ಬೆಂಗಳೂರು(ಜ.01): ರಾಜ್ಯದಲ್ಲಿ 2020 ವರ್ಷದ ಕೊನೆಯ ತಾಸುಗಳಲ್ಲಿ ಭರ್ಜರಿ ಮದ್ಯ ವಹಿವಾಟು ನಡೆದಿದ್ದು ಗುರುವಾರ ಸಂಜೆ ವೇಳೆಗೆ ಒಂದೇ ದಿನದಲ್ಲಿ ಬರೋಬ್ಬರಿ 150 ಕೋಟಿ ರು. ಮದ್ಯ ಮಾರಾಟವಾಗಿದೆ.

ಇದು ಕಳೆದ ಎರಡು ವರ್ಷಗಳಲ್ಲೇ ವರ್ಷದ ಕೊನೆಯ ದಿನದ ಅತ್ಯಧಿಕ ವಹಿವಾಟು ಎಂದು ಅಬಕಾರಿ ಇಲಾಖೆ ತಿಳಿಸಿದ್ದು, ಈ ಮೂಲಕ ಕಹಿ ಅನುಭವಗಳ 2020 ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಮದ್ಯ ಪ್ರಿಯರು ಎಂದಿಗಿಂತಲೂ ಹೆಚ್ಚಾಗಿಯೇ ಭರ್ಜರಿ ಮದ್ಯಾರಾಧನೆ ನಡೆಸಿದರು.

 

ರೂಪಾಂತರಿ ಕೊರೋನಾ ಕಾರಣಕ್ಕಾಗಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸಾಕಷ್ಟುನಿರ್ಬಂಧಗಳನ್ನು ವಿಧಿಸಲಾಗಿತ್ತು. ಡಿ.31 ರಂದು ಸಂಜೆ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಾಗಿ ರಾತ್ರಿ ಪಾರ್ಟಿಗಳಿಗೆ ಬೆಳಗ್ಗೆಯಿಂದಲೇ ಮದ್ಯ ಖರೀದಿ ಸಿದ್ಧತೆಯಲ್ಲಿ ತೊಡಗಿದ್ದ ಮದ್ಯ ಪ್ರಿಯರು ಗುರುವಾರ ಸಂಜೆ 5.15 ರ ವೇಳೆಗೆ ಬರೋಬ್ಬರಿ 150 ಕೋಟಿ ರು. ಮದ್ಯ ಖರೀದಿಸಿದ್ದಾರೆ. ಇನ್ನು ಮದ್ಯದ ಮಳಿಗೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ತಡರಾತ್ರಿವರೆಗೂ ತೆರೆದಿದ್ದು ವಹಿವಾಟು 250 ಕೋಟಿಗೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

3.96 ಲಕ್ಷ ಕೇಸ್‌ ವಹಿವಾಟು:

ಸಂಜೆ 5.15ರ ವೇಳೆಗೆ ಅಬಕಾರಿ ಇಲಾಖೆ ಪಟ್ಟಿಯಂತೆ 120.21 ಕೋಟಿ ರು. ಮೌಲ್ಯದ 2.23 ಲಕ್ಷ ಕೇಸ್‌ (ಭಾರತೀಯ ಮದ್ಯ) ಹಾಗೂ 30.73 ಕೋಟಿ ರು. ಮೌಲ್ಯದ 1.73 ಲಕ್ಷ ಕೇಸ್‌ ಬಿಯರ್‌ ವಟಿವಾಟು ನಡೆದಿದೆ.

2018 ಕೊನೆಯ ದಿನ 82.02 ಕೋಟಿ ರು., 2019ರಲ್ಲಿ 119 ಕೋಟಿ ರು. ವಹಿವಾಟು ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಕನಿಷ್ಠ 30 ಕೋಟಿ ರು. ವಹಿವಾಟು ಏರಿಕೆಯಾಗಿದೆ. ಗುರುವಾರ ತಡರಾತ್ರಿ ವೇಳೆಗೆ ಇದು ಮತ್ತಷ್ಟುಹೆಚ್ಚಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ವರ್ಷ: ಕೆಲವು ಮೊಬೈಲ್‌ಗಳಲ್ಲಿ ವಾಟ್ಸಪ್‌ ಸ್ಥಗಿತ, ಇಂದಿನಿಂದ ಏನೇನು ಬದಲಾಗುತ್ತೆ...? ಇಲ್ಲಿ ನೋಡಿ

ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಹೊಟೇಲ್‌, ರೆಸ್ಟೋರೆಂಟ್‌, ಕ್ಲಬ್‌ ಮತ್ತು ಪಬ್‌ಗಳಲ್ಲಿ ಸಾಕಷ್ಟುನಿರ್ಬಂಧಗಳನ್ನು ವಿಧಿಸಲಾಗಿದೆ. ಮೊದಲೇ ಬುಕ್‌ ಮಾಡಿಕೊಂಡವರಿಗೆ ಮಾತ್ರ ಹೋಟೆಲ್‌ಗಳಲ್ಲಿ ಅನುಮತಿಸಬೇಕು. ಕ್ಲಬ್‌ಗಳಲ್ಲಿ ಸದಸ್ಯರಿಗೆ ಮಾತ್ರ ಅವಕಾಶ ನೀಡಬೇಕು ಎಂಬಿತ್ಯಾದ ಷರತ್ತುಗಳನ್ನು ವಿಧಿಸಲಾಗಿದೆ. ಆದರೂ ಇದು ಮದ್ಯ ಮಾರಾಟದ ಮೇಲೆ ಯಾವುದೇ ರೀತಿಯ ಪರಿಣಾಮವೂ ಬೀರಿಲ್ಲ. ಪರಿಣಾಮ ಅಬಕಾರಿ ಇಲಾಖೆಗೆ ಆದಾಯ ಹರಿದು ಬಂದಿದೆ.