ಕೊಂಬೆ ಬಿದ್ದು ಚಾಲಕ ಮೃತಪಟ್ಟರೂ ವಿಮೆ ಹಣ ಕೊಡ್ಬೇಕು: ಹೈಕೋರ್ಟ್
ವಾಹನ ಚಾಲನೆ ವೇಳೆ ಮರದ ಕೊಂಬೆ ಬಿದ್ದು ಚಾಲಕ ಸಾವನ್ನಪ್ಪಿದರೆ ಅದನ್ನು ಅಪಘಾತವೆಂದು ಪರಿಗಣಿಸಿ ಮೃತನ ಕುಟುಂಬದವರಿಗೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಬೆಂಗಳೂರು (ಅ.18): ವಾಹನ ಚಾಲನೆ ವೇಳೆ ಮರದ ಕೊಂಬೆ ಬಿದ್ದು ಚಾಲಕ ಸಾವನ್ನಪ್ಪಿದರೆ ಅದನ್ನು ಅಪಘಾತವೆಂದು ಪರಿಗಣಿಸಿ ಮೃತನ ಕುಟುಂಬದವರಿಗೆ ವಿಮಾ ಕಂಪನಿ ಪರಿಹಾರ ಪಾವತಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಬೆಳಗಾವಿಯಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮರದ ಕೊಂಬೆಯೊಂದು ತಲೆ ಮೇಲೆ ಬಿದ್ದು ವ್ಯಕ್ತಿಯೊರ್ವ ಸಾವನ್ನಪ್ಪಿದ ಪ್ರಕರಣದಲ್ಲಿ ಪರಿಹಾರ ಪಾವತಿಸುವಂತೆ ನ್ಯಾಯಾಧಿಕರಣದ ಆದೇಶ ಪ್ರಶ್ನಿಸಿ ವಿಮಾ ಕಂಪನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ಮಾಡಿದೆ.
ಮರದ ಕೊಂಬೆ ಬಿದ್ದು ಚಾಲಕ ಸಾವನ್ನಪ್ಪಿದ್ದನ್ನು ಅಪಘಾತ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಆದಕಾರಣ ಮೃತನ ಕುಟುಂಬದವರಿಗೆ ಪರಿಹಾರ ನೀಡುವುದು ತಮ್ಮ ಹೊಣೆಯಲ್ಲ ಎಂಬ ವಿಮಾ ಕಂಪನಿಯ ವಾದವನ್ನ ಹೈಕೋರ್ಟ್ ತಿರಸ್ಕರಿಸಿದೆ. ಮರದ ಕೊಂಬೆ ಬಿದ್ದು ಚಾಲಕ ಸಾವನ್ನಪ್ಪಿದರೆ ಅಥವಾ ಗಾಯಗೊಂಡ ಸಂದರ್ಭದಲ್ಲಿ ವಾಹನದ ವಿಮಾ ಪಾಲಿಸಿಯು ವಿಮಾದಾರ-ಚಾಲಕ ಎಂಬುದಾಗಿ ರಿಸ್‌್ಕ ಕವರ್ ಆಗಿದ್ದ ಪಕ್ಷದಲ್ಲಿ ವಿಮಾ ಕಂಪನಿಯು ಪ್ರಕರಣವನ್ನು ಮೋಟಾರು ಅಪಘಾತ ಎಂಬುದಾಗಿ ಪರಿಗಣಿಸಿ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಓಲಾ ಉಬರ್ ಗೆ ಬಿಗ್ ರಿಲೀಫ್, ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ
ಪ್ರಕರಣದ ವಿವರ: ಶ್ಯಾಮ್‌ರಾವ್ ಪಾಟೀಲ್ ಅವರು, 2006ರ ಜು.2ರಂದು ದ್ವಿಚಕ್ರ ವಾಹನದಲ್ಲಿ ಬೆಳಗಾವಿಯ ಸಲ್ಪೆವಾಡಿಯಿಂದ ಮಹಾರಾಷ್ಟ್ರದ ಗರ್ಗೋಟಿ ನಡುವೆ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ನೀಲಗಿರಿ ಮರದ ಕೊಂಬೆ ತಲೆ ಮೇಲೆ ಬಿದ್ದು ಶ್ಯಾಮ್‌ರಾವ್ ಸಾವನ್ನಪ್ಪಿದ್ದರು. ಹಾಗಾಗಿ, ಮೃತನ ಪತ್ನಿ, ತಂದೆ ಮತ್ತು ಮಕ್ಕಳು ಪರಿಹಾರ ಕೋರಿ ನ್ಯಾಯಾಧೀಕರಣಕ್ಕೆ ಅರ್ಜಿ ಸಲ್ಲಿಸಿದ್ದರು. ಮೃತನ ಕುಟುಂಬದವರಿಗೆ ವಾರ್ಷಿಕ ಶೇ.6ರಷ್ಟುಬಡ್ಡಿದರದಲ್ಲಿ 3.62 ಲಕ್ಷ ರು. (ಘಟನೆ ನಡೆದ ದಿನದಿಂದ ಪರಿಹಾರದ ಹಣ ನೀಡುವ ದಿನದವರೆಗೆ) ಪರಿಹಾರ ಪಾವತಿಸುವಂತೆ ದ್ವಿಚಕ್ರ ವಾಹನಕ್ಕೆ ವಿಮಾ ಸೌಲಭ್ಯ ಕಲ್ಪಿಸಿದ್ದ ವಿಮಾ ಕಂಪನಿಗೆ ನಿರ್ದೇಶಿಸಿ 2011ರ ಫೆ.5ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ವಿಮಾ ಕಂಪನಿ ಪರ ವಕೀಲರು, ನೀಲಗಿರಿ ಮರದ ದೊಡ್ಡ ಕೊಂಬೆ ಬಿದ್ದ ಪರಿಣಾಮ ದ್ವಿಚಕ್ರ ವಾಹನ ಚಾಲಕ ಸಾವನ್ನಪ್ಪಿರುವ ಘಟನೆಯನ್ನು ಮೋಟಾರು ವಾಹನ ಅಪಘಾತವೆಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಮೃತ ಶ್ಯಾಮ್‌ರಾವ್ ದ್ವಿಚಕ್ರ ವಾಹನ ಮಾಲೀಕರಾಗಿರಲಿಲ್ಲ. ಅವರ ಪುತ್ರಿ ವಾಹನ ಮಾಲೀಕರಾಗಿದ್ದಾರೆ. ಪುತ್ರಿಯ ವಾಹನದಲ್ಲಿ ಪ್ರಯಾಣಿಸುವಾಗ ಘಟನೆ ನಡೆದಿರುವ ಕಾರಣ ಮೃತನು ವಿಮೆಯ ಫಲಾನುಭವಿಯಾಗಲಾರ. ಹಾಗಾಗಿ, ಪರಿಹಾರ ಮೊತ್ತ ಪಾವತಿಸುವಂತೆ ನ್ಯಾಯಾಧೀಕರಣ ವಿಮಾ ಕಂಪನಿಗೆ ನೀಡಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಮೃತನು ತನ್ನ ಪುತ್ರಿಯ ದ್ವಿಚಕ್ರ ವಾಹನ ಚಾಲನೆ ವೇಳೆ ಘಟನೆ ನಡೆದು ಸಾವನ್ನಪ್ಪಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಮೃತನು ‘ಥರ್ಡ್ ಪಾರ್ಟಿ’ (ಮೂರನೇ ವ್ಯಕ್ತಿ) ಎಂದು ಪರಿಗಣಿಸಲಾಗದು. ಆದರೆ, ಪರಿಹಾರ ಘೋಷಿಸದಿರಲು ಚಾಲಕನ ನಿರ್ಲಕ್ಷ್ಯ ಚಾಲನೆಯೇ ಮಾನದಂಡವಲ್ಲ. ವೈಯಕ್ತಿಕ ಅಪಘಾತ ವಿಮಾ ಪಾಲಿಸಿ ‘ಮಾಲಿಕ ಕಮ್ ಚಾಲಕ’ನಿಗೆ ಒಳಗೊಂಡ ಕಾರಣ ಒಂದು ಲಕ್ಷ ರು. ಪರಿಹಾರವನ್ನು ವಿಮಾ ಕಂಪನಿ ಪಾವತಿಸಬೇಕಾಗುತ್ತದೆ ಎಂದು ಆದೇಶಿಸಿದೆ.
ವಿಜಯಪುರ ಪಾಲಿಕೆ ಎಲೆಕ್ಷನ್: ತಡೆಯಾಜ್ಞೆ ಕೋರಿ ಅರ್ಜಿ ವಜಾಗೊಳಿಸಿದ ಕಲಬುರ್ಗಿ ಹೈಕೋರ್ಟ್ ಪೀಠ
ನಂತರ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದ ಹೈಕೋರ್ಟ್, ನ್ಯಾಯಾಧಿಕರಣ ಘೋಷಿಸಿದ 3.62 ಲಕ್ಷ ರು. ಪರಿಹಾರ ಮೊತ್ತವನ್ನು ಮಾರ್ಪಡಿಸಿದೆ. ಮೃತನ ಕುಟುಂಬದವರು (ಕ್ಲೇಮುದಾರರು) ವಾರ್ಷಿಕ ಶೇ.7.5ರಷ್ಟುಬಡ್ಡಿದರದಲ್ಲಿ ಒಂದು ಲಕ್ಷ ರು. ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ವಿಮಾ ಕಂಪನಿ, ಈ ಮೊತ್ತವನ್ನು ಆರು ವಾರದಲ್ಲಿ ಕ್ಲೇಮುದಾರರಿಗೆ ಪಾವತಿಸಬೇಕು ಎಂದು ಆದೇಶಿಸಿದೆ.