ಮಾರ್ಚ್ 17ಕ್ಕೆ ಕರ್ನಾಟಕ ಬಂದ್‌ಗೆ ಮುಸ್ಲಿಂ ಧರ್ಮ ಗುರುಗಳ ಕರೆ ಹಿಜಾಬ್ ನಿಷೇಧಿಸಿ ಕರ್ನಾಟ ಸರ್ಕಾರ ಆದೇಶ ಎತ್ತಿಡಿದ ಹೈಕೋರ್ಟ್ ಕರ್ನಾಟಕ ಕೋರ್ಟ್ ತೀರ್ಪು ವಿರೋಧಿಸಿ ಬಂದ್‌ಗೆ ಕರೆ  

ಬೆಂಗಳೂರು(ಮಾ.16): ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸೂಚಿಸುವ ಸಮವಸ್ತ್ರ ಪಾಲಿಸಬೇಕು. ಇಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ. ಈ ಕುರಿತು ಕರ್ನಾಟಕ ಸರ್ಕಾರ ನೀಡಿದ ಆದೇಶವನ್ನು ಎತ್ತಿಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಈ ಮೂಲಕ ಕಳೆದ 3 ತಿಂಗಳ ವಿವಾದಕ್ಕೆ ತೆರೆ ಎಳೆದಿತ್ತು. ಆದರೆ ಈ ತೀರ್ಪು ಮುಸ್ಲಿಂ ಸಮುದಾಯವನ್ನು ಕೆರಳಿಸಿದೆ. ಇದೀಗ ಕರ್ನಾಟಕ ಹೈಕೋರ್ಟ್ ತೀರ್ಪಿನ ವಿರುದ್ಧ ಮುಸ್ಲಿಂ ಸಮುದಾಯ ಮಾರ್ಚ್ 17ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ಕರ್ನಾಟಕ ಹೈಕೋರ್ಟ್ ತೀರ್ಪಿನಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದೆ. ನಮ್ಮ ಧಾರ್ಮಿಕ ನಂಬಿಕೆಯನ್ನು ಪ್ರಶ್ನಿಸಿದೆ. ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗಿದೆ. ಹೀಗಾಗಿ ಈ ತೀರ್ಪಿನ ವಿರುದ್ದ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದೇವೆ ಎಂದು ಅಮೀರ್ ಇ ಶರಿಯತ್ ಕರ್ನಾಟಕದ ಮೌಲಾನಾ ಸಾಗಿರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ಬಂದ್ ಶಾಂತಿಯುತವಾಗಿರಲಿದೆ. ಎಲ್ಲಾ ಮುಸ್ಲಿಂ ಯುವ ಸಮದಾಯ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಒತ್ತಾಯಪೂರ್ವಕವಾಗಿ ಯಾವುದೇ ಅಂಗಡಿಗಳನ್ನು ಮುಚ್ಚುವುದಿಲ್ಲ ಎಂದು ಅಹಮ್ಮದ್ ಖಾನ್ ಹೇಳಿದ್ದಾರೆ. ನಮಗೆ ಆಗಿರುವ ಅನ್ಯಾಯದ ವಿರುದ್ಧ ಈ ಪ್ರತಿಭಟನೆ ಎಂದು ಮೌಲಾನಾ ಹೇಳಿದ್ದಾರೆ.

ಹಿಜಾಬ್‌ ಬೇಕೆಂದು ಕೋರ್ಟ್‌ ಮೇಟ್ಟಿಲೇರಿದ್ದ ವಿದ್ಯಾರ್ಥಿನಿಯರು ಹೇಳಿದ್ದಿಷ್ಟು

ಹಿಜಾಬ್ ನಿಷೇಧ:
ಶಾಲಾ ಕಾಲೇಜಿನ ತರಗತಿಗಳಿಗೆ ಹಿಜಾಬ್‌ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ 2022 ಫೆ.5ರಂದು ಹೊರಡಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಜತೆಗೆ, ಹಿಜಾಬ್‌ ಧಾರಣೆ ಇಸ್ಲಾಂ ಧಾರ್ಮಿಕ ಆಚರಣೆಯ ಅತ್ಯವಶ್ಯಕ ಭಾಗವಲ್ಲ ಎಂಬ ಮಹತ್ವದ ವ್ಯಾಖ್ಯಾನ ಮಾಡಿದೆ. ಹಿಜಾಬ್‌ ಧರಿಸಿ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವುದರ ಜತೆಗೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ನಿರ್ಧರಿಸಿದ ಸಮವಸ್ತ್ರ ಧರಿಸಬೇಕು. ಸಮವಸ್ತ್ರ ನಿಗದಿ ಮಾಡದ ಶಾಲಾ ಕಾಲೇಜುಗಳಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಭಂಗ ಬರದಂತಹ ವಸ್ತ್ರ ಧರಿಸಬೇಕು ಎಂದು ರಾಜ್ಯ ಸರ್ಕಾರ ನಿರ್ದೇಶಿಸಿ ಹೊರಡಿಸಿದ್ದ ಆದೇಶವನ್ನು ಊರ್ಜಿತಗೊಳಿಸಿದೆ. 

ನಮಗೆ ಹಿಜಾಬ್ ಮುಖ್ಯ, ಪರೀಕ್ಷೆ ಅಲ್ಲ ಎಂದು ಎಕ್ಸಾಂ ಬಿಟ್ಟು ಹೊರನಡೆದ ಬಾಲಕಿಯರು!

ಹಿಜಾಬ್‌: ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಗೆ ಅರ್ಜಿ
ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿಯೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿ ಪರ ವಕೀಲ ಅನ್ನಾಸ್‌ ತನ್ವೀರ್‌, ಮೇಲ್ಮನವಿ ಸಲ್ಲಿಸಿದ್ದು, ‘ಹಿಜಾಬ್‌ ಧರಿಸುವ ಹಕ್ಕು ಸಂವಿಧಾನದ 21 ನೇ ಪರಿಚ್ಛೇದ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್‌ ವಿಫಲವಾಗಿದೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಅಡಿಯಲ್ಲಿ ರಚಿಸಲಾದ ನಿಯಮಗಳು ಕಾಲೇಜು ವಿದ್ಯಾರ್ಥಿಗಳು ಯಾವುದೇ ಕಡ್ಡಾಯ ಸಮವಸ್ತ್ರವನ್ನು ಧರಿಸಬೇಕೆಂದು ಸೂಚಿಸಿಲ್ಲ. ಅಲ್ಲದೇ ವಿದ್ಯಾರ್ಥಿಯು ಸಮವಸ್ತ್ರವನ್ನು ಧರಿಸದೇ ಇದ್ದಲ್ಲಿ ಆತನಿಗೆ ನೀಡಬಹುದಾದ ಶಿಕ್ಷೆಯ ಬಗ್ಗೆಯೂ ನಿಯಮಾವಳಿಗಳಲ್ಲಿ ಯಾವುದೇ ಉಲ್ಲೇಖಗಳಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್‌ ಪರಿಗಣಿಸಿಲ್ಲ’ ಎಂದು ತಿಳಿಸಲಾಗಿದೆ.

ತೀರ್ಪಿನ ಬಗ್ಗೆ ಪ್ರತಿಕ್ರಿಯೆಗೆ ಮುಸ್ಕಾನ್‌ ನಕಾರ
ಹಿಜಾಬ್‌-ಕೇಸರಿ ಶಾಲು ಜಟಾಪಟಿಯ ನಡುವೆ ಅಲ್ಲಾ ಹು ಅಕ್ಬರ್‌ ಎಂದು ಕೂಗಿ ಒಂದೇ ದಿನ ದೇಶಾದ್ಯಂತ ಸುದ್ದಿಯಾಗಿದ್ದ ಪಿಇಎಸ್‌ ಪದವಿ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್‌, ಹಿಜಾಬ್‌ ಕುರಿತು ಹೈಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದ ಬಳಿಕ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದಳು. ಈ ವೇಳೆ ಮಗಳ ಪರವಾಗಿ ಮಾತನಾಡಿದ ಆಕೆಯ ತಂದೆ ಮಹಮದ್‌ ಹುಸೇನ್‌ ಶಿಕ್ಷಣ ಮತ್ತು ಧರ್ಮ ನಮ್ಮೆರಡು ಕಣ್ಣುಗಳಿದ್ದಂತೆ. ಎರಡೂ ನಮಗೆ ಮುಖ್ಯ. ಇವೆರಡನ್ನೂ ಒಟ್ಟಿಗೆ ತೆಗೆದುಕೊಂಡು ನಡೆಯಬೇಕೆನ್ನುವುದು ನಮ್ಮ ಆಶಯ.ಎಂದರು