ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಲಾದ 42,345 ಮನೆಗಳ ಹಸ್ತಾಂತರ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯಲಿದೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಭಾಗವಹಿಸುವ ಈ ಬೃಹತ್ ಸಮಾರಂಭ, ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಾಜ್ಯಾದ್ಯಂತ ನಿರ್ಮಿಸಿರುವ 42,345 ಮನೆಗಳ ಹಸ್ತಾಂತರ ಜ. 24ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಂಕ್ಷಿ ಸಮಾರಂಭಕ್ಕೂ ಹುಬ್ಬಳ್ಳಿ ವೇದಿಕೆಯಾಗಲಿದೆ. ಜತೆಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಮನೆಗಳ ಹಸ್ತಾಂತರ ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿದೆ. ಎಐಸಿಸಿ ವರಿಷ್ಠ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ವಾಣಿಜ್ಯನಗರ ನವವಧುವಿನಂತೆ ಸಿಂಗಾರಗೊಂಡಿದೆ.
ಮನೆಗಳ ಹಸ್ತಾಂತರ ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಕ್ಕೆ ನಡೆಯಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ರಾಮಲಿಂಗಾರೆಡ್ಡಿ ಸೇರಿದಂತೆ ಸಚಿವ ಸಂಪುಟದ ಸಹದ್ಯೋಗಿಗಳು, ಶಾಸಕರು, ಜನಪ್ರತಿನಿಧಿಗಳೆಲ್ಲರೂ ಪಾಲ್ಗೊಳ್ಳಲಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು?:
2016-17ರಲ್ಲಿ ಮಂಜೂರಾಗಿರುವ 1,80,253 ಮನೆಗಳ ಪೈಕಿ ಮೊದಲ ಹಂತದಲ್ಲಿ ಕಳೆದ ವರ್ಷ 36,789 ಮನೆ ಹಸ್ತಾಂತರಿಸಲಾಗಿತ್ತು. ಇದೀಗ 2ನೆಯ ಹಂತದಲ್ಲಿ ಹುಬ್ಬಳ್ಳಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ 42,345 ಮನೆಗಳ ಹಸ್ತಾಂತರ ನಡೆಯಲಿದೆ. ಇನ್ನೆರಡು ತಿಂಗಳಲ್ಲಿ ಮತ್ತೆ 30 ಸಾವಿರ ಮನೆ ಹಸ್ತಾಂತರಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ತಿಳಿಸಿದ್ದಾರೆ. ಹುಬ್ಬಳ್ಳಿಯಲ್ಲಿನ 1008 ಹಾಗೂ ಹಾವೇರಿ, ಗದಗ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳಲ್ಲಿನ ಹಕ್ಕುಪತ್ರಗಳನ್ನು ಇಲ್ಲೇ ವಿತರಿಸಲಾಗುತ್ತಿದೆ. ಇದಕ್ಕಾಗಿ 5 ಕೌಂಟರ್ ತೆರೆಯಲಾಗಿದೆ.
ಬೃಹತ್ ವೇದಿಕೆ:
ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳಲಿದ್ದು, ಇದಕ್ಕಾಗಿ 18 ಎಕರೆ ಪ್ರದೇಶದಲ್ಲಿ ಜರ್ಮನ್ ಮಾದರಿಯಲ್ಲಿ ಬೃಹತ್ ಪೆಂಡಾಲ್ ಅಳವಡಿಸಲಾಗಿದೆ. ಬೃಹತ್ ವೇದಿಕೆ, ಎಲ್‌ಇಡಿ ಅಳವಡಿಕೆ, ಆಸನಗಳ ವ್ಯವಸ್ಥೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ, ಮುಖಂಡರ ಬ್ಯಾನರ್ ಬಂಟಿಂಗ್ಸ್, ಪಕ್ಷದ ಬಾವುಟಗಳು ರಾರಾಜಿಸುತ್ತಿವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರ ಭಾವಚಿತ್ರವುಳ್ಳ ಆಕರ್ಷಕ ಹೋಲ್ಡಿಂಗ್ಸ್‌ಗಳು, ಪ್ಲೆಕ್ಸ್ ಬೋರ್ಡ್, ದೊಡ್ಡ ದೊಡ್ಡ ಕಟೌಟ್‌ಗಳು ಎಲ್ಲೆಡೆ ಗಮನ ಸೆಳೆಯುತ್ತಿದೆ.
ವಿಪಕ್ಷಗಳಿಗೆ ಉತ್ತರ:
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರತಿಪಕ್ಷಗಳು ಟೀಕಿಸುತ್ತವೆ. ಗ್ಯಾರಂಟಿಯಿಂದಾಗಿ ಹಣಕಾಸಿನ ಸಮಸ್ಯೆಯಾಗಿದ್ದರೆ ಇಷ್ಟೊಂದು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿತ್ತಾ? ಎಂಬೆಲ್ಲ ಪ್ರಶ್ನೆಗಳಿಗೆ ಮನೆ ಹಂಚಿಕೆ ಕಾರ್ಯಕ್ರಮ ಉತ್ತರ ನೀಡಲಿದೆ ಎಂಬುದು ಕಾಂಗ್ರೆಸ್ಸಿಗರ ವಾದ.
ಫಲಾನುಭವಿಗಳಲ್ಲಿ ಸಂತಸ:
ಎಷ್ಟೋ ವರ್ಷ ಮನೆಯಿಲ್ಲದೇ, ರಸ್ತೆ ಅಕ್ಕಪಕ್ಕ, ರಾಜಕಾಲುವೆ ಬದಿಗಳಲ್ಲಿ ಟೆಂಟ್ ಹಾಕಿಕೊಂಡು ಜೀವನ ಕಳೆದವರಿಗೆ ಸ್ವಂತ ಸೂರಿನ ಕನಸನ್ನು ಕಾಂಗ್ರೆಸ್ ಸಾಕಾರಗೊಳಿಸುತ್ತಿದೆ ಎಂದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ಸಾಧನೆಗೆ ಮನೆ ಹಂಚಿಕೆ ಕಾರ್ಯಕ್ರಮ ಹೊಸ ಭಾಷ್ಯ ಬರೆಯಲಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಭಾಳ ಖುಷಿ ಆಗೈತ್ರಿ.. ಇಸ್ಟ್ ವರ್ಸಾ ಮನಿ ಸಿಗುತ್ತೋ ಇಲ್ವೋ ಅನಿಸಿತ್ತು. ಗುಡಿಸಲ ಹಾಕ್ಕೊಂಡು ಎಲ್ಲೆಲ್ಲೋ ಇದ್ದಿವಿ. ಈಗ ನಮ್ದ ಮನಿ ಆದಂಗ ಆಯ್ತು. ಹಾಲು ಕುಡದಂಗ ಸಂತೋಸಾ ಆಗೈತ್ರಿ...
ಮಂಜವ್ವ, ಫಲಾನುಭವಿ


