Asianet Suvarna News Asianet Suvarna News

ಇಬ್ಬರು ಕಂಟ್ರಾಕ್ಟರ್‌ಗಳ ಆತ್ಮಹತ್ಯೆ: ಗುತ್ತಿಗೆದಾರರಿಗೆ ಹಣ ನೀಡದ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಗುತ್ತಿಗೆ ಹಣ ಬಾಕಿ ಪಾವತಿ ಮಾಡುವ ಕುರಿತಂತೆ ಹೈಕೋರ್ಟ್‌ ಆದೇಶ ಪಾಲಿಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಮೆಸರ್ಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ।ಪಿ.ಬಿ.ವರಾಳೆ ಹಾಗೂ ನ್ಯಾ। ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

High Court Slams Government of Karnataka for Not Paying Contractors grg
Author
First Published Nov 30, 2023, 4:05 AM IST | Last Updated Nov 30, 2023, 4:05 AM IST

ಬೆಂಗಳೂರು(ನ.30):  ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಸರ್ಕಾರ ಹೇಳಿರುವಂತೆ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಬಾಕಿ ಹಣ ಬಿಡುಗಡೆ ಮಾಡುವುದರಲ್ಲಿಯೇ ಹಿರಿತನವನ್ನು ಏಕೆ ಅನುಸರಿಸಬೇಕು? ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು ಎಂದು ಕಟುವಾಗಿ ನುಡಿದಿದೆ.

ಗುತ್ತಿಗೆ ಹಣ ಬಾಕಿ ಪಾವತಿ ಮಾಡುವ ಕುರಿತಂತೆ ಹೈಕೋರ್ಟ್‌ ಆದೇಶ ಪಾಲಿಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಮೆಸರ್ಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ।ಪಿ.ಬಿ.ವರಾಳೆ ಹಾಗೂ ನ್ಯಾ। ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.

ಠಾಣೆಗಳು ರಿಯಲ್‌ ಎಸ್ಟೇಟ್‌ ಒಪ್ಪಂದ ಕೇಂದ್ರಗಳಾಗಿವೆ: ಪೊಲೀಸರ ಧೋರಣೆ ಕಟುವಾಗಿ ಟೀಕಿಸಿದ ಹೈಕೋರ್ಟ್‌

ವಿಚಾರಣೆಗೆ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಅವರಿಗೆ, ಕೆಲವು ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆ ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಹಣ ಪಾವತಿಗೆ ಷರತ್ತುಗಳನ್ನು ಒಡ್ಡುವುದು ಹಾಗೂ ಅನಗತ್ಯ ವಿಳಂಬ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಗುತ್ತಿಗೆದಾರರನ್ನು ಮೂಲೆಗುಂಪು ಮಾಡಿ ಬಾಕಿ ಪಾವತಿಗೆ ಬಿಬಿಎಂಪಿ ಹಾಗೂ ಸರ್ಕಾರ ಅನುಸರಿಸುತ್ತಿರುವ ವಿಧಾನವೇ ನ್ಯಾಯಾಲಯಕ್ಕೆ ತಿಳಿಯುತ್ತಿಲ್ಲ. ನಿಮ್ಮ ಬಳಿ ಹಣವಿಲ್ಲವೆ? ಹಣ ಇಲ್ಲವಾದರೆ ಹೇಳಿ ಬಿಡಿ. ಬಾಕಿ ಪಾವತಿಯಲ್ಲೂ ಹಿರಿತನ ಅನುಸರಿಸುವುದಕ್ಕೆ ನಿಮ್ಮ ಬಳಿ ಮಾರ್ಗಸೂಚಿ ಇದೆಯೇ? ಹಿರಿತನ ಏಕೆ ಎಂಬ ಬಗ್ಗೆ ಉತ್ತರಿಸಬೇಕು’ ಎಂದು ನ್ಯಾಯಪೀಠ ಪ್ರಶ್ನಿಸಿತು.

‘ಅರ್ಜಿದಾರರು ಗುತ್ತಿಗೆ ಪಡೆದ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ಅವರು ಕೆಲಸವನ್ನು ಮಧ್ಯದಲ್ಲಿಯೇ ಕೈಬಿಟ್ಟಿದ್ದಾರೆ ಎಂದು ಹೇಳಲು ಯಾವುದೇ ದಾಖಲೆಗಳಿಲ್ಲ. ಕಾಮಗಾರಿ ಪೂರ್ಣಗೊಳಿಸಿ ಸಾಕಷ್ಟು ಸಮಯ ಕಳೆದ ನಂತರ ಅರ್ಜಿದಾರರು ಬಾಕಿ ಹಣಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ನ್ಯಾಯಾಲಯ 2023ರ ಅ.30ರ ಮಧ್ಯಂತರ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದ್ದರೂ ಬಾಕಿ ಪಾವತಿಗೆ ಹಿಂದೆ-ಮುಂದೆ ನೋಡಲಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಹಣ ಪಾವತಿಸದೆ ಕಚೇರಿಗೆ ಕಚೇರಿಗೆ ಅಲೆದಾಡಿಸುವುದು ಸರಿಯೇ?’ ಎಂದು ನ್ಯಾಯಪೀಠ ಕೇಳಿತು.

ಸರ್ಕಾರಿ ವಕೀಲರು ಕೆಲವು ನಕಲಿ ಬಿಲ್ ವಿಚಾರ ಪ್ರಸ್ತಾಪಿಸಿದಾಗ ನ್ಯಾಯಾಲಯ, ‘ಅದಕ್ಕೂ ಈ ಅರ್ಜಿದಾರರಿಗೂ ಸಂಬಂಧವಿಲ್ಲ. ಒಂದು ವೇಳೆ ನೀವು ಸ್ವಚ್ಛಗೊಳಿಸುವ (ಕ್ಲೀನ್ ಅಪ್) ಕಾರ್ಯಾಚರಣೆ ಆರಂಭಿಸಿದರೆ ಅದನ್ನು ಮೊದಲು ನಿಮ್ಮ ಮನೆಯಿಂದ ಆರಂಭಿಸಿ. ನೀವು ನಿಮ್ಮ ಅಧಿಕಾರಿಗಳ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದೀರಾ? ಹಾಗಿದ್ದರೆ ಹೇಳಿ, ರಾಜ್ಯ ಸರ್ಕಾರ ಸ್ವಲ್ಪ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕಷ್ಟೆ’ ಎಂದು ನ್ಯಾಯಪೀಠ ತೀಕ್ಷ್ಣವಾಗಿ ನುಡಿಯಿತು.

ಅಸ್ಪಷ್ಟ ದಾಖಲೆ ನೆಪಕ್ಕೆ ಕೋಟಾ ನಿರಾಕರಣೆ ಸಲ್ಲದು: ಹೈಕೋರ್ಟ್‌ ಅಭಿಪ್ರಾಯ

ಬಿಬಿಎಂಪಿ ಪರ ವಕೀಲರು, ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದಾಗ, ಹಿಂದಿನ ಆದೇಶದಲ್ಲಿ ಉಲ್ಲೇಖಿಸಿದಂತೆ ರಾಜ್ಯ ಸರ್ಕಾರವೇ ಇಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಸೂಕ್ತ ಮಾರ್ಗಸೂಚಿಗಳನ್ನು ಹೊರಡಿಸಬೇಕಿದೆ ಎಂದು ಸೂಚಿಸಿದ ನ್ಯಾಯಪೀಠ ವಿಚಾರಣೆಯನ್ನು ಡಿ.12ಕ್ಕೆ ಮುಂದೂಡಿತು.

ಈ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ರಾಜ್ಯ ನಗರಾಭಿವೃದ್ಧಿ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಲೆಕ್ಕಾಧಿಕಾರಿ ವಾಣಿ, ಬಿಬಿಎಂಪಿ ಮಲ್ಲೇಶ್ವರಂ ವಿಭಾಗದ ಕಾರ್ಯಕಾರಿ ಎಂಜಿನಿಯರ್ ಜೈಶಂಕರ್ ಮತ್ತಿತರರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Latest Videos
Follow Us:
Download App:
  • android
  • ios