮಾಡಿದ್ದಾರೆ, ಅದರಲ್ಲಿ ಸಿಎಂ ಹೆಸರಿದಿಯಾ‌‌?ಅವರ ಪತ್ನಿ ಹೆಸರಿದೆಯಾ ಏನೂ ಇಲ್ಲ ಎಂದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು.

ಸಿಎಂ ಪತ್ನಿಗೆ ನೋಟೀಸ್ ಕೊಟ್ಟಿದ್ದಕ್ಕೆ ಡಿಕೆಶಿಗೆ ಖುಷಿ ಕೊಟ್ಟಿದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು. ಇದೇ ವೇಳೆ ಉಡುಪಿಯ ಪ್ರತಿಷ್ಠಿತ ಶಾಲೆಗೆ ಬಾಂಬ್ ಬೆದರಿಕೆ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ, 'ದೇಶದಲ್ಲಿ ಸಾವಿರಾರು ಶಾಲೆಗಳಿಗೆ ಈ ರೀತಿ ಕರೆಗಳು ಬರುತ್ತಿವೆ. ರಾಜ್ಯದಲ್ಲಿ ಹಿಂದೆನೂ ಬಂದಿವೆ. ಈಗಲೂ ಬರ್ತಿವೆ. ನಾವು ಪರಿಶೀಲನೆ ಮಾಡ್ತೇವೆ. ಅವರು ಎಲ್ಲೋ ಕುಳಿತುಕೊಂಡು ಪೋಸ್ಟ್ ಮಾಡ್ತಾರೆ. ಅದರ ಬಗ್ಗೆ ನಾವೂ ಹಗುರವಾಗಿ ತೆಗೆದುಕೊಳ್ಳದೆ ಗಂಭೀರವಾಗಿ ಪರಿಗಣಿಸುತ್ತೇವೆ. ಎಂದರು. ಯಾದಗಿರಿ ಜಿಲ್ಲೆಯಲ್ಲಿ ಕೆಲ ಪೊಲೀಸ್ ಠಾಣೆಗಳನ್ನ ಮಾಡುವಂತೆ ಮನವಿ ಬಂದಿದೆ ಪರಿಶೀಲನೆ ಮಾಡಿ ಎಸ್ಪಿ ಅವರಿಂದ ಪ್ರಸ್ತಾವನೆ ಪಡೆಯುತ್ತೇನೆ ಎಂದರು.