Karnataka Hijab Verdict ನಮಗೆ ಹಿಜಾಬ್ ಮುಖ್ಯ, ಪರೀಕ್ಷೆ ಅಲ್ಲ ಎಂದು ಎಕ್ಸಾಂ ಬಿಟ್ಟು ಹೊರನಡೆದ ಬಾಲಕಿಯರು!
ಕರ್ನಾಟಕ ಹೈಕೋರ್ಟ್ ನಿಂದ ಹಿಜಾಬ್ ಕುರಿತಾಗಿ ಮಹತ್ವದ ತೀರ್ಪು
ಯಾದಗಿರಿ ಕಾಲೇಜಿನಲ್ಲಿ ಕೋರ್ಟ್ ತೀರ್ಪು ಪಾಲಿಸುವಂತೆ ಹೇಳಿದ ಶಿಕ್ಷಕರು
ಪರೀಕ್ಷೆಯನ್ನೇ ಬಿಟ್ಟು ಹೊರನಡೆದ ಮಕ್ಕಳು
ಯಾದಗಿರಿ (ಮಾ.15): ಶಾಲೆಗಳಲ್ಲಿ ಸಮವಸ್ತ್ರವೇ ಕಡ್ಡಾಯ, ಹಿಜಾಬ್, ಕೇಸರಿ ಶಾಲು ಯಾವುದೂ ಕೂಡ ಅಗತ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ತೀರ್ಪು ನೀಡಿದ ಬೆನ್ನಲ್ಲಿಯೇ ಯಾದಗಿರಿ (Yadagiri) ಕಾಲೇಜಿನಲ್ಲಿ ಇದನ್ನು ಜಾರಿ ಮಾಡಲಾಗಿದೆ. ಕೋರ್ಟ್ ಈ ಕುರಿತಾಗಿ ತೀರ್ಪು ನೀಡಿದೆ, ಅದನ್ನು ನೀವು ಪಾಲಿಸಬೇಕು ಎಂದು ಅಲ್ಲಿನ ಹಿಬಾಜ್ ಧರಿಸಿದ ಬಾಲಕಿಯರಿಗೆ ಹೇಳಿದರೆ, ಬಾಲಕಿಯರು ಪರೀಕ್ಷೆಯನ್ನು ಮಧ್ಯದಲ್ಲೇ ಬಿಟ್ಟು ಹೊರನಡೆದಿದ್ದಾರೆ.
ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಸುರಪುರ (Surapura) ತಾಲೂಕು ಕೆಂಬಾವಿ (Kembhavi) ಸರಕಾರಿ ಪಿಯು ಕಾಲೇಜಿನ (Govt PU College) ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದಾರೆ. ಮುಂಬರುವ ಪರೀಕ್ಷೆಗಳ ತಯಾರಿಗೆ ಸಂಬಂಧಪಟ್ಟಂತೆ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲಾಗುತ್ತಿತ್ತು. ಆದರೆ ಹೈಕೋರ್ಟ್ ತೀರ್ಪು ಕೇಳಿದ ಕೂಡಲೇ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಮಾಹಿತಿ ಪ್ರಕಾರ ಈ ವಿದ್ಯಾರ್ಥಿಗಳ ಪರೀಕ್ಷೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ನಡೆಯಬೇಕಿತ್ತು. ಆದರೆ, ಪರೀಕ್ಷೆಯ ಮಧ್ಯದಲ್ಲಿಯೇ ಹೊರ ನಡೆಯುವ ಮೂಲಕ ಹೈಕೋರ್ಟ್ ತೀರ್ಪಿಗೆ ಪ್ರತಿಭಟನೆ ನಡೆಸಿದ್ದಾರೆ.
ಈ ಕುರಿತಾಗಿ ನಾವು ನಮ್ಮ ಪೋಷಕರೊಂದಿಗೆ ಮಾತನಾಡಲಿದ್ದೇವೆ. ಹಿಜಾಬ್ ಧರಿಸದೇ ಶಾಲೆಗೆ ಹೋಗಬಹುದು ಎಂದು ಅವರು ಒಪ್ಪಿಗೆ ನೀಡಿದರೆ ಮಾತ್ರವೇ ತರಗತಿಗಳಿಗೆ ಬರುತ್ತೇವೆ. ಅಲ್ಲಿಯವರೆಗೂ ಬರುವುದಿಲ್ಲ. ಕೇವಲ ಹಿಜಾಬ್ ಅನ್ನು ಧರಿಸಿ ಮಾತ್ರವೇ ನಾವು ಪರೀಕ್ಷೆಯನ್ನು ನೀಡುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹಿಜಾಬ್ ತೆಗೆದು ಬರಬೇಕು ಎಂದು ಹೇಳಿದರೆ, ನಾವು ಪರೀಕ್ಷೆಯನ್ನೇ ನೀಡುವುದಿಲ್ಲ ಎಂದಿದ್ದಾರೆ.
ಉಡುಪಿಯ ( Udupi ) ಕಾಲೇಜಿನಲ್ಲಿ ಮೊದಲಿಗೆ ಆರಂಭಗೊಂಡ ಈ ಹಿಜಾಬ್ ವಿವಾದ ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿತ್ತು. ಮೊದಲಿಗೆ ಧಾರ್ಮಿಕ ಸಂಘಟನೆಗಳ ಬೆಂಬಲ ಪಡೆದ ವಿವಾದಕ್ಕೆ ಬಳಿಕ ರಾಜಕೀಯ ಬಣ್ಣವೂ ಮೆತ್ತಿಕೊಂಡಿತು. ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಯ್ತು. ಅಷ್ಟುಸಾಲದೆಂಬಂತೆ ನೊಬೆಲ್ ಪುರಸ್ಕೃತೆ ಮಲಾಲಾ ಮೊದಲಾದವರು ಇದರಲ್ಲಿ ಮೂಗು ತೂರಿಸಿದ ಪರಿಣಾಮ, ವಿವಾದ ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಯ್ತು.
Karnataka Hijab Verdict: ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ!
ಫೆ.10ರಂದು ಮೊದಲ ಬಾರಿಗೆ ಅರ್ಜಿ ವಿಚಾರಣೆ ನಡೆಸಿದ್ದ ಪೂರ್ಣಪೀಠ ಸುದೀರ್ಘ ವಾದ ಆಲಿಸಿದ ತರುವಾಯ, ಹಿಜಾಬ್-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ. ಈ ಆದೇಶವು ಸಮವಸ್ತ್ರ ನಿಗದಿ ಪಡಿಸಿ ವಸ್ತ್ರ ಸಂಹಿತೆ ವಿಧಿಸಿರುವ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮಧ್ಯಂತರ ಆದೇಶ ನೀಡಿತ್ತು. ನಂತರ 10 ದಿನಗಳ ಕಾಲ ಸತತವಾಗಿ ವಾದ-ಪ್ರತಿವಾದ ಆಲಿಸಿ ಅಂತಿಮವಾಗಿ ಫೆ.25ರಂದು ತೀರ್ಪು ಕಾಯ್ದಿರಿಸಿತ್ತು.
Karnataka Hijab Row ತೀರ್ಪನ್ನು ಒಪ್ಪದೇ ಇರುವುದು ಕೂಡ ನನ್ನ ಹಕ್ಕು ಎಂದ ಅಸಾದುದ್ದೀನ್ ಓವೈಸಿ!
ಹಿಜಾಬ್ ತೀರ್ಪು ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಅಥವಾ ಪ್ರತಿಭಟನೆ ನಿರ್ಬಂಧಿಸಲಾಗಿದೆ. ನಗರದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ. ಮಾ.15ರ ಮಂಗಳವಾರ ಬೆಳಗ್ಗೆಯಿಂದ 23ರ ರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇದೇ ವಿಚಾರವಾಗಿ ಈ ಹಿಂದೆ ರಾಜ್ಯದ ಕೆಲವು ಕಡೆ ಅಶಾಂತಿ ಪರಿಸ್ಥಿತಿ ನೆಲೆಸಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಸ್‌್ತ ವ್ಯವಸ್ಥೆ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.